ಬಾಗೂರಲ್ಲಿ ಆಯೋಜಿಸಿದ್ದ ಕುಂದುಕೊರತೆ ಸಭೆಯನ್ನು ಗಣ್ಯರು ಉದ್ಘಾಟಿಸಿದರು. 
ರಾಜ್ಯ

ಮಹಿಳೆಯರ ಆರ್ಥಿಕ ಬಲವರ್ಧನೆಗೆ ಗ್ಯಾರಂಟಿ ಪೂರಕ

ಪ್ರಮುಖ ಮುಖ್ಯಾಂಶಗಳು

  • ತಾಲೂಕು ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಎಲ್.ಪಿ.ಪ್ರಕಾಶ್‌ಗೌಡ
  • ತಾಲೂಕು ಪಂಚಾಯಿತಿ, ತಾಲೂಕು ಗ್ಯಾರಂಟಿ ಯೋಜನಾ ಸಮಿತಿ ಹಾಗೂ ಬಾಗೂರು ಗ್ರಾಮ ಪಂಚಾಯಿತಿ
ಚನ್ನರಾಯಪಟ್ಟಣ: ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗುವ ಮೂಲಕ ಮಹಿಳೆಯರ ಆರ್ಥಿಕ ಬಲವರ್ಧನೆಗೆ ಪೂರಕವಾಗಿವೆ ಎಂದು ತಾಲೂಕು ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಎಲ್.ಪಿ.ಪ್ರಕಾಶ್‌ಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕು ಪಂಚಾಯಿತಿ, ತಾಲೂಕು ಗ್ಯಾರಂಟಿ ಯೋಜನಾ ಸಮಿತಿ ಹಾಗೂ ಬಾಗೂರು ಗ್ರಾಮ ಪಂಚಾಯಿತಿ ವತಿಯಿಂದ ಬಾಗೂರು ಹೋಬಳಿ ಕೇಂದ್ರದ ಕುರುಹಿನ ಶೆಟ್ಟಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ 4ನೇ ಗ್ಯಾರಂಟಿ ಕುಂದುಕೊರತೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಗ್ಯಾರಂಟಿಗಳ ಅನುಷ್ಠಾನದಲ್ಲಿ ಚನ್ನರಾಯಪಟ್ಟಣ ತಾಲೂಕು ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಪಡೆದಿದೆ. ಈಗಾಗಲೇ ತಾಲೂಕಿನ 4 ಹೋಬಳಿ ಕೇಂದ್ರಗಳಲ್ಲಿ ಸಭೆ ನಡೆಸಲಾಗಿದ್ದು, ಮುಂಬರುವ ದಿನಗಳಲ್ಲಿ ಕಸಬಾ ಹಾಗೂ ದಂಡಿಗನಹಳ್ಳಿ ಹೋಬಳಿ ಕೇಂದ್ರಗಳಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುತ್ತದೆ ಎಂದರು.
ತಾಲೂಕಿನಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 79,77,97 ಫಲಾನುಭವಿಗಳಿಗೆ ಸುಮಾರು 1.56 ಕೋಟಿ ರೂ., ಗೃಹಜ್ಯೋತಿ ಯೋಜನೆಯಡಿ 70,840 ಫಲಾನುಭವಿಗಳಿದ್ದು 2.54 ಕೋಟಿ ರೂ., ಅನ್ನಭಾಗ್ಯ ಯೋಜನೆಯಡಿ 25,47,79 ಸದಸ್ಯರಿದ್ದು 4.33 ಕೋಟಿ ರೂ. ಹಾಗೂ ಯುವನಿಧಿ ಯೋಜನೆಯಡಿ ತಾಲೂಕಿನ ಒಟ್ಟು 698 ವಿದ್ಯಾರ್ಥಿಗಳಿಗೆ 21 ಲಕ್ಷ ರೂ. ಹಣ ಸಂದಾಯವಾಗುತ್ತಿದೆ. ಶಕ್ತಿ ಯೋಜನೆಯಡಿ 3,30,22,796 ಮಹಿಳೆಯರು ಪ್ರಯಾಣ ಮಾಡಿದ್ದು, ಸುಮಾರು 2.63 ಕೋಟಿ ರೂ. ಹಣ ಬಿಡುಗಡೆಯಾಗಿದೆ. ಒಟ್ಟಾರೆ ತಾಲೂಕಿನಲ್ಲಿ ಶೇ.99 ರಷ್ಟು ಗುರಿ ಹೊಂದಲಾಗಿದೆ ಎಂದರು.
ಮುಂಬರುವ ದಿನಗಳಲ್ಲಿ 5 ಗ್ಯಾರಂಟಿ ಸಮರ್ಪಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಫಲಾನುಭವಿಗಳ ತರಬೇತಿ ಕಾರ್ಯಕ್ರಮವನ್ನು ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಹಂತ ಹಂತವಾಗಿ ನಡೆಸಲು ಯೋಜನೆ ರೂಪಿಸಲಾಗಿದೆ ಎಂದರು.
ತಾಲೂಕು ಪಂಚಾಯಿತಿ ಇಒ ಜಿ.ಆರ್.ಹರೀಶ್ ಮಾತನಾಡಿ, ಸರ್ಕಾರದ ನಿಯಮಾವಳಿ ಪ್ರಕಾರ ತಾಲೂಕಿನಲ್ಲಿ 5 ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಶಕ್ತಿಮೀರಿ ಯೋಜನಾ ಸಮಿತಿ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಶ್ರಮಿಸುವ ಮೂಲಕ ಶೇ.99 ರಷ್ಟು ಗುರಿ ಹೊಂದಲಾಗಿದೆ. ಪ್ರತಿ ಮಾಸಿಕ 26 ಕೋಟಿ ರೂ.ಗೂ ಹೆಚ್ಚು ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಬಿಡುಗಡೆ ಮಾಡುತ್ತಿದೆ. ತಾಲೂಕಿನಲ್ಲಿ ಕೆಲವು ಸಣ್ಣಪುಟ್ಟ ನ್ಯೂನತೆಗಳಿಂದ ಗೃಹಲಕ್ಷ್ಮಿ ಹಾಗೂ ಗೃಹ ಜ್ಯೋತಿ ಯೋಜನೆಗಳಲ್ಲಿ ಕೆಲವು ಫಲಾನುಭವಿಗಳಿಗೆ ಅನುದಾನ ದೊರಕುತ್ತಿಲ್ಲ. ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ನುಗ್ಗೇಹಳ್ಳಿ-ಬಾಗೂರು ಹೋಬಳಿ ಕೇಂದ್ರಗಳ ಮಾರ್ಗದಲ್ಲಿ ಬಸ್ ಸಂಚಾರ ಆರಂಭಿಸುವಂತೆ ನಿಗಮದ ಅಧಿಕಾರಿಗಳಿಗೆ ಸಭೆಯ ಮೂಲಕ ತಿಳಿಸಲಾಯಿತು. ಸಭೆಯಲ್ಲಿ ಗ್ಯಾರಂಟಿ ಸಮಿತಿ ಸದಸ್ಯರಾದ ಸುರೇಶ್, ನವೀನ್‌ಕುಮಾರ್, ರಂಗಸ್ವಾಮಿ, ವಿಜಿ ಅಶೋಕ್, ಪ್ರಕಾಶ್, ನಿಶ್ಚಲ್, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಗಿರೀಶ್, ಸೆಸ್ಕ್‌ನ ನುಗ್ಗೇಹಳ್ಳಿ ಉಪ ವಿಭಾಗದ ಸಹಾಯಕ ಇಂಜಿನಿಯರ್ ಎಚ್.ಡಿ.ವಜ್ರಕುಮಾರ್, ಅಭಿವೃದ್ಧಿ ಅಧಿಕಾರಿಗಳಾದ ಎಸ್.ಜೆ.ರಮೇಶ್, ದೇವರಾಜ್ ಇತರರಿದ್ದರು.