ಹುಮನಾಬಾದ್ ತಾಪಂ ಕಚೇರಿಯಲ್ಲಿ ಗುರುವಾರ ತೋಟಗಾರಿಕೆ ಇಲಾಖೆಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ರೈತರಿಗೆ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ತರಕಾರಿ ಬೀಜದ ಕಿಟ್ ವಿತರಿಸಿದರು. ವಿಶ್ವನಾಥ ಜೀಳ್ಳೆ, ವಿಶ್ವನಾಥ ಪಾಟೀಲ್, ಸತೀಶ ನನ್ನೂರೆ ಇತರರಿದ್ದರು
- ರೈತರಿಗೆ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಸಲಹೆ
- ಪರಿಶಿಷ್ಟ ಜಾತಿ-ಪಂಗಡ ರೈತರಿಗೆ ತರಕಾರಿ ಬೀಜ ಕಿಟ್ ವಿತರಣೆ
ಹುಮನಾಬಾದ್: ರೈತರು ಕೃಷಿ ಜತೆ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಮೂಲಕ ಹೆಚ್ಚುವರಿ ಆದಾಯ ಗಳಿಸಬೇಕು ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಸಲಹೆ ನೀಡಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ತೋಟಗಾರಿಕೆ ಇಲಾಖೆಯಿಂದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಗೆ ತರಕಾರಿ ಬೀಜದ ಕಿಟ್ ವಿತರಿಸಿ ಮಾತನಾಡಿದ ಅವರು, ಕೇವಲ ಕೃಷಿಯನ್ನು ಅವಲಂಬಿಸದೆ ತೋಟಗಾರಿಕೆ, ಹೈನುಗಾರಿಕೆ ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಲು ರೈತರು ಮುಂದಾಗಬೇಕು ಎಂದರು.
ತಾಲೂಕಿನಲ್ಲಿ ತೋಟಗಾರಿಕೆ ಬೆಳೆ ಬೆಳೆಯಲು ವಿಪುಲ ಅವಕಾಶವಿದೆ. ಸರ್ಕಾರಿ ಸೌಲಭ್ಯಗಳ ಸದುಪಯೋಗ ಪಡೆದು ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಅಧಿಕಾರಿಗಳು ಸಹ ರೈತರಿಗೆ ಕಾಲಕಾಲಕ್ಕೆ ಸಲಹೆ ಸೂಚನೆ ನೀಡಬೇಕು ಎಂದು ಹೇಳಿದರು.
ಜಿಲ್ಲಾ ತೋಟಗಾರಿಕೆ ಅಧಿಕಾರಿ ವಿಶ್ವನಾಥ ಜಿಳ್ಳೆ ಮಾತನಾಡಿ, ಕೆಕೆಆರ್ಡಿಬಿ ವಿಶೇಷ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರ ಆರ್ಥಿಕ ಸಬಲೀಕರಣ ಮತ್ತು ಪೌಷ್ಟಿಕ ಆಹಾರ ಉತ್ಪಾದನೆಗೆ ಉತ್ತೇಜನ ನೀಡುವ ಉದ್ದೇಶದಿಂದ ತರಕಾರಿ ಬೀಜದ ಕಿಟ್ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಕೃಷಿಕ ಸಮಾಜದ ತಾಲೂಕು ಅಧ್ಯ ವಿಶ್ವನಾಥ ಪಾಟೀಲ್ ಮಾಡಗೂಳ, ಸದಸ್ಯ ಸತೀಶ ನನ್ನೂರೆ, ಲಿಂಗರಾಜ ಪಾಟೀಲ್ ಇತರರಿದ್ದರು.