- ಸಿವಿಲ್ ಕೋರ್ಟ್ಗಳ ಆದೇಶದ ಪ್ರಮಾಣೀಕೃತ ಪ್ರತಿ ಪರಿಗಣನೆಗೆ ಹೈಕೋರ್ಟ್ ಸೂಚನೆ
ಬೆಂಗಳೂರು: ಸಕ್ಷಮ ಸಿವಿಲ್ ನ್ಯಾಯಾಲಯವು ಒಮ್ಮೆ ನೋಂದಾಯಿತ ದಾಖಲೆಯನ್ನು ರದ್ದುಗೊಳಿಸಿ ತೀರ್ಪು ನೀಡಿದ ನಂತರ ಅದನ್ನು ಋಣಭಾರ ಪ್ರಮಾಣಪತ್ರ (ಇಸಿ ಸರ್ಟಿಫಿಕೇಟ್) ಮತ್ತು ಸಂಬಂಧಿತ ದಾಖಲೆಗಳಲ್ಲಿ ನಮೂದಿಸುವುದು ಉಪನೋಂದಾಣಾಧಿಕಾರಿ ಕರ್ತವ್ಯವಾಗಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ನಗರದ ಕೆ.ಆ್ಯಂಟನಿಸಾಮಿ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ. ಅರ್ಜಿದಾರರು ಸಲ್ಲಿಸುವ ಕೋರ್ಟ್ ಆದೇಶದ ಪ್ರಮಾಣೀಕೃತ ಪ್ರತಿಯನ್ನು ಪರಿಗಣಿಸಿ ನೋಂದಣಾಧಿಕಾರಿ ಕಾರ್ಯನಿರ್ವಹಿಸಬೇಕು. ನ್ಯಾಯಾಲಯದಿಂದ ನೇರ ಸಂದೇಶ ಬಂದಿಲ್ಲ ಎಂದು ಕರ್ತವ್ಯದಿಂದ ಹಿಂದೆ ಸರಿಯುವಂತಿಲ್ಲ ಎಂದು ಹೇಳಿದೆ.
ಅರ್ಜಿದಾರರು ಬಿಲ್ಡರ್ ಒಬ್ಬರ ಜತೆ ಮಾಡಿಕೊಂಡಿದ್ದ ಜಂಟಿ ಅಭಿವೃದ್ಧಿ ಒಪ್ಪಂದ (ಜೆಡಿಎ) ಮತ್ತು ಜನರಲ್ ಪವರ್ ಆ್ ಅಟಾರ್ನಿ (ಜಿಪಿಎ) ಅನ್ನು ಸಿವಿಲ್ ನ್ಯಾಯಾಲಯವು ರದ್ದುಗೊಳಿಸಿತ್ತು. ಈ ತೀರ್ಪಿನ ಪ್ರತಿಯನ್ನು ಮಹದೇವಪುರ ಸಬ್ರಿಜಿಸ್ಟ್ರಾರ್ ಕಚೇರಿಗೆ ಸಲ್ಲಿಸಿದಾಗ, ನ್ಯಾಯಾಲಯದಿಂದ ನೇರ ಸಂವಹನ ಬಂದಿಲ್ಲ ಮತ್ತು ಹೈಕೋರ್ಟ್ ನಿರ್ದೇಶನವಿಲ್ಲ ಎಂಬ ಕಾರಣ ನೀಡಿ ದಾಖಲೆಗಳಲ್ಲಿ ಬದಲಾವಣೆಗೆ ನಿರಾಕರಿಸಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ನೋಂದಣಾಧಿಕಾರಿಯ ಈ ವರ್ತನೆಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ಸಿವಿಲ್ ನ್ಯಾಯಾಲಯದ ಪ್ರಮಾಣೀಕೃತ ಪ್ರತಿಗಳು ಅಧಿಕೃತ ದಾಖಲೆಗಳಾಗಿವೆ. ಅದರಲ್ಲಿನ ನಿರ್ದೇಶನಗಳನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳು ಹಿಂಜರಿಯಬಾರದು ಎಂದು ನಿರ್ದೇಶನ ನೀಡಿದೆ. ಈ ಬಗ್ಗೆ ಹಲವಾರು ದೂರುಗಳು ದಾಖಲಾಗುತ್ತಿರುವುದನ್ನು ಪರಿಗಣಿಸಿರುವ ನ್ಯಾಯಾಲಯ ಮಾರ್ಗಸೂಚಿ ಪ್ರಕಟಿಸಿದೆ.
ಮಾರ್ಗಸೂಚಿಯಲ್ಲಿ ಏನಿದೆ?
- ನೋಂದಾಯಿತ ದಾಖಲೆ ರದ್ದುಗೊಳಿಸಿದ 4 ವಾರದೊಳಗೆ ತೀರ್ಪಿನ ಪ್ರತಿಯನ್ನು ಸಂಬಂಧಿಸಿದ ಸಬ್ರಿಜಿಸ್ಟ್ರಾರ್ ಕಚೇರಿಗೆ ಸಿವಿಲ್ ಕೋರ್ಟ್ಗಳು ಕಳುಹಿಸಿಕೊಡಬೇಕು.
- ನ್ಯಾಯಾಲಯದಿಂದ ಆದೇಶ ಪ್ರತಿ ಬಂದಾಗ ಅಥವಾ ಅರ್ಜಿದಾರರು ನೇರವಾಗಿ ತೀರ್ಪಿನ ಪ್ರಮಾಣೀಕೃತ ಪ್ರತಿ ನೀಡಿದಾಗ, ನೋಂದಣಾಧಿಕಾರಿಗಳು ಅದನ್ನು ಪರಿಶೀಲಿಸಿ 4 ವಾರದೊಳಗೆ ಜಾರಿಗೊಳಿಸಬೇಕು.
- ದಾಖಲೆ ರದ್ದತಿ ಬಗ್ಗೆ ಸಿವಿಲ್ ಕೋರ್ಟ್ ತೀರ್ಪು ನೀಡಿದ ಮೇಲೆ ಹೈಕೋರ್ಟ್ನ ಪ್ರತ್ಯೇಕ ಆದೇಶಕ್ಕಾಗಿ ಕಾಯಬಾರದು.