- ವಿವಿಧ ಕೀಟಗಳಿಂದ ತಯಾರಿಸಿದ 17 ಖಾದ್ಯ ತಯಾರಿಕೆ
- ರೇಷ್ಮೆ ಹುಳು ಕೋಶದ ಸೂಪ್, ರೆಷ್ಮೆ ಹುಳು ಕೋಶದ ಮಂಚೂರಿಯನ್, ಗೆದ್ದಲಿನ ರೋಸ್ಟ್
- ಕೀಟಗಳಿಂದ ತಯಾರಿಸಿದ ಖಾದ್ಯಗಳಲ್ಲಿ ಅಧಿಕ ಪ್ರಮಾಣದಲ್ಲಿ ಪೋಷಕಾಂಶ
ಬೆಂಗಳೂರು: ಕೋಳಿ, ಮೀನು, ಮೇಕೆಯಿಂದ ತುಯಾರಿಸಿದ ಬಿರಿಯಾನಿ, ಕಬಾಬ್ ನೋಡಿದ್ದೇವೆ ಅಥವಾ ವಾರಕ್ಕೆ 2-3 ಬಾರಿಯಾದರೂ ಮಾಂಸಪ್ರಿಯರು ಸೇವಿಸುವುದು ಸಾಮಾನ್ಯ. ಆದರೆ, ಮಿಡತೆ, ಜಿರಳೆ, ರೇಷ್ಮೆ ಹುಳು ಸೇರಿ ಇತರ ಕೀಟಗಳಿಂದ ತಯಾರಿಸಿದ ಕಬಾಬ್, ಬಿರಿಯಾನಿ, ಪಕೋಡ ಕೇಳಿದ್ದೀರಾ.....
ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ವತಿಯಿಂದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ಆವರಣದಲ್ಲಿ ಆಯೋಜಿಸಿದ್ದ ಕೃಷಿ ಮೇಳದಲ್ಲಿ ವಿವಿಧ ಕೀಟಗಳಿಂದ ತಯಾರಿಸಿದ 17 ಖಾದ್ಯಗಳನ್ನು ಸಾರ್ವಜನಿಕರು ವೀಕ್ಷಿಸಿದರು.
ರೆಷ್ಮೆ ಹುಳು ಕೋಶದ ಮಂಚೂರಿಯನ್, ಮೀಲ್ವರಂ ಕೇಕ್, ಚಿಗಳಿ ಚೆಟ್ನಿ, ಕಣಜ ಹುಳವಿನ ಮಸಾಲ, ರೇಷ್ಮೆ ಹುಳು ಕೋಶದ ಸೂಪ್, ಮಿಡತೆ ಪ್ರೈ, ರಾಣಿ ಗೆದ್ದಲಿನ ಬರ್ಗರ್, ರೇಷ್ಮೆ ಹುಳು ಕೋಶದ ಚಾಕಲೇಟ್, ಮೀಲ್ವರಂ ಪ್ರೈಡ್ ರೈಸ್, ಗೆದ್ದಲಿನ ರೋಸ್ಟ್, ಎರಿ ರೇಷ್ಮೆ ಹುಳವಿನ ಬಾರ್ಬಿ ಕ್ಯೂ, ಮೀಲ್ವರಂ ಪಿಜ್ಜಾ, ಜಿರಳೆ ಪಕೋಡ, ಮಿಡತೆ ಕಬಾಬ್, ಮೀಲ್ವರಂ ಪ್ರೈಡ್ ರೈಸ್ ಮತ್ತು ಕೆಂಪು ಇರುವೆ ಚೆಟ್ನಿ ಖಾದ್ಯ ನೋಡುಗರ ಗಮನ ಸೆಳೆಯುತ್ತಿದೆ. ಮೊದಲ ಬಾರಿಗೆ ಮೇಳದಲ್ಲಿ ಕೀಟಗಳಿಂದ ತಯಾರಿಸಿದ ಖಾದ್ಯವನ್ನು ಪ್ರದರ್ಶನಕ್ಕಿಡಲಾಗಿದೆ. ಈ ಖಾದ್ಯವನ್ನು ನೋಡಲು ಜನರು ಮುಗಿಬೀಳುತ್ತಿದ್ದಾರೆ. ಕೀಟಗಳಿಂದ ಇಷ್ಟೆಲ್ಲಾ ಖಾದ್ಯ ಮಾಡಬಹುದಾ ಎಂಬುದರ ಬಗ್ಗೆ ಜನರು ಆಶ್ಚರ್ಯ ವ್ಯಕ್ತಪಡಿಸಿದ್ದರು.
ಕುರಿ, ಕೋಳಿ, ಮೇಕೆಯಿಂದ ತಯಾರಿಸಿದ ಖಾದ್ಯಗಿಂತ ಕೀಟಗಳಿಂದ ತಯಾರಿಸಿದ ಖಾದ್ಯಗಳಲ್ಲಿ ಅಧಿಕ ಪ್ರಮಾಣದಲ್ಲಿ ಪೋಷಕಾಂಶವಿದೆ. ಇದು ಆರೋಗ್ಯಕ್ಕೂ ಒಳ್ಳೆಯದು. ಚೀನಾ, ಜಪಾನ್ ಸೇರಿ ವಿದೇಶಗಳಲ್ಲಿ ಹೆಚ್ಚಾಗಿ ಈ ಖಾದ್ಯವನ್ನು ಸೇವಿಸುತ್ತಾರೆ. ಅಸ್ಸಾಂ, ಮೀಜಾರಾಂ ಸೇರಿ ಭಾರತದ ಈಶಾನ್ಯ ರಾಜ್ಯಗಳಲ್ಲಿ ಜನರು ಮಿಡತೆ ಕಬಾಬ್, ಜಿರಳೆ ಪಕೋಡ, ರಾಣಿ ಗೆದ್ದಲಿನ ಬರ್ಗರ್ ಸೇರಿ ಇತರ ಕೀಟಗಳಿಂದ ತಯಾರಿಸಿದ ಖಾದ್ಯವನ್ನು ಸೇವಿಸುತ್ತಾರೆ. ಕೋಲಾರ, ಚಿಕ್ಕಬಳ್ಳಾಪುರ ಸೇರಿ ರಾಜ್ಯದ ಕೆಲವೆಡೆ ಕೆಂಪು ಇರುವೆಯಿಂದ ತಯಾರಿಸಿದ ಚೆಟ್ನಿಯನ್ನು ಉಪಯೋಗಿಸುತ್ತಿದ್ದಾರೆ. ಕೆಲ ಕೀಟ ಖಾದ್ಯಗಳು ಗರ್ಭ ಧರಿಸಿದ ಮಹಿಳೆಯರು ಸೇವಿಸಿದರೆ ಹುಟ್ಟುವ ಮಗು ಆರೋಗ್ಯವಾಗಿ ಜನಿಸಲಿದೆ.
ಕೃಷಿ ವಿವಿಯಿಂದ ಖಾದ್ಯ ತಯಾರಿಕೆ
ಕೃಷಿ ಕ್ಷೇತ್ರದಲ್ಲಿ ನಿರಂತರವಾಗಿ ಹೊಸ ಪ್ರಯೋಗ ಮಾಡುತ್ತಿರುವ ಕೃಷಿ ವಿವಿ ಬೆಂಗಳೂರು, ಈ ಬಾರಿ ಕೀಟಗಳಿಂದ ವಿವಿಧ ಖಾದ್ಯವನ್ನು ತಯಾರಿಸಿ ಮೇಳದ ಕೀಟಶಾಸ್ತ್ರ ವಿಭಾಗದಲ್ಲಿ ಪ್ರತ್ಯೇಕವಾಗಿ ಪ್ರದರ್ಶನಕ್ಕಿಟ್ಟಿತ್ತು. ಇತರ ಕೀಟಗಳ ಬಗ್ಗೆ ಸಂಶೋಧನೆ ನಡೆಸಿರುವ ಬಗ್ಗೆಯೂ ಮೇಳದಲ್ಲಿ ಮಾಹಿತಿ ನೀಡಲಾಯಿತು.