ಕಲಬುರಗಿ ಶ್ರೀ ಶರಣಬಸವೇಶ್ವರ ದೇವಸ್ಥಾನ ದಾಸೋಹ ಮಹಾಮನೆಯಲ್ಲಿ ಶ್ರಾವಣ ಸಂಭ್ರಮಕ್ಕೆ ಆಗಮಿಸಿದ ಭಕ್ತರಿಗೆ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ಬುಧವಾರ ಪ್ರಸಾದ ವಿತರಿಸಿದರು. 
ರಾಜ್ಯ

ಶ್ರಾವಣ ಸಂಭ್ರಮಕ್ಕೆ ವೈಭವದ ಚಾಲನೆ

ಪ್ರಮುಖ ಮುಖ್ಯಾಂಶಗಳು

  • ಕಲಬುರಗಿ ಶರಣಬಸವೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ಪ್ರಸಾದ ವಿತರಣೆ
ಕಲಬುರಗಿ: ಭಕ್ತಿಭಾವದಲ್ಲಿ ಮಿಂದೆದ್ದ ಭಕ್ತರು, ಶರಣರ ಸನ್ನಿಧಿಯಲ್ಲಿ ಆಧ್ಯಾತ್ಮಿಕ ಕಳೆ, ಶ್ರಾವಣ ಮಾಸದ ಭವ್ಯಾರಂಭ, ಮೊಳಗಿದ ಶರಣನಾಮ. ಆಧ್ಯಾತ್ಮಿಕ ಸಂಭ್ರಮ. ಶ್ರಾವಣದ ಮೊದಲ ದಿನ ಬುಧವಾರ ಶರಣಬಸವೇಶ್ವರ ದೇವಸ್ಥಾನದಲ್ಲಿ ಕಂಡುಬಂದ ದೃಶ್ಯವಿದು.
ಭಕ್ತಿ, ಶ್ರದ್ಧೆ ಮತ್ತು ವೈಭವದ ಅಪೂರ್ವ ಸಂಗಮ ಸಾಕ್ಷಾತ್ಕಾರಗೊಂಡಿತು. ಶ್ರಾವಣದ ಮೊದಲ ದಿನವೇ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಹರಿದುಬಂದಿತು. ಶರಣಬಸವೇಶ್ವರ ಮಹಾರಾಜ ಕಿ ಜೈ ಎಂಬ ಘೋಷಣೆಗಳು ಮುಗಿಲು ಮುಟ್ಟಿದವು. ವಿವಿಧೆಡೆಯಿಂದ ಆಗಮಿಸಿದ ಭಕ್ತರು ದರ್ಶನ ಪಡೆದು ವಿಶೇಷ ಪೂಜೆ, ಅಭಿಷೇಕ ಹಾಗೂ ಪ್ರಾರ್ಥನೆ ಸಲ್ಲಿಸಿದರು. ಬಣ್ಣಬಣ್ಣದ ಹೂವು, ತಳಿರು-ತೋರಣ ಹಾಗೂ ವಿದ್ಯುತ್​ ದೀಪಾಲಂಕಾರಗಳಿಂದ ದೇವಸ್ಥಾನ ಆವರಣ ಕಂಗೊಳಿಸುತ್ತಿದೆ.
ಶರಣಬಸವೇಶ್ವರ ಸಂಸ್ಥಾನದ 9ನೇ ಮಹಾದಾಸೋಹ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪ ಶ್ರಾವಣ ಮಾಸದ ಸ್ಮರಣಾರ್ಥ ಸಾಂಪ್ರದಾಯಿಕ ಪಾದಪೂಜೆ, ತ್ರಿಕಾಲ ಪೂಜೆ ಹಾಗೂ ವಿಶೇಷ ಪೂಜೆ ನೆರವೇರಿಸಿದರು.
ದೇವಸ್ಥಾನದಲ್ಲಿರುವ ಶರಣಬಸವೇಶ್ವರರ ವಿಗ್ರಹ ಬಣ್ಣಬಣ್ಣದ ಹೂವುಗಳಿಂದ ಅಲಂಕರಿಸಲಾಗಿತ್ತು. ವಿಶೇಷ ಪೂಜಾ ಕೈಂಕರ್ಯ, ಧಾರ್ಮಿಕ ವಿಧಿವಿಧಾನ ಹಾಗೂ ಭಜನೆ ಭಕ್ತರ ಮನದಲ್ಲಿ ಆಧ್ಯಾತ್ಮಿಕ ಭಾವ ಮೂಡಿಸಿದವು. ಕುಟುಂಬಸಮೇತ ಆಗಮಿಸಿದ ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದು ಪುನೀತರಾದರು.
ಬಂದ ಭಕ್ತರೆಲ್ಲರಿಗೂ ದಾಸೋಹ ಮಹಾಮನೆಯಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ಭಕ್ತರಿಗೆ ಪ್ರೀತಿಯಿಂದ ಉಣಬಡಿಸಿದರು. ಪೂಜ್ಯ ದೊಡ್ಡಪ್ಪ ಅಪ್ಪ ಕೈಜೋಡಿಸಿದರು.
ಶರಣಬಸವೇಶ್ವರ ಸಂಸ್ಥಾನದ ಧಾರ್ಮಿಕ ಮತ್ತು ಸಾಮಾಜಿಕ ಪರಂಪರೆಯಲ್ಲಿ ಶ್ರಾವಣ ಮಾಸಕ್ಕೆ ವಿಶೇಷ ಸ್ಥಾನವಿದೆ. ಈ ಅವಧಿಯಲ್ಲಿ ನಡೆಯುವ ಆಧ್ಯಾತ್ಮಿಕ ಪ್ರವಚನ, ಧಾರ್ಮಿಕ ಉಪನ್ಯಾಸ, ಭಜನೆ ಹಾಗೂ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ಭಕ್ತರಿಗೆ ಭಕ್ತಿ, ಜ್ಞಾನ ಮತ್ತು ಸಂಸ್ಕಾರದ ಅನುಭವ ನೀಡುತ್ತವೆ. ಶ್ರಾವಣದ ಮೊದಲ ದಿನವೇ ಕಂಡುಬಂದ ಭಕ್ತರ ಉತ್ಸಾಹ, ಆಧ್ಯಾತ್ಮಿಕ ವಾತಾವರಣ ಮುಂದಿನ 40 ದಿನದ ಶ್ರಾವಣ ಮಾಸದ ಧಾರ್ಮಿಕ ವೈಭವಕ್ಕೆ ಮುನ್ನುಡಿ ಬರೆಯಿತು. ದೇವಸ್ಥಾನ ಸುತ್ತಮುತ್ತಲಿನ ಪ್ರದೇಶವೆಲ್ಲ ಭಕ್ತರಿಂದ ತುಂಬಿ ತುಳುಕುತ್ತಿದ್ದ ದೃಶ್ಯ ಮನಮೋಹಕವಾಗಿತ್ತು.
ದರ್ಶನ, ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಭಕ್ತರು ಶ್ರಾವಣ ಮಾಸವನ್ನು ಭಕ್ತಿ, ಶ್ರದ್ಧೆ, ಸತ್ಕಾರ್ಯ ಮತ್ತು ಧಾರ್ಮಿಕ ಚಿಂತನೆಯೊಂದಿಗೆ ಆಚರಿಸುವ ಸಂಕಲ್ಪ ತೊಟ್ಟರು. ಒಟ್ಟಿನಲ್ಲಿ ಶರಣಬಸವೇಶ್ವರ ದೇವಸ್ಥಾನದಲ್ಲಿ ಮೂಡಿಬಂದ ಭಕ್ತಿಯ ಸೆಲೆ ಕಲಬುರಗಿಯ ಧಾರ್ಮಿಕ ಪರಂಪರೆ ಮತ್ತು ಶರಣ ಸಂಸತಿಯ ಶ್ರೀಮಂತಿಕೆಯನ್ನು ಅನಾವರಣಗೊಳಿಸಿತು.
"

ಪವಿತ್ರ ಶ್ರಾವಣದ ಮಾಸ ಇಂದು ಶುಭಾರಂಭಗೊಂಡಿದೆ. ನಾಡಿನ ಅಪಾರ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಶರಣಬಸವೇಶ್ವರರ ದರ್ಶನ ಪಡೆದುಕೊಳ್ಳುತ್ತಿದ್ದಾರೆ. ದಾಸೋಹ ಮಹಾಮನೆಯಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಶರಣಬಸವೇಶ್ವರ ನಾಡಿನ ಸಮಸ್ತ ಭಕ್ತರಿಗೆ ಸನ್ಮಂಗಲವನ್ನು ಉಂಟು ಮಾಡಲಿ.

— > ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ಅಧ್ಯಕ್ಷರು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಕಲಬುರಗಿ