ಬೆಂಗಳೂರು: ರಾಜ್ಯದ ಶೈಕ್ಷಣಿಕ ಸಂಸ್ಥೆಗಳಲ್ಲಿ ಸಂಘರ್ಷಕ್ಕೆ ಕಾರಣವಾಗಿದ್ದ ಹಿಜಾಬ್ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. 2022ರಲ್ಲಿ ಅಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಹಿಜಾಬ್ ನಿಷೇಧದ ಆದೇಶವನ್ನು ಅಧಿಕೃತವಾಗಿ ಹಿಂಪಡೆದಿದ್ದು, ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಗ್ರೀನ್ ಸಿಗ್ನಲ್ ನೀಡಿದೆ.
ಬೆಂಗಳೂರಿನಲ್ಲಿ ಸಚಿವ ದಿನೇಶ್ ಗುಂಡೂರಾವ್, ಶಾಸಕ ರಿಜ್ವಾನ್ ಅರ್ಷದ್ ಅವರೊಂದಿಗೆ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ಆದೇಶ ಜಾರಿಗೊಳಿಸಿರುವುದಾಗಿ ಹೇಳಿದರು.
ಧಾರ್ಮಿಕ ವಸ್ತುಗಳ ಧರಿಸಲು ಮುಕ್ತ ಅವಕಾಶ
ಸರ್ಕಾರದ ಹೊಸ ಆದೇಶದ ಪ್ರಕಾರ, ಕೇವಲ ಹಿಜಾಬ್ ಮಾತ್ರವಲ್ಲದೆ ವಿದ್ಯಾರ್ಥಿಗಳು ತಮ್ಮ ಧಾರ್ಮಿಕ ನಂಬಿಕೆಯ ಭಾಗವಾಗಿರುವ ಪೇಟ, ಜನಿವಾರ ಹಾಗೂ ರುದ್ರಾಕ್ಷಿಗಳನ್ನು ಧರಿಸಲು ಸಹ ಅನುಮತಿ ನೀಡಲಾಗಿದೆ. "ಇದು ಮಕ್ಕಳ ಹಿತದೃಷ್ಟಿಯಿಂದ ತೆಗೆದುಕೊಂಡ ತೀರ್ಮಾನವಾಗಿದ್ದು, ಶಿಕ್ಷಣದಲ್ಲಿ ತಾರತಮ್ಯ ಇರಬಾರದು" ಎಂದು ಸರ್ಕಾರ ತನ್ನ ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ. ಆದರೆ, ಇದೇ ವೇಳೆ ಕೇಸರಿ ಶಾಲನ್ನು ಧರಿಸಲು ಅವಕಾಶ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಕೇಸರಿ ಶಾಲು ಧಾರ್ಮಿಕ ಅಂತ ಬರೋದಿಲ್ಲ, ಆದ್ದರಿಂದ ಕೇಸರಿ ಶಾಲಿಗೆ ಶಾಲಾ – ಕಾಲೇಜುಗಳಲ್ಲಿ ಅವಕಾಶ ಇಲ್ಲ ಎಂದು ಮಧು ಬಂಗಾರಪ್ಪ ಸ್ಪಷ್ಟನೆ ನೀಡಿದರು.
ಖಂಡನೆ ಮತ್ತು ಸ್ವಾಗತ
ಸರ್ಕಾರದ ಈ ನಡೆಯನ್ನು ಶಾಸಕ ರಿಜ್ವಾನ್ ಅರ್ಷದ್ ಸ್ವಾಗತಿಸಿದ್ದು, "ಸಂವಿಧಾನದ ಆಶಯದಂತೆ ಎಲ್ಲರಿಗೂ ಶಿಕ್ಷಣ ಸಿಗುವಂತಾಗಲು ಈ ತೀರ್ಮಾನ ಸಹಕಾರಿ" ಎಂದು ಧನ್ಯವಾದ ಅರ್ಪಿಸಿದ್ದಾರೆ. ಇತ್ತ ಬಿಜೆಪಿ ಸರ್ಕಾರದ ಈ ಆದೇಶವನ್ನು ತೀವ್ರವಾಗಿ ಖಂಡಿಸಿದೆ. "ಸರ್ಕಾರವು ಶಿಕ್ಷಣ ಸಂಸ್ಥೆಗಳಲ್ಲಿ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಮತ್ತು ಶೈಕ್ಷಣಿಕ ಶಿಸ್ತನ್ನು ಹಾಳು ಮಾಡುತ್ತಿದೆ" ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ, ಈ ಆದೇಶವು ರಾಜ್ಯ ರಾಜಕಾರಣದಲ್ಲಿ ಮತ್ತೆ ಸಂಘರ್ಷದ ಕಿಡಿ ಹೊತ್ತಿಸುವ ಸಾಧ್ಯತೆ ದಟ್ಟವಾಗಿದೆ.