Grandmother arrested for killing grandson
ಚೇಳೂರು: ನಲವತ್ತು ದಿನದ ಹಸುಗೂಸಾಗಿದ್ದ ಮರಿ ಮೊಮ್ಮಗನನ್ನು ಉಸಿರುಗಟ್ಟಿಸಿ ಕೊಂದಿದ್ದ ವೃದ್ಧೆಯನ್ನು ಚೇಳೂರು ಪೊಲೀಸರು ಬಂಧಿಸಿದ್ದಾರೆ.
ಚೇಳೂರಿನ ಮೆಹಬೂಬಿ (72) ಆರೋಪಿ. ಅನ್ಯ ಧರ್ಮದ ಯುವಕನ್ನು ಮದುವೆಯಾಗಿದ್ದ ಮೊಮ್ಮಗಳು ಗರ್ಭಿಣಿಯಾದ ಬಳಿಕ ಅಜ್ಜಿ ಮನೆಗೆ ಬಂದಿದ್ದಳು. ಈ ವಿಚಾರವಾಗಿ ಮೆಹಬೂಬಿ ಬೇಸರಗೊಂಡಿದ್ದರು. ಮಗು ಜನನವಾದ 40 ದಿನಗಳ ಬಳಿಕ ವೃದ್ಧೆ ಸಮಯ ನೋಡಿಕೊಂಡು ಕತ್ತು ಹಿಸುಕಿ ಕೊಲೆ ಮಾಡಿದ್ದಳು. ಇದನ್ನರಿಯದೇ ಅನಾರೋಗ್ಯದ ಹಿನ್ನೆಲೆಯಲ್ಲಿ ಹಸುಗೂಸು ಮೃತಪಟ್ಟಿದೆ ಎಂದು ಭಾವಿಸಿ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು.
ವರದಿಯಲ್ಲಿ ರಹಸ್ಯ ಬಯಲು: ಮಗುವಿನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ತಾಯಿ ಚೇಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರಿಂದ ತಹಸೀಲ್ದಾರ್ ಸಮ್ಮುಖದಲ್ಲಿ ಸ್ಮಶಾನದಲ್ಲಿ ಹೂತಿದ್ದ ಹಸುಗೂಸಿನ ಶವವನ್ನು ಹೊರ ತೆಗೆದು ಮರಣೋತ್ತರ ಪರೀೆ ನಡೆಸಲಾಗಿತ್ತು. ಈಗ ಎಫ್ಎಸ್ಎಲ್ ವರದಿಯಲ್ಲಿ ಕೊಲೆ ಮಾಡಿರುವುದು ದೃಢಪಟ್ಟಿದೆ. ಇದರಿಂದ ವೃದ್ಧೆಯನ್ನು ವಶಕ್ಕೆ ಪಡೆದುಕೊಂಡು ಪೊಲೀಸರು ವಿಚಾರಣೆ ನಡೆಸಿದ್ದು ಆಕೆ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾಳೆ.