ಕಲಬುರಗಿ: ನಗರದ ಕೇಂದ್ರ ಬಸ್ ನಿಲ್ದಾಣ ಹಾಗೂ ಸೂಪರ್ ಮಾರ್ಕೆಟ್ ಬಸ್ ನಿಲ್ದಾಣಗಳಿಗೆ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ ಹಾಗೂ ಉಪಾಧ್ಯಕ್ಷ ವಿಜಯಕುಮಾರ ಕಟ್ಟಿಮನಿ ನೇತೃತ್ವದ ತಂಡ ಬುಧುವಾರದಂದು ಜಂಟಿ ಭೇಟಿ ನೀಡಿತು. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ’ ಯೋಜನೆಯ ಯಶಸ್ವಿ ಜಾರಿ ಹಾಗೂ ಪ್ರಯಾಣಿಕರ ಮೂಲಭೂತ ಸೌಲಭ್ಯಗಳ ಕುರಿತು ಸಮಿತಿಯು ಸಮಗ್ರ ಪರಿಶೀಲನೆ ನಡೆಸಿತು.
ಭೇಟಿಯ ವೇಳೆ ಬಸ್ ನಿಲ್ದಾಣದ ಆವರಣದಲ್ಲಿ ಭದ್ರತೆಗಾಗಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳು, ಮಹಿಳೆಯರ ವಿಶ್ರಾಂತಿ ಕೊಠಡಿಗಳು, ಶಿಶುಗಳಿಗೆ ಹಾಲುಣಿಸುವ ಕೊಠಡಿ (ಫೀಡಿಂಗ್ ರೂಮ್) ಹಾಗೂ ಮಹಿಳಾ ಶೌಚಾಲಯಗಳ ವ್ಯವಸ್ಥೆಯನ್ನು ಸಮಿತಿಯು ಸೂಕ್ಷ್ಮವಾಗಿ ಅವಲೋಕಿಸಿತು. ಅಲ್ಲದೆ, ನಿಲ್ದಾಣದ ಕ್ಯಾಂಟೀನ್ ಮತ್ತು ಬೇಕರಿ ಮಳಿಗೆಗಳಿಗೆ ಭೇಟಿ ನೀಡಿ ಆಹಾರದ ಗುಣಮಟ್ಟ ಹಾಗೂ ಸ್ವಚ್ಛತೆಯನ್ನು ಪರಿಶೀಲಿಸಿತು.
ಇದೇ ಸಂದರ್ಭದಲ್ಲಿ ‘ಶಕ್ತಿ’ ಯೋಜನೆಯಡಿ ಉಚಿತ ಪ್ರಯಾಣದ ಸೌಲಭ್ಯ ಪಡೆಯುತ್ತಿರುವ ಮಹಿಳಾ ಪ್ರಯಾಣಿಕರೊಂದಿಗೆ ಸಮಿತಿಯ ಪದಾಧಿಕಾರಿಗಳು ನೇರ ಸಂವಾದ ನಡೆಸಿದರು. ಸಂವಾದದಲ್ಲಿ ಮಹಿಳೆಯರು, "ಶಕ್ತಿ ಯೋಜನೆಯಿಂದ ನಮ್ಮ ದೈನಂದಿನ ಸಂಚಾರ ಸುಗಮಗೊಂಡಿದ್ದು, ಆರ್ಥಿಕವಾಗಿ ದೊಡ್ಡ ಮಟ್ಟದ ಉಳಿತಾಯವಾಗುತ್ತಿದೆ" ಎಂದು ಸರ್ಕಾರದ ಜನಪರ ಯೋಜನೆಯ ಬಗ್ಗೆ ತೀವ್ರ ಸಂತೋಷ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಸಮಿತಿಯ ಅಧ್ಯಕ್ಷರು, ಸಾರ್ವಜನಿಕರಿಗೆ ಗುಣಮಟ್ಟದ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮತ್ತು ಅಗತ್ಯ ಸುಧಾರಣೆಗಳನ್ನು ಕಾಲಮಿತಿಯೊಳಗೆ ಅಳವಡಿಸಿಕೊಳ್ಳಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಯೋಜನೆಯು ಅರ್ಹ ಫಲಾನುಭವಿಗಳಿಗೆ ಯಾವುದೇ ತೊಂದರೆಯಾಗದಂತೆ ಸುಗಮವಾಗಿ ತಲುಪಲು ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು.
ಈ ಸಂದರ್ಭದಲ್ಲಿ ಕೆಕೆಆರ್ ಟಿಸಿ ಕಲಬುರಗಿ ವಿಭಾಗದ ನಿಯಂತ್ರಣಾಧಿಕಾರಿಗಳಾದ ಎಸ್.ಜಿ. ಗಂಗಾಧರ, ಬಸವಂತಪ್ಪ ಎಮ್., ಸಂಚಾರ ಅಧಿಕಾರಿಗಳಾದ ಸಿ.ಎಸ್. ಹೊಸಮನಿ, ಶಾರದಾದೇವಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶಮೀಯುದ್ದಿನ್ ಶಾಹೀನ್, ಘಟಕ ವ್ಯವಸ್ಥಾಪಕ ಅನಿಲಕುಮಾರ ಹಾಗೂ ನಿಲ್ದಾಣದ ಮೇಲ್ವಿಚಾರಕ ಗಿರೀಶ ಸೇರಿದಂತೆ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.