ಸಚಿವ ಪ್ರಿಯಾಂಕ್ ಖರ್ಗೆ 
ರಾಜ್ಯ

ನೀರಿನ ಗುಣಮಟ್ಟ ಪರೀಕ್ಷೆಗೆ ಬಂದಿಲ್ಲ ಅನುದಾನ

ಗೋವಿಂದರಾಜು ಚಿನ್ನಕುರ್ಚಿ
ಬೆಂಗಳೂರು: ರಾಜ್ಯದಲ್ಲಿ ಶುದ್ಧ ಕುಡಿಯುವ ನೀರು ನಿರ್ವಹಣೆಗೆ ಗುಣಮಟ್ಟ ಪರೀಕ್ಷೆಗಳನ್ನು ಕೈಗೊಳ್ಳಲು ಎರಡು ವರ್ಷದಲ್ಲಿ 52 ಕೋಟಿ ರೂ.ವೆಚ್ಚ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ರಾಜ್ಯ ಸರ್ಕಾರ 2024-25ನೇ ಸಾಲಿನಲ್ಲಿ 23.52 ಕೋಟಿ ರೂ. ಮತ್ತು ಪ್ರಸಕ್ತ ಸಾಲಿನಲ್ಲಿ 28.85 ಕೋಟಿ ರೂ. ವೆಚ್ಚ ಮಾಡಿದೆ. ಕೇಂದ್ರ ಸರ್ಕಾರ ಜಲ ಜೀವನ್ ಮಿಷನ್ ಯೋಜನೆಯಡಿ ನೀರಿನ ಗುಣಮಟ್ಟ ಮೇಲ್ವಿಚಾರಣೆ ಮತ್ತು ಕಣ್ಗಾವಲು ಕಾರ್ಯಕ್ರಮಕ್ಕೆ ಶೇ.2 ಅನುದಾನ ನೀಡಬೇಕು. ಆದರೆ ನೀಡಿಲ್ಲ ಎಂದಿದ್ದಾರೆ.

ಗ್ರಾಮೀಣ ಜನವಸತಿ ಪ್ರದೇಶಗಳ ಕುಡಿಯುವ ನೀರಿನ ಮೂಲಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಜಿಲ್ಲಾ ಮತ್ತು 47 ತಾಲೂಕು ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಕಲುಷಿತ ನೀರು ಎಂದು ಕಂಡುಬಂದರೆ ಮರುಪರೀಕ್ಷೆಗೆ ಒಳಪಡಿಸಿ ಖಚಿತಪಡಿಸಿಕೊಂಡು ಪರ್ಯಾಯ ಮೂಲಗಳಿಂದ ನೀರು ಒದಗಿಸಲಾಗುತ್ತಿದೆ. ಇದಲ್ಲದೆ ಕುಡಿಯುವ ನೀರಿನ ಗುಣಮಟ್ಟದ ಪರೀಕ್ಷೆಗೆ ಒತ್ತು ನೀಡುವ ಸಲುವಾಗಿ ಎನ್‌ಎಬಿಎಲ್ ಮಾನ್ಯತೆ ಪಡೆದಿರುವ ಖಾಸಗಿ ಪ್ರಯೋಗಾಲಯಗಳಲ್ಲಿ 2023-24 ಮತ್ತು 2024-25ನೇ ಸಾಲಿನಲ್ಲಿ 66811 ನೀರಿನ ಮಾದರಿ ಪರೀಕ್ಷೆ ಮಾಡಿಸಲಾಗಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯದೊಂದಿಗೆ ಕರಾರು ಒಪ್ಪಂದ ಮಾಡಿಕೊಳ್ಳಲಾಗಿದೆ. ವಿವಿಯ ಸೂಕ್ಷ್ಮಜೀವಾಣು ಪ್ರಯೋಗಾಲಯಗಳಲ್ಲಿ ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ, ಬಳ್ಳಾರಿ ಜಿಲ್ಲೆಗಳ ನೀರಿನ ಮಾದರಿಗಳ ಗುಣಮಟ್ಟದ ಪರೀಕ್ಷೆ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

ಸರ್ಕಾರದ ಪ್ರಮುಖ ಕ್ರಮಗಳು

* ನೀರಿನ ಗುಣಮಟ್ಟ ಮೇಲ್ವಿಚಾರಣೆ ಮತ್ತು ಕಣ್ಗಾವಲಿಗೆ ಟಾಸ್ಕ್ ಪೋರ್ಸ್ ಸಮಿತಿ ರಚನೆ
* ಕೊಳವೆಬಾವಿ ಮೂಲ ಪರೀಕ್ಷೆಗೆ ಇಂಜಿನಿಯರ್, ಪಿಡಿಒ ಜಂಟಿಯಾಗಿ ಸ್ಥಳ ಪರಿಶೀಲನೆ
* ನೀರು ಶೇಖರಣಾ ಘಟಕಗಳನ್ನು ಕಾಲ-ಕಾಲಕ್ಕೆ ಸ್ವಚ್ಛಗೊಳಿಸುವುದು, ಕ್ಲೋರಿನೇಷನ್‌ಗೆ ಸೂಚನೆ