ಬೆಂಗಳೂರು : ಕರ್ನಾಟಕದ ಪ್ರಸಿದ್ಧ ಗಿಟಾರ್ ಕಲಾವಿದ ಗಿಟಾರ್ ಶ್ರೀನಿವಾಸ್ ಎಂದೇ ಪ್ರಸಿದ್ಧರಾಗಿದ್ದ ಶ್ರೀನಿವಾಸ್ ಆಚಾರ್ ದಮ್ಮೂರು ಮಂಗಳವಾರ (ನ.10) ನಿಧನರಾಗಿದ್ದಾರೆ.
ಮೂಲತಃ ರಾಯಚೂರಿನವರಾದ ಶ್ರೀನಿವಾಸ್ ಅವರಿಗೆ 61 ವರ್ಷ ವಯಸ್ಸಾಗಿತ್ತು. ಆರ್ಕೆಸ್ಟ್ರಾಗಳಿಂದ ವೃತ್ತಿ ಆರಂಭಿಸಿ ಎಂಭತ್ತರ ದಶಕದ ಕೊನೆಯಲ್ಲಿ ಬೆಂಗಳೂರಿಗೆ ಬಂದು ನೆಲೆಸಿದ್ದ ಶ್ರೀನಿವಾಸ್ ದೇಶ- ವಿದೇಶಗಳಲ್ಲಿ ಗಿಟಾರ್ ನುಡಿಸುವ ಮೂಲಕ ಪ್ರಸಿದ್ಧರಾಗಿದ್ದರು. ಪ್ರಸಿದ್ಧ ಗಾಯಕರಾದ ಎಸ್.ಪಿ. ಬಾಲಸುಬ್ರಮಣ್ಯ, ಸಿ.ಅಶ್ವತ್ಥ , ನರಸಿಂಹ ನಾಯಕ್, ಮಂಜುಳಾ ಗುರುರಾಜ್ ಮತ್ತಿತರ ದಿಗ್ಗಜರೊಡನೆ ಸಹಕಲಾವಿದರಾಗಿ ಕಾರ್ಯಕ್ರಮಗಳನ್ನು ನೀಡಿದ್ದರು. ಸಾವಿರಾರು ಧ್ವನಿಸುರುಳಿಗಳು, ಕೆಲವು ಚಲನಚಿತ್ರಗಳಿಗೂ ಕೆಲಸ ಮಾಡಿದ್ದಾರೆ. ಎದೆ ತುಂಬಿ ಹಾಡಿದೆನು, ಸರೆಗಮಪ ಮತ್ತಿತರ ಪ್ರಸಿದ್ದ ಟಿವಿ ಶೋಗಳಲ್ಲಿ ಖಾಯಂ ಕಲಾವಿದರಾಗಿ ಗಿಟಾರ್ ನುಡಿಸಿದ್ದರು. ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.