Grow trees for the survival of future generations.
ಕೋಲಾರ: ತೋರಿಕೆಗೆ ಮಾತ್ರ ಗಿಡಗಳನ್ನು ನೆಡುವುದಾಗಬಾರದು, ಮುಂದಿನ ಪೀಳಿಗೆಯ ಉಳಿವಿಗಾಗಿ ಮರಗಳನ್ನು ಬೆಳೆಸುವ ಕೆಲಸ ಆಗಬೇಕು ಎಂದು ಕೋಮುಲ್ ನಿರ್ದೇಶಕ ಚಲುವನಹಳ್ಳಿ ನಾಗರಾಜ್ ಹೇಳಿದರು.
ತಾಲೂಕಿನ ಚಲುವನಹಲ್ಳಿ ಹಾಲು ಉತ್ಪಾದಕರ ಸಂಘದ ಆವರಣದಲ್ಲಿ ರಾಜ್ಯ ಸಹಕಾರ ಮಹಾ ಮಂಡಳಿ, ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತ, ಸಹಕಾರ ಇಲಾಖೆ, ಡಿಸಿಸಿ ಬ್ಯಾಂಕ್, ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಸಹಕಾರ ಸಪ್ತಾಹ ಪ್ರಯುಕ್ತ ಸಸಿ ನೆಟ್ಟು ಚಾಲನೆ ನೀಡಿದರು.
ಗಿಡಗಳನ್ನು ನೆಡುವುದು ಪರಿಸರ ಸ್ನೇಹಿ ಉಪಕ್ರಮ. ನಾವು ಎಚ್ಚೆತ್ತು ಗಿಡ&ಮರಗಳನ್ನು ಉಳಿಸಿ&ಬೆಳೆಸದಿದ್ದರೆ ಮುಂದಿನ ದಿನಗಳಲ್ಲಿ ಉಸಿರಾಡಲು ಗಾಳಿಗೂ ದುಡ್ಡು ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗಿಡಗಳನ್ನು ನೆಡುವುದರಿಂದ ಪ್ರಕೃತಿ ರಕ್ಷಿಸುವ ಕೆಲಸ ಸಹಕಾರಿ ಸಂಘಗಳ ಸಾಮಾಜಿಕ ಬದ್ಧತೆ ತೋರಿಸುತ್ತದೆ. ಸಹಕಾರಿ ಸಂಘದ ಆವರಣ, ಶಾಲಾ ಆವರಣ, ಗ್ರಾಮದ ಬಡಾವಣೆ, ಸಾರ್ವಜನಿಕ ಉದ್ಯಾನದಲ್ಲಿ ಗಿಡಮರಗಳನ್ನು ಬೆಳೆಸುವ ಜವಾಬ್ದಾರಿ ಸಮುದಾಯದ ಮೇಲಿದೆ ಎಂದು ತಿಳಿಸಿದರು.
ಗ್ರಾಮದ ವಾತಾವರಣಕ್ಕೆ ತಕ್ಕಂತೆ ನೆರಳು ನೀಡುವ ಹಾಗೂ ಸುಲಭವಾಗಿ ಬೆಳೆಯುವ ಗಿಡಗಳಾದ ಬೇವಿನ ಮರ, ನುಗ್ಗೆ, ಹೊಂಗೆ, ಅಥವಾ ಹಣ್ಣಿನ ಗಿಡಗಳನ್ನು ಆಯ್ಕೆ ಮಾಡಿ ಸಂಘದ ಅಧ್ಯಕ್ಷರು, ನಿರ್ದೇಶಕರು ಹಾಗೂ ಸ್ಥಳಿಯ ರೈತರನ್ನು ಆಹ್ವಾನಿಸಬೇಕು.
ಗಿಡಗಳನ್ನು ನೆಡುವಾಗ ಮಣ್ಣಿಗೆ ಅಗತ್ಯವಿರುವಷ್ಟು ಸಾವಯವ ಗೊಬ್ಬರವನ್ನು ಬೆರೆಸಿ. ನೆಟ್ಟ ನಂತರ ಗಿಡಕ್ಕೆ ನೀರು ಹಾಯಿಸಬೇಕು. ಗಿಡಗಳನ್ನು ಪ್ರಾಣಿಗಳಿಂದ ಹಾಳಾಗದಂತೆ ಸುತ್ತಲೂ ರಕ್ಷಣಾ ಬೇಲಿ ಅಳವಡಿಸಿ ಪೋಷಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಸಹಕಾರಿ ಯೂನಿಯನ್ ಕಾರ್ಯದರ್ಶಿ ಭಾರತಿ, ಲೆಕ್ಕಾಧಿಕಾರಿ ರವಿ, ಮುಖಂಡರಾದ ಬಿ.ನಾಗರಾಜಪ್ಪ, ಸಿ.ತಿಮ್ಮೇಗೌಡ, ಸಿ.ಗೋವಿಂದಗೌಡ, ಎಂ.ರಮೇಶ್, ಮಮತಾ, ವೆಂಕಟೇಶಪ್ಪ, ಅಪ್ಪೋಜಪ್ಪ, ರಂಗಪ್ಪ ಇದ್ದರು.