- ಮೇಯರ್-ಉಪ ಮೇಯರ್ ಚುನಾವಣೆ ಆ.7ಕ್ಕೆ
- ಸಂಸತ್ ಅಧಿವೇಶನ ಹಿನ್ನೆಲೆಯಲ್ಲಿ ಮುಂದೂಡುವ ಸಾಧ್ಯತೆ
ಕಲಬುರಗಿ: ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಸ್ಥಾನದ ಚುನಾವಣೆಗೆ ಆ.7ರಂದು ಮುಹೂರ್ತ ಫಿಕ್ಸ್ ಆಗಿದೆ. ಮೇಯರ್ ಸ್ಥಾನ ಬಿಸಿಎ ಮತ್ತು ಉಪ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಪಾಳಯದಲ್ಲಿ ಲೆಕ್ಕಾಚಾರಗಳು ಗರಿಗೆದರಿವೆ.
ಆಡಳಿತಾರೂಢ ಕಾಂಗ್ರೆಸ್ ಬಹುಮತದ ಸಂಖ್ಯಾಬಲ ಹೊಂದಿದ್ದರಿಂದ ತಲೆಬಿಸಿ ಕಡಿಮೆ. ನಿಗದಿಯಾದ ಮೀಸಲಾತಿ ಪ್ರಕಾರ ಎರಡೂ ಸ್ಥಾನಗಳಿಗೆ ನಾ ಮುಂದು, ತಾ ಮುಂದು ಎಂದು ಆಕಾಂಕ್ಷಿಗಳು ನಾಯಕರ ದುಂಬಾಲು ಬಿದ್ದಿದ್ದಾರೆ.
ಮೇಯರ್&ಉಪ ಮೇಯರ್ ಜತೆ ಆರೋಗ್ಯ, ಶಿಕ್ಷಣ, ಹಣಕಾಸು ಮತ್ತು ಲೆಕ್ಕಪತ್ರ ಸ್ಥಾಯಿ ಸಮಿತಿಗಳಿಗೂ ಇಂದಿರಾ ಸ್ಮಾರಕ ಭವನದಲ್ಲಿ ಆ.7ರಂದು ಮಧ್ಯಾಹ್ನ 3.30ಕ್ಕೆ ಚುನಾವಣಾ ಪ್ರಕ್ರಿಯೆ ನಡೆಯಲಿದೆ. ಬೆಳಗ್ಗೆ 10ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರುವಾಗಲಿದ್ದು, ಸಂಬಂಧಿತ ಮತದಾರರಿಗೆ ನೋಟಿಸ್ ನೀಡಲಾಗಿದೆ.
ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಾಲಿಕೆಯಲ್ಲೂ ಬಹುಮತಕ್ಕೆ ಬೇಕಾಗುವ ಸಂಖ್ಯಾಬಲ ಹೊಂದಿದೆ. 28 ಪಕ್ಷದ ಸದಸ್ಯರಿದ್ದಾರೆ. ಜತೆಗೆ ಸಂಸದ ರಾಧಾಕೃಷ್ಣ ದೊಡ್ಡಮನಿ, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ರ್ಖಗೆ, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಕನೀಜ್ ಫಾತಿಮಾ, ವಿಧಾನ ಪರಿಷತ್ ಸದಸ್ಯರಾದ ಜಗದೇವ ಗುತ್ತೇದಾರ್, ತಿಪ್ಪಣ್ಣಪ್ಪ ಕಮಕನೂರ, ಡಾ.ಚಂದ್ರಶೇಖರ ಪಾಟೀಲ್ ಹುಮನಾಬಾದ್ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಹೀಗಾಗಿ ಕಾಂಗ್ರೆಸ್ ಸಂಖ್ಯಾಬಲ 35ಕ್ಕೆ ಏರಿಕೆಯಾಗಲಿದೆ. ಮೇಯರ್ ಸ್ಥಾನ ಬಿಸಿಎಗೆ ಮೀಸಲಾಗಿರುವ ಹಿನ್ನೆಲೆಯಲ್ಲಿ ಸದಸ್ಯರಾದ ಗೋಳಾ, ಅಲಿಖಾನ್, ಸೈಯದ್ ಅಹ್ಮದ್, ಅನುಪಮಾ ಕಮಕನೂರ, ರಾಗಮ್ಮ ಇನಾಮದಾರ್, ಇಮ್ರಾನ್, ಹಮೀದ್, ರಿಯಾಜ್ ಪಟ್ಕೋ, ನಜ್ಮಾ ತಯಾರ್ಅಲಿ ರೇಸ್ನಲ್ಲಿದ್ದಾರೆ. ಉಪ ಮೇಯರ್ ಸ್ಥಾನಕ್ಕೆ ಲತಾ ರವಿ ರಾಠೋಡ್, ರೇಣುಕಾ ಹೋಳ್ಕರ್, ನಿಂಗಮ್ಮ ಕಟ್ಟಿಮನಿ ಇತರರು ರೇಸ್ನಲ್ಲಿದ್ದಾರೆ.
ಪಾಲಿಕೆಯಲ್ಲಿ ಬಿಜೆಪಿ 22 ಪ್ಲಸ್ 1 ಅಂದರೆ 23 ಸಂಖ್ಯಾಬಲ ಹೊಂದಿದೆ. ಜತೆಗೆ ವಿಧಾನ ಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ್, ಶಶೀಲ್ ನಮೋಶಿ ಮತ್ತು ಶಾಸಕ ಬಸವರಾಜ ಮತ್ತಿಮಡು ಮತದಾನದ ಹಕ್ಕು ಹೊಂದಿದ್ದಾರೆ. ಹೀಗಾಗಿ ಸಂಖ್ಯಾಬಲ 26ಕ್ಕೆ ತಲುಪಲಿದೆ. ಮೇಯರ್ ಸ್ಥಾನಕ್ಕೆ ಮಲ್ಲು ಉದನೂರ, ವಿಜಯಕುಮಾರ ಸೇವಲಾನಿ, ದಿಗಂಬರ ನಾಡಗೌಡ, ವೆಂಕಮ್ಮ ಗುತ್ತೇದಾರ್, ಉಪ ಮೇಯರ್ ಸ್ಥಾನಕ್ಕೆ ಶೋಭಾ ದೇಸಾಯಿ, ಶಾಂತಾಬಾಯಿ, ಮೇನಾ ಕಳಸ್ಕರ್, ಪಾರ್ವತಿ ದೇವದುರ್ಗ, ಗಂಗಮ್ಮ ಮುನ್ನಳ್ಳಿ, ಹೊನ್ನಮ್ಮ ಬಾಬು ಇತರರು ಅವಕಾಶ ಸಿಕ್ಕರೆ ಒಂದು ಕೈ ನೋಡಲು ಸಿದ್ಧರಾಗಿದ್ದಾರೆ. ಈ ಮಧ್ಯೆ ಜೆಡಿಎಸ್ನ ನಾಲ್ವರು ಸದಸ್ಯರಲ್ಲಿ ಯಾರು ಯಾವ ಕಡೆ ವಾಲುತ್ತಾರೆ ಎಂಬುದನ್ನು ಕಾದುನೋಡಬೇಕಿದೆ. ಮೇಲಿನ ಹಂತದಲ್ಲಿ ಬಿಜೆಪಿ&ಜೆಡಿಎಸ್ ಒಟ್ಟಾಗಿ ಹೋಗುತ್ತಿದ್ದರೂ ಸ್ಥಳಿಯ ಸಂಸ್ಥೆ ಚುನಾವಣೆಯಲ್ಲಿ ಸದಸ್ಯರು ಕೊನೆಯ ಹಂತದಲ್ಲಿ ಕೈಗೊಳ್ಳುವ ನಿರ್ಧಾರ ಮೇಲೆ ಎಲ್ಲವೂ ಅವಲಂಬಿಸಿದೆ.
ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಆ.8ರಂದು ಪೂರ್ಣಗೊಳ್ಳಲಿದೆ. ಸಂಸತ್ ಅಧಿವೇಶನವೂ ಶುರುವಾಗಿದೆ. ಹೀಗಾಗಿ ಪಾಲಿಕೆ ಚುನಾವಣೆ ಪ್ರಕ್ರಿಯೆಗೆ ತೊಡಕಾಗಬಹುದು ಎಂಬ ಕಾರಣಕ್ಕೆ ದಿನ ಮುಂದೂಡುವ ಸಾಧ್ಯತೆ ದಟ್ಟವಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಹಿರಿಯ ನಾಯಕರು, ಪಾಲಿಕೆ ಕೆಲ ಸದಸ್ಯರು ಚುನಾವಣಾ ಪ್ರಕ್ರಿಯೆ ಮುಂದೂಡುವಂತೆ ಚುನಾವಣಾಧಿಕಾರಿಯೂ ಆಗಿರುವ ಪ್ರಾದೇಶಿಕ ಆಯುಕ್ತರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಮೀಸಲು ಪ್ರಶ್ನಿಸಿ ಹೈಕೋರ್ಟ್ ಮೊರೆ
ಮೇಯರ್ ಸ್ಥಾನದ ಮೀಸಲು ಪ್ರಶ್ನಿಸಿ ಪಾಲಿಕೆ ಸದಸ್ಯೆ ಲತಾ ರವಿ ರಾಠೋಡ್ ಹೈಕೋರ್ಟ್ ಕಲಬುರಗಿ ಪೀಠದ ಮೊರೆ ಹೋಗಿದ್ದಾರೆ. ಮೇಯರ್ ಸ್ಥಾನ ಬಿಸಿಎಗೆ ಮೀಸಲಾಗಿದೆ. 2022ರಲ್ಲಿ 24ನೇ ಅವಧಿಗೆ ಮೇಯರ್ ಸ್ಥಾನ ಎಸ್ಸಿ ಮೀಸಲು ನಿಗದಿಯಾಗಿತ್ತು. ಆದರೆ ಕಾರಣಾಂತರಗಳಿಂದ ಬಂದದ್ದು ಕೈತಪ್ಪಿ ಹೋಗಿದೆ. ಪ್ರತಿ 10 ವರ್ಷಕ್ಕೊಮ್ಮೆ ಮೀಸಲು ಬದಲಾವಣೆ ಆಗಬೇಕು. ಸುಮಾರು 16 ವರ್ಷಗಳಿಂದ ಎಸ್ಸಿ ಮೀಸಲು ಬಂದಿಲ್ಲ. ಹೀಗಾಗಿ ಈ ಬಾರಿಯಾದರೂ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ. ಮೇಯರ್ ಸ್ಥಾನ ಎಸ್ಸಿ (ಮಹಿಳೆ)ಗೂ ಮೀಸಲಾತಿ ದೊರೆತಿಲ್ಲ. ಲತಾ ರಾಠೋಡ್ ಅರ್ಜಿ ಜು.30ರಂದು ವಿಚಾರಣೆಗೆ ಬರಲಿದೆ.
"
ಕಲಬುರಗಿ ಮಹಾನಗರ ಪಾಲಿಕೆಗೆ ಈ ಮೊದಲು ಮೇಯರ್ ಸ್ಥಾನ ಎಸ್ಸಿ ಮೀಸಲು ನಿಗದಿಯಾಗಿತ್ತು. ಕಾರಣಾಂತರಗಳಿಂದ ಕೈಬಿಟ್ಟು ಹೋಗಿದೆ. ಈ ಬಾರಿಯಾದರೂ ಮೀಸಲು ನಿಗದಿ ಮಾಡಿ ಅನುಕೂಲ ಮಾಡಿಕೊಡುವಂತೆ ಕೋರಿ ಕೋರ್ಟ್ ಮೊರೆ ಹೋಗಲಾಗಿದೆ. ಜತೆಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೂ ಮನವಿ ಸಲ್ಲಿಸಲಾಗಿದೆ.
— > ಲತಾ ರವಿ ರಾಠೋಡ್ ಸದಸ್ಯೆ, ಮಹಾನಗರ ಪಾಲಿಕೆ ಕಲಬುರಗಿ
"
ಕಲಬುರಗಿ ಪಾಲಿಕೆ ಮೇಯರ್, ಉಪ ಮೇಯರ್ ಸ್ಥಾನಗಳಿಗೆ ಮೀಸಲು ಅಧಿಸೂಚನೆ ಹೊರಡಿಸಲಾಗಿದೆ. ಆ.7ರಂದು ಚುನಾವಣೆ ನಿಗದಿಯಾಗಿದ್ದು, ಅಗತ್ಯ ಸಿದ್ಧತೆಯೂ ನಡೆದಿದೆ. ಆದರೆ ಸಂಸತ್ ಅಧಿವೇಶನ ಹಿನ್ನೆಲೆಯಲ್ಲಿ ಚುನಾವಣಾ ಪ್ರಕ್ರಿಯೆ ಕೆಲದಿನ ಮುಂದೂಡುವ ಸಾಧ್ಯತೆ ಇದೆ. ಆದರೆ ಇನ್ನೂ ಯಾವುದೇ ನಿರ್ಧಾರ ಆಗಿಲ್ಲ.
— > ಜಹೀರಾ ನಸೀಮ್ ಚುನಾವಣಾಧಿಕಾರಿ