ಚನ್ನರಾಯಪಟ್ಟಣ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಗೃಹಲಕ್ಷ್ಮಿ ಫಲಾನುಭವಿಗಳನ್ನು ಎಲ್.ಪಿ.ಪ್ರಕಾಶ್‌ಗೌಡ ಅಭಿನಂದಿಸಿದರು. ನವೀನ್, ಜಿ.ಆರ್.ಹರೀಶ್, ಗಿರೀಶ್ ಇತರರಿದ್ದರು.
- ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯಿಂದ ಫಲಾನುಭವಿಗಳ ಸನ್ಮಾನ
- ಗೃಹಲಕ್ಷ್ಮಿ ಯೋಜನೆ ಜಾರಿಯಾಗಿ ಮೂರು ವರ್ಷ ಪೂರ್ಣಗೊಂಡ ಹಿನ್ನಲೆ
ಚನ್ನರಾಯಪಟ್ಟಣ:
ಗೃಹಲಕ್ಷ್ಮಿ ಯೋಜನೆ ಜಾರಿಯಾಗಿ ಮೂರು ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ರಾಜ್ಯ ಸಮಿತಿ ನಿರ್ದೇಶನದಂತೆ ಯೋಜನೆಯ ಸದುಪಯೋಗ ಪಡೆಯುತ್ತಿರುವ ತಾಲೂಕಿನ ಫಲಾನುಭವಿಗಳನ್ನು ಗುರುವಾರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯಿಂದ ಸನ್ಮಾನಿಸಲಾಯಿತು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ 26ನೇ ಮಾಸಿಕ ಸಭೆಯಲ್ಲಿ ಕಸಬಾ ಹೋಬಳಿ ವ್ಯಾಪ್ತಿಯ ಆಯ್ದ 15 ಫಲಾನುಭವಿಗಳನ್ನು ಸನ್ಮಾನಿಸಲಾಯಿತು.
ಅನುಷ್ಠಾನ ಸಮಿತಿ ಅಧ್ಯಕ್ಷ ಎಲ್.ಪಿ.ಪ್ರಕಾಶ್‌ಗೌಡ ಮಾತನಾಡಿ, ರಾಜ್ಯದ ಜನಪ್ರಿಯ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮಿ ಜಾರಿಯಾಗಿ 3ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅನುಷ್ಠಾನ ಸಮಿತಿ ಅಕ್ಷರಾದ ಎಚ್.ಎಂ.ರೇವಣ್ಣ ಅವರ ನಿರ್ದೇಶನದಂತೆ ತಾಲೂಕಿನ 40 ಗ್ರಾಮ ಪಂಚಾಯಿತಿಗಳಲ್ಲಿ ಗಿಡನೆಟ್ಟು, ಆಯ್ದ ಅರ್ಹ ಫಲಾನುಭವಿಗಳನ್ನು ಗೌರವಿಸಲಾಗುತ್ತಿದೆ ಎಂದರು.
ಮುಂದಿನ ವಾರದಿಂದ ತಾಲೂಕಿನ 40 ಗ್ರಾಮ ಪಂಚಾಯಿತಿಗಳಿಗೂ ಭೇಟ ನೀಡಿ ಅಭಿನಂದಿಸುವ ಕಾರ್ಯಕ್ರಮ ಅಯೋಜಿಸಲಾಗುವುದು. ಅತ್ಯಂತ ಜನಪ್ರಿಯ ಯೋಜನೆಯಾಗಿ ರಾಜ್ಯದ ಮಹಿಳೆಯರ ಸ್ವಾವಲಂಬಿ ಬದುಕಿಗೆ ನೆರವಾಗಿರುವ ಗೃಹಲಕ್ಷ್ಮಿ ಯೋಜನೆಗಾಗಿ 81,111 ಫಲಾನುಭವಿಗಳು ನೋಂದಾಯಿಸಿಕೊಡಿದ್ದು, ತಿಂಗಳಿಗೆ 16 ಕೋಟಿ ರೂ.ನಷ್ಟು ಹಣ ಪಡೆಯುತ್ತಿದ್ದಾರೆ. ಬೆಂಗಳೂರು-ಮಂಗಳೂರು ನಡುವೆ ಕೇಂದ್ರಸ್ಥಾನದಲ್ಲಿರುವ ಚನ್ನರಾಯಪಟ್ಟಣದಿಂದ ಲಕ್ಷಾಂತರ ಮಹಿಳೆಯರು ಶಕ್ತಿ ಯೋಜನೆಯ ಲಾಭ ಪಡೆದಿದ್ದಾರೆ. ಪ್ರತಿ ತಿಂಗಳು 8.53 ಲಕ್ಷ ಜನ ಸಂಚಾರ ಮಾಡುವ ಮೂಲಕ 3 ಕೋಟಿ ರೂ.ನಷ್ಟು ಹಣ ಇಲಾಖೆಗೆ ಜಮೆ ಆಗಿದೆ. ಗೃಹಜ್ಯೋತಿಗೆ 72 ಸಾವಿರ ಜನರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
5 ಯೋಜನೆಗಳ ಸಾಕಾರಕ್ಕಾಗಿ ದುಡಿದ ಅಧಿಕಾರಿಗಳಿಗೆ ಇದೇ ವೇಳೆ ಕೃತಜ್ಞತೆ ಸಲ್ಲಿಸಲಾಗುವುದು. ಗ್ಯಾರಂಟಿ ಯೋಜನೆಗಳು ಎಂದಿಗೂ ಸ್ಥಗಿತಗೊಳ್ಳುವುದಿಲ್ಲ 5ವರ್ಷ ಪೂರ್ಣ ಜಾರಿಯಲ್ಲಿರುತ್ತದೆ ಎಂದರು.
ಸಮಿತಿ ಸದಸ್ಯ ನವೀನ್ ಮಾತನಾಡಿ, ಗೃಹಲಕ್ಷ್ಮಿಯರನ್ನು ಅಭಿನಂದಿಸುವ ಕೆಲಸವನ್ನು ಮೊದಲಿಗೆ ಕಸಬಾ ಹೋಬಳಿ, ಪಟ್ಟಣ ವ್ಯಾಪ್ತಿಯಲ್ಲಿ ನಡೆಯುತ್ತಿದ್ದು, ಸರ್ಕಾರ ನೀಡುವ 2ಸಾವಿರ ಹಣವನ್ನು ಉತ್ತಮ ಕೆಲಸಕ್ಕಾಗಿ ಬಳಕೆ ಮಾಡಿಕೊಂಡವರನ್ನು ಗುರುತಿಸಿ ಅಭಿನಂದಿಸಲಾಗುತ್ತಿದೆ ಎಂದರು.
ಸಭೆಯಲ್ಲಿ ಗ್ಯಾರೆಂಟಿ ಅನುಷ್ಠಾನ ಸಮಿತಿ ಸದಸ್ಯ ಕಾರ್ಯದರ್ಶಿ ಜಿ.ಆರ್.ಹರೀಶ್, ತಾಲೂಕು ಪಂಚಾಯಿತಿ ನಿರ್ದೇಶಕ ಗಿರೀಶ್ ಇತರರಿದ್ದರು.