ಇಂಡಿ ತಾಲೂಕಿನ ಬರಗುಡಿ ಗ್ರಾಮದ ರತ್ನಾಬಾಯಿ ಕೋಳಿ ಗೃಹಲಕ್ಷ್ಮಿ ಹಣದಲ್ಲಿ ಹಿಟ್ಟಿನ ಗಿರಣಿ ನಡೆಸುತ್ತಿರುವುದು. 
ರಾಜ್ಯ

ಗೃಹಿಣಿಯ ಕೈ ಹಿಡಿದ ಗೃಹಲಕ್ಷ್ಮೀ

ಪ್ರಮುಖ ಮುಖ್ಯಾಂಶಗಳು

  • ಕೂಡಿಟ್ಟ ಹಣದಲ್ಲಿ ಹಿಟ್ಟಿನ ಗಿರಣಿ
  • ಸ್ವಾವಲಂಬಿ ಬದುಕಿಗೆ ಸಹಕಾರಿ
ಇಂಡಿ: ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮೀ ಹಣದಲ್ಲಿ ಮಹಿಳೆಯೋರ್ವಳು ಹಿಟ್ಟಿನ ಗಿರಣಿ ಸ್ಥಾಪಿಸಿ ಬದುಕು ಕಟ್ಟಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲೂಕಿನ ಬರಗುಡಿ ಗ್ರಾಮದ ರತ್ನಾಬಾಯಿ ಕೋಳಿ ಎಂಬ 50 ವರ್ಷದ ಮಹಿಳೆ ಗೃಹಲಕ್ಷ್ಮೀ ಹಣ ಸಂಗ್ರಹಿಸಿ ಮತ್ತು ತಾನು ಕೂಲಿ ಮಾಡಿ ಕೂಡಿಟ್ಟ ಸ್ವಂತದ ಹಣದಿಂದ ಹಿಟ್ಟಿನ ಗಿರಣಿ ಪ್ರಾರಂಭಿಸಿದ್ದಾರೆ.
ಬರಗುಡಿ ಗ್ರಾಮದ ಊರ ಹೊರಗೆ ಲಚ್ಯಾಣ ರಸ್ತೆಯಲ್ಲಿ  ಹಿಟ್ಟಿನ ಗಿರಣಿ ಇರಲಿಲ್ಲ. ಹೀಗಾಗಿ ಗೋಧಿ, ಜೋಳ ಬೀಸಲು ಗ್ರಾಮದಲ್ಲಿ ದೂರದವರೆಗೆ ಹೋಗಬೇಕಾಗಿತ್ತು. ಅದನ್ನು ಮನಗಂಡ ಈ ಮಹಿಳೆ ರತ್ನಾಬಾಯಿ 20 ತಿಂಗಳ ಗೃಹಲಕ್ಷ್ಮೀ ಹಣ ಮತ್ತು ತನ್ನ ಸ್ವಂತ ಹಣ ಸೇರಿಸಿ ‘ಸೆಕೆಂಡ್ ಹ್ಯಾಂಡ್’ ಹಿಟ್ಟಿನ ಗಿರಣಿ ಖರೀದಿಸಿ ಪ್ರಾರಂಭಿಸಿದ್ದಾಳೆ.
ರತ್ನಾಬಾಯಿ ಪ್ರತಿದಿನ ಆ ಹಿಟ್ಟಿನ ಗಿರಣಿ ಮುಖಾಂತರ ಒಂದು ಸಾವಿರ ರೂ. ಗಳಿಸುತ್ತಿದ್ದು ವಿದ್ಯುತ್ ಬಿಲ್ ಸೇರಿ ಮತ್ತಿತರ ಖರ್ಚು ತೆಗೆದು ಪ್ರತಿದಿನ 700 ರೂ.ವರೆಗೆ ಉಳಿಸಿಕೊಳ್ಳುತ್ತಿದ್ದಾರೆ.
 ರತ್ನಾಬಾಯಿ ದಂಪತಿಗೆ ಇಬ್ಬರು ಮಕ್ಕಳಿದ್ದು, ಒಬ್ಬ ಪುತ್ರ ಬೆಂಗಳೂರಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಇನ್ನೊಬ್ಬ ವಿಜಯಪುರದ ಖಾಸಗಿ ಕಂಪನಿಯಲ್ಲಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ.
ಮುಖ್ಯಮಂತ್ರಿ ಕಾರ್ಯಾಲಯದಿಂದ ಸಕ್ಸೆಸ್ ಸ್ಟೋರಿ ಚಿತ್ರೀಕರಣಕ್ಕಾಗಿ ಬೆಂಗಳೂರಿನ ತಂಡ ಬಂದು ವಿಡಿಯೋ ಮಾಡಿಕೊಂಡು ಹೋಗಿದ್ದು ವಿಶೇಷ.
"

20 ತಿಂಗಳ ಗಹಲಕ್ಷ್ಮೀ ಹಣ ಕೂಡಿಟ್ಟಿದ್ದೆ. ಜೊತೆಗೆ ನನ್ನ ದುಡಿಮೆಯ ಹಣ ಸೇರಿಸಿ ಒಂದು ಹಿಟ್ಟಿನ ಗಿರಣಿ ಖರೀದಿ ಮಾಡಿದ್ದೇನೆ. ಇದೀಗ ಭರ್ಜರಿಯಾಗಿ ನಡೆಯುತ್ತಿದೆ. ಮಹಿಳೆಯರಿಗೆ ಸರ್ಕಾರ ನೀಡಿದ ಯೋಜನೆ ನನಗಂತೂ ಸದ್ಬಳಕೆಯಾಗಿದೆ. ಸರ್ಕಾರಕ್ಕೆ ಅಭಿನಂದಿಸುವೆ. 

 ರತ್ನಾಬಾಯಿ ಕೋಳಿ, ಫಲಾನುಭವಿ.