ರೋಹಿಣಿ ಸಿಂಧೂರಿ 
ರಾಜ್ಯ

ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಹಸಿರು ನಿಶಾನೆ

ಪ್ರಮುಖ ಮುಖ್ಯಾಂಶಗಳು

  • ಅನುಮತಿ ನಿರಾಕರಿಸಿದ್ದ ರಾಜ್ಯ ಸರ್ಕಾರದ ಆದೇಶ ರದ್ದುಪಡಿಸಿದ ಹೈಕೋರ್ಟ್​
ಬೆಂಗಳೂರು: ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದಾಗ ನಡೆದಿದೆ ಎನ್ನಲಾದ ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಲೋಕಾಯುಕ್ತಕ್ಕೆ ಅನುಮತಿ ನಿರಾಕರಿಸಿದ್ದ ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್​ ರದ್ದುಪಡಿಸಿದೆ. ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್​ 17ಎ ಅಡಿಯಲ್ಲಿ ರೋಹಿಣಿ ಸಿಂಧೂರಿ ವಿರುದ್ಧ ಪ್ರಾಥಮಿಕ ತನಿಖೆಗೆ ನಾಲ್ಕು ವಾರಗಳ ಒಳಗಾಗಿ ಅನುಮೋದನೆ ನೀಡಬೇಕು ಎಂದು ಹೈಕೋರ್ಟ್​ ಆದೇಶಿಸಿದೆ.
ತನಿಖೆಗೆ ನಿರಾಕರಿಸಿದ್ದ ಸರ್ಕಾರದ ಆದೇಶ ಪ್ರಶ್ನಿಸಿ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಎನ್​.ಆರ್​. ರವಿಚಂದ್ರೇಗೌಡ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು ಈ ಆದೇಶ ನೀಡಿದೆ. ಸಾರ್ವಜನಿಕ ಹಣದ ದುರುಪಯೋಗವಾಗಿರುವ ಬಗ್ಗೆ ಮೇಲ್ನೋಟಕ್ಕೆ ಸಾಕ್ಷ್ಯಾಧಾರಗಳಿರುವುದರಿಂದ ತನಿಖೆಗೆ ಅಡ್ಡಿಪಡಿಸಬಾರದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಇಲಾಖಾ ವಿಚಾರಣೆಯಲ್ಲಿ ಅಧಿಕಾರಿ ದೋಷಮುಕ್ತರಾಗಿದ್ದಾರೆ ಎಂಬ ಕಾರಣ ನೀಡಿ, ಕ್ರಿಮಿನಲ್​ ತನಿಖೆಯ ಪ್ರಾಥಮಿಕ ಹಂತದಿಂದಲೇ ಅವರನ್ನು ರಸಲು ಸಾಧ್ಯವಿಲ್ಲ. ಇಲಾಖಾ ವಿಚಾರಣೆ ಮತ್ತು ಕ್ರಿಮಿನಲ್​ ತನಿಖೆಗಳು ವಿಭಿನ್ನ ಕಾನೂನು ಚೌಕಟ್ಟು ಹೊಂದಿದ್ದು, ಒಂದರ ಫಲಿತಾಂಶ ಇನ್ನೊಂದರ ಮೇಲೆ ಪರಿಣಾಮ ಬೀರಬಾರದು ಎಂದು ನ್ಯಾಯಪೀಠ ಹೇಳಿದೆ.

7.55 ಕೋಟಿ ರೂ. ನಷ್ಟದ ಆರೋಪ:

ಮೈಸೂರು ಜಿಲ್ಲೆಯಲ್ಲಿ ಪ್ಲಾಸ್ಟಿಕ್​ ಮುಕ್ತ ಅಭಿಯಾನದ ಭಾಗವಾಗಿ 14.71 ಲಕ್ಷ ಪರಿಸರ ಸ್ನೇಹಿ ಬಟ್ಟೆ ಚೀಲಗಳನ್ನು ಖರೀದಿಸುವಾಗ ಭ್ರಷ್ಟಾಚಾರ ನಡೆದಿದೆ ಎಂಬುದು ಅರ್ಜಿದಾರರ ಪ್ರಮುಖ ಆರೋಪವಾಗಿದೆ. ಮಾರುಕಟ್ಟೆಯಲ್ಲಿ ಕೇವಲ 13 ರೂ. ಗೆ ಲಭ್ಯವಿದ್ದ ಚೀಲವನ್ನು ಬರೋಬ್ಬರಿ 52 ರೂ. ಗೆ ಖರೀದಿಸಲು ಅಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅನುಮತಿ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.