ನೆಲಮಂಗಲದ ಪವಾಡ ಶ್ರೀ ಬಸವಣ್ಣ ದೇವರ ಮಠದ ಮುಖ್ಯರಸ್ತೆಯ ಶ್ರೀ ರಾಮ್ ಬೇಕರಿಯಲ್ಲಿ ಕೇರ್ ಖರೀದಿಸುತ್ತಿರುವ ಸಾರ್ವಜನಿಕರು.
ನೆಲಮಂಗಲ : ಹೊಸ ವರ್ಷಾಚರಣೆಯಲ್ಲಿ ಕೇಕ್ಗಳಿಗೆ ಬೇಡಿಕೆ ಹೆಚ್ಚಿದ್ದು, ನಗರ ಸೇರಿ ತಾಲೂಕಿನಾದ್ಯಂತ ಬೇಕರಿಗಳಲ್ಲಿ ಜನರು ವಿವಿಧ ಬಗೆಯ ಕೇಕ್ಗಳನ್ನು ಖರೀದಿಸಿ ಸಂಭ್ರಮಿಸಿದ್ದಾರೆ.
ಹೊಸ ವರ್ಷದ ಹಿಂದಿನ ದಿನವೇ ಬಹುತೇಕ ಯುವಕರು ಬೇಕರಿಗಳಿಗೆ ತೆರಳಿ ಇಷ್ಟವಾದ ಆಕಾರ ಹಾಗೂ ಗಾತ್ರದ ಕೇಕ್ಗಳನ್ನು ಮುಂಗಡವಾಗಿ ಹಣ ನೀಡಿ ಕಾಯ್ದಿರಿಸಿದ್ದರು. ಬೇಕರಿಗಳಲ್ಲಿ 5ಕೆ.ಜಿ., 4ಕೆ.ಜಿ., 2.ಕೆ.ಜಿ., 1ಕೆ.ಜಿ. ಹಾಗೂ ಅರ್ಧಕೆ.ಜಿ. ತೂಕದ ನೂರಾರು ಕೇಕ್ಗಳು ಸಿದ್ಧಗೊಂಡಿವೆ. ಪ್ರತಿ ಕೆ.ಜಿ.ಗೆ 350ರಿಂದ 600 ರೂಪಾಯಿವರೆಗೆ ಮಾರಾಟವಾಗುತ್ತಿವೆ. ಕ್ರೀಮ್ ಕೇಕ್, ಬಟರ್ಸ್ಕಾಚ್ ಕೇಕ್, ಬ್ಲ್ಯಾಕ್ ಫಾರೆಸ್ಟ್, ಪಿಸ್ತಾ, ಬಾದಾಮ್, ಪೈನಾಪಲ್ ಕೇಕ್ಗಳಿಗೆ ಬೇಡಿಕೆ ಹೆಚ್ಚಿದ್ದು, ಇದರಿಂದ ಬೇಕರಿಗಳ ಮಾಲೀಕರು ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ.
ಯುವಕ, ಯುವತಿಯರು ಹಾಗೂ ಮಕ್ಕಳು ಗುಂಪುಗಳಾಗಿ ಬೇಕರಿಗಳಿಗೆ ಬಂದು ಬಣ್ಣ ಬಣ್ಣದ ಕೇಕ್ಗಳನ್ನು ಖರೀದಿಸುತ್ತಿದ್ದಾರೆ. ಎಲ್ಲರೂ ಮಧ್ಯರಾತ್ರಿ ವೇಳೆಗೆ ತಮ್ಮತಮ್ಮ ಓಣಿಗಳಲ್ಲಿ ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿಕೊಂಡು ಹೊಸ ವರ್ಷವನ್ನು ಬರಮಾಡಿಕೊಂಡರು. ಹತ್ತು ವರ್ಷಗಳಿಂದ ಕೇಕ್ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಪ್ರತಿ ವರ್ಷ ಹೊಸ ವರ್ಷಾಚರಣೆಯಗೆ ಕೇಕ್ಗಳ ಬೇಡಿಕೆ ಹೆಚ್ಚುತ್ತಲೇ ಇದೆ. ಹತ್ತು ದಿನದಿಂದ ನಿರಂತರ ಕೆಲಸ ಮಾಡುತ್ತಿದ್ದೇವೆ ಎಂದು ಬೇಕರಿ ಮಾಲೀಕ ರಮೇಶ್ ತಿಳಿಸಿದರು.
ದೇವಾಲಯದಲ್ಲಿ ವಿಶೇಷ ಪೂಜೆ : ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡರು.
ಪೊಲೀಸ್ ಬಂದೋಬಸ್ತ್ : ಹೊಸ ವರ್ಷಾಚರಣೆ ವೇಳೆ ನಗರದಲ್ಲಿ ಯಾವುದೇ ರೀತಿ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆಯಾಗಿ ಪೊಲೀಸ್ ಇಲಾಖೆಯಿಂದ ನಗರ ಸೇರಿ ಕೆಲವಡೆ ಮಧ್ಯರಾತ್ರಿವರೆಗೂ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಬಾರ್, ಹೊಟೇಲ್ ಮಾಲೀಕರು ಹಾಗೂ ಸಿಬ್ಬಂದಿ ಜತೆಗೆ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಯಾವುದೇ ಗಲಾಟೆ ಗದ್ದಲಗಳು ನಡೆದಲ್ಲಿ ತಕ್ಷಣ ಪೊಲೀಸ್ ಠಾಣಿಗೆ ಮಾಹಿತಿ ನೀಡುವಂತೆ ನಗರ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕ ಭರತ್ಗೌಡ ತಿಳಿಸಿದರು.