ವಿಧಾನಸೌಧ 
ರಾಜ್ಯ

ವಂಶವೃಕ್ಷ ಗೊಂದಲ ಪರಿಹಾರಕ್ಕೆ ಮಾರ್ಗಸೂಚಿ

ಬೆಂಗಳೂರು: ದೈನಂದಿನ ವ್ಯವಹಾರಗಳಿಗೆ ಅಗತ್ಯವಿರುವ ವಂಶವೃಕ್ಷ ಪ್ರಮಾಣ ಪತ್ರಕ್ಕೆ ಕಂದಾಯ ಇಲಾಖೆ ಮಾರ್ಗಸೂಚಿ ಹೊರಡಿಸಿದ್ದು, ಅರ್ಜಿದಾರನ ಮತ್ತು ಅಧಿಕಾರಿಗಳ ಜವಾಬ್ದಾರಿಯನ್ನು ಸ್ಪಷ್ಟವಾಗಿ ಉಲ್ಲೇಖಿಸಿದೆ. ಇಲ್ಲಿಯವರೆಗಿದ್ದ ಗೊಂದಲ ಬಗೆಹರಿಸುವ ಪ್ರಯತ್ನವನ್ನು ಸರ್ಕಾರ ಮಾಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಿಂಚಣಿ ಸೌಲಭ್ಯ ಪಡೆಯಲು, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ವತ್ತುಗಳ ವಾರಸುದಾರಿಕೆ ಖಾತೆ ಬದಲಾವಣೆ, ಜೀವಿತ ಸದಸ್ಯರ ದೃಢೀಕರಣ ಪತ್ರ ಪಡೆಯಲು ವಂಶವೃಕ್ಷ ಅಗತ್ಯ. ಈ ಸೇವೆನ್ನು ಆನ್‌ಲೈನ್‌ನಲ್ಲಿ ಪಡೆಯಲು ಅನುಸರಿಸಬೇಕಾದ ಕ್ರಮ ಮತ್ತು ಪರಿಶೀಲಿಸಬೇಕಾದ ದಾಖಲೆಗಳ ಬಗ್ಗೆ ಇಲಾಖೆ ಮಾರ್ಗಸೂಚಿ ಹೊರಡಿಸಿದೆ.
ಅರ್ಜಿದಾರರು ಕಡ್ಡಾಯವಾಗಿ 100 ರೂ. ಛಾಪಾ ಕಾಗದದಲ್ಲಿ ನೋಟರಿ ಮಾಡಿಸಿ ತನ್ನ ವಂಶವೃಕ್ಷದ ಅಫಿಡವಿಟ್ ಅನ್ನು ಮತ್ತು ಆಧಾರ್ ಕಾರ್ಡ್ ಪ್ರತಿ ಮತ್ತು ಕುಟುಂಬದ ಜೀವಂತ ಸದಸ್ಯರ ಆಧಾರ್/ ಎಪಿಕ್ ಕಾರ್ಡ್, ಪಾಸ್ ಪೋರ್ಟ್, ಡಿಎಲ್, ಪಾನ್ ಕಾರ್ಡ್, ಜನನ ಪ್ರಮಾಣ ಪತ್ರ, ದೃಢೀಕೃತ ಶಾಲಾ ದಾಖಲಾತಿ ಇದರಲ್ಲಿ ಒಂದನ್ನು ಸಲ್ಲಿಸಬೇಕಾಗುತ್ತದೆ.
ಅರ್ಜೀದಾರರ ಪಾಸ್‌ಪೋರ್ಟ್ ಅಳತೆ ಪೋಟೋವನ್ನು ಜತೆಗೆ ಕುಟುಂಬದಲ್ಲಿ ಪೌತಿಯಾದವರಿಗೆ ಡಿಜಿಟಲ್ ಮರಣ ಪ್ರಮಾಣ ಪತ್ರ ಅಥವಾ ದೃಢೀಕೃತ ಭೌತಿಕ ಮರಣ ಪ್ರಮಾಣ ಪತ್ರದೊಂದಿಗೆ ನಾಡ ಕಚೇರಿ, ಗ್ರಾಮ ಒನ್ ಸೇವಾ ಕೇಂದ್ರ, ಕರ್ನಾಟಕ ಒನ್ ಸೇವಾ ಕೇಂದ್ರ, ಬಾಪೂಜಿ ಸೇವಾ ಕೇಂದ್ರ ಆನ್‌ಲೈನ್ ನಾಗರೀಕ ಪೋರ್ಟಾಲ್‌ನಲ್ಲಿ ಸಲ್ಲಿಸಬಹುದು. ಈ ವೇಳೆ ಅರ್ಜಿದಾರ ಆಧಾರ್ ಕಡ್ಡಾಯವಾಗಿ ಒಟಿಪಿ ಅಥವಾ ಬಯೋಮೆಟ್ರಿಕ್ ಮೂಲಕ ಇ-ಕೆವೈಸಿ ಮಾಡಬೇಕು. ಕುಟುಂಬದಲ್ಲಿ ಮೃತ ಸದಸ್ಯರ ಮರಣ ಪ್ರಮಾಣ ಪತ್ರ ಇದ್ದರೇ ಒದಗಿಸಬೇಕು. ಭೌತಿಕ ಮರಣ ಪ್ರಮಾಣ ಪತ್ರ ಇದ್ದರೇ ಪಿಡಿಎ್ನಲ್ಲಿ ಅಪ್‌ಲೋಡ್ ಮಾಡಬೇಕು.ಈ ಎರಡೂ ಇಲ್ಲದೆ ಇದ್ದರೇ ಯಾವುದಾದರೂ ಒಂದು ಗುರುತಿನ ಚೀಟಿ ಪಡೆದು ಗ್ರಾಮ ಆಡಳಿತಾಧಿಕಾರಿ ಕ್ಷೇತ್ರ ಪರಿಶೀಲನೆ ನಡೆಸಿ ಗ್ರಾಮಸ್ಥರ ಹೇಳಿಕೆ, ವಿಡಿಯೋ, ಕೈಬರವಣಿಗೆ ಮಹಜರ್ ಮಾಡಿ ವರದಿ ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಆದೇಶದಲ್ಲಿದೆ.
ಅರ್ಜಿ ಸಲ್ಲಿಸುವ ಸಮಯದಲ್ಲಿ ಡಾಟಾ ಎಂಟ್ರಿ ಆಪರೇಟರ್ ಅಥವಾ ಅರ್ಜಿದಾರರು ಅಫಿಡವಿಟ್ ದಿನಾಂಕ ಮತ್ತು ಇ-ಸ್ಟ್ಯಾಂಪ್ ಸಂಖ್ಯೆ ನಮೂದಿಸಬೇಕು. ಕುಟುಂಬ ಸದಸ್ಯರ ಹೆಸರು, ಸಂಬಂಧ, ವಯಸ್ಸು, ವೈವಾಹಿಕ ಸ್ಥಿತಿ ಉಲ್ಲೇಖಿಸಬೇಕು. ವಂಶವೃಕ್ಷ ಪಡೆಯುತ್ತಿರುವ ಉದ್ದೇಶ, ಅರ್ಜಿದಾರನ ವಿಳಾಸದಲ್ಲಿ ವಾಸವಿರುವ ಅವಧಿ, ಪಾಸ್‌ಪೋರ್ಟ್ ಪೋಟೋ ಅಪ್‌ಲೋಡ್ ಮಾಡಬೇಕು.
ಆನ್‌ಲೈನ್‌ನಲ್ಲಿ ಸ್ವೀಕರಿಸುವ ಅರ್ಜಿಗಳನ್ನು ಗ್ರಾಮ ಆಡಳಿತಾಧಿಕಾರಿ, ಖುದ್ದು ಆ ವಿಳಾಸಕ್ಕೆ ಭೇಟಿ ನೀಡಿ ಅರ್ಜಿಯಲ್ಲಿ ನಮೂದಿಸಿರುವ ಕುಟುಂಬ ಸದಸ್ಯರ ವಿವರಗಳ ಮತ್ತು ದಾಖಲೆ ಪರಿಶೀಲನೆ ನಡೆಸಬೇಕು. ಮತ್ತಷ್ಟು ದಾಖಲೆ ಅಗತ್ಯ ಇದ್ದರೇ ಸ್ಥಳದಲ್ಲಿಯೇ ಪಡೆದು ಅಪ್‌ಲೋಡ್ ಮಾಡಬೇಕು. ಅರ್ಜಿ ತಿರಸ್ಕರಣೆ ಮಾಡಲು ಸ್ಪಷ್ಟ ಅಭಿಪ್ರಾಯದೊಂದಿಗೆ ರಾಜಸ್ವ ನಿರೀಕ್ಷಕರಿಗೆ ಶಿಾರಸ್ಸು ಮಾಡಬೇಕು. ಅರ್ಜಿದಾರರು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಇರುವ ಮಾಹಿತಿಗೂ ತಂತ್ರಾಂಶದಲ್ಲಿ ನಮೂದಿಸಿರುವ ಮಾಹಿತಿಗೂ ನ್ಯೂನ್ಯತೆ ಇದ್ದಲ್ಲಿ ತಿದ್ದುಪಡಿ ಮಾಡಲು ಗ್ರಾಮ ಆಡಳಿತಾಧಿಕಾರಿಗೆ ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ಸುಳ್ಳು ಹೇಳಿಕೆ ಅಥವಾ ದಾಖಲೆ ಕೊಟ್ಟರೇ ಅರ್ಜಿದಾರನ ವಿರುದ್ಧ ಅಫಿಡವಿಟ್ ಆಧಾರದ ಮೇಲೆ ಕೇಸ್ ದಾಖಲಿಸಲಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಉಪ ತಹಸೀಲ್ದಾರ್ ಅಂತಿಮ ನಿರ್ಧಾರ

ಗ್ರಾಮ ಆಡಳಿತಾಧಿಕಾರಿಗಳು ಲಾಗಿನ್‌ನಲ್ಲಿ ಬರುವ ಅರ್ಜಿಗಳನ್ನು ರಾಜಸ್ವ ನಿರೀಕ್ಷಕರು ಪರಿಶೀಲನೆ ನಡೆಸಿ ಹೆಚ್ಚುವರಿ ದಾಖಲೆ ಅಗತ್ಯ ಇದ್ದರೇ ಪಡೆದು ಅಪ್‌ಲೋಡ್ ಮಾಡಬಹುದು. ತಿರಸ್ಕರಿಸುವ ಕುರಿತು ಸ್ಪಷ್ಟ ಅಭಿಪ್ರಾಯದೊಂದಿಗೆ ಉಪ ತಹಸೀಲ್ದಾರ್‌ಗೆ ಶಿಾರಸ್ಸು ಮಾಡಬಹುದು. ಇವರು ಕೂಲಂಕುಷವಾಗಿ ಪರಿಶೀಲನೆ ನಡೆಸಿ 14 ದಿನಗಳ ಒಳಗೆ ಅರ್ಜಿದಾರರಿಗೆ ಡಿಜಿಟಲ್ ಹಿಂಬರಹ, ಇಮೇಲ್‌ನಲ್ಲಿ ಮಾಹಿತಿ ನೀಡಲಿದ್ದಾರೆ. ಅರ್ಜಿದಾರರು ಸಹ 35 ದಿನಗಳ ಒಳಗೆ ಮೇಲ್ಮನವಿ ಪ್ರಾಧಿಕಾರವಾದ ಉಪ ವಿಭಾಗಾಧಿಕಾರಿಗೆ(ಎಸಿ) ಸಲ್ಲಿಸಬಹುದು. 90 ದಿನಗಳ ಒಳಗಾಗಿ ಎಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು.

ದತ್ತು ಮಗುವಿನ ಅರ್ಹತೆ ಏನು :

ಕುಟುಂಬದ ಯಾವುದೇ ಸದಸ್ಯನನ್ನು ದತ್ತು ತೆಗೆದುಕೊಂಡಿದ್ದಲ್ಲಿ ಸದಸ್ಯನು ಜೈವಿಕ ಪೋಷಕರನ್ನು ವಂಶವೃಕ್ಷಕ್ಕೆ ಅರ್ಹನಾಗಿರುವುದಿಲ್ಲ. ಏಕೆಂದರೇ ಹಿಂದೂ ದತ್ತಕ ಮತ್ತು ಸಂರಕ್ಷಣ ಕಾಯ್ದೆ 1956ರ ಅನ್ವಯ ದತ್ತಕಕ್ಕೆ ಪಡೆದ ಮಗುವನ್ನು ದತ್ತು ಪಡೆದ ಪೋಷಕರ ಮಗುವೆಂದೇ ಪರಿಗಣಿಸಬೇಕು. ಈ ಮಗು ಜೈವಿಕ ತಂದೆ-ತಾಯಿಯಿಂದ ಸಂಪೂರ್ಣವಾಗಿ ಹಕ್ಕುಗಳನ್ನು ಕಳೆದುಕೊಳ್ಳುತ್ತಾರೆ.

ಇಬ್ಬರು, ಪತಿ/ಪತ್ನಿ ಇದ್ದರೇ :

ಕುಟುಂಬದ ಸದಸ್ಯನು ಇಬ್ಬರು ಪತಿ/ಪತ್ನಿ ಕುರಿತು ಸಮರ್ಪಕ ದಾಖಲಾತಿ, ಸಾಕ್ಷಿ ಇಲ್ಲದೇ ತಕರಾರನ್ನು ತೆಗೆದಲ್ಲಿ ಸಿವಿಲ್ ಕೋರ್ಟ್‌ನಿಂದ ಪಡೆದ ಡಿಕ್ರಿಯಿದ್ದಲ್ಲಿ ಮಾತ್ರವೇ ವಂಶವೃಕ್ಷಕ್ಕೆ ಸೇರಿಸಿಕೊಳ್ಳಬಹುದು. ಈ ಬಗ್ಗೆ ತೀರ್ಮಾನಕ್ಕೆ ಬರುವ ಅಧಿಕಾರ ಕಂದಾಯ ಇಲಾಖೆಗಿಲ್ಲ.

ಮರಣ ಪ್ರಮಾಣ ಪತ್ರ ಇಲ್ಲದಿದ್ದರೇ :

ಪಾಸ್‌ಪೋರ್ಟ್, ಡಿಎಲ್, ಪಾನ್, ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಿಂದ ನೀಡಲಾದ ಐಡಿ ಕಾರ್ಡ್, ವಿದ್ಯಾರ್ಥಿ ಗುರುತಿನ ಚೀಟಿ, ಅಂಕಪಟ್ಟಿ, ಶಾಲಾ ಟಿಸಿ, ಪಡಿತರ, ಸಾಮಾಜಿಕ ಭದ್ರತೆ ದಾಖಲೆ, ಅಂಗವಿಕಲ ಗುರುತಿನ ಚೀಟಿ, ಯಶಸ್ವಿನ ಕಾರ್ಡ್, ಎನ್‌ಆರ್‌ಇಜಿಎ ಉದ್ಯೋಗ ಕಾರ್ಡ್, ಹಿರಿಯ ನಾಗರಿಕ ಐಡಿ ಕಾರ್ಡ್, ಎಪಿಕ್ ಕಾರ್ಡ್, ವಿದ್ಯುತ್ ಮೀಟರ್ ಆರ್‌ಆರ್ ಸಂಖ್ಯೆ, ಜನನ ಪ್ರಮಾಣ ಪತ್ರ, ಆರೋಗ್ಯ ವಿಮಾನ ಯೋಜನೆಗಳ ಸ್ಮಾರ್ಟ್ ಕಾರ್ಡ್‌ನಲ್ಲಿ ಯಾವುದಾದರು ಒಂದು ಕೊಡಬಹುದು. ಇದರಲ್ಲಿ ಯಾವುದೂ ಇಲ್ಲದಿದ್ದರೇ ಗ್ರಾಮ ಆಡಳಿತಾಧಿಕಾರಿ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಮಹಜರ್ ಮಾಡಿ ಸಲ್ಲಿಸಬೇಕು.