ತಿ.ನರಸೀಪುರದ ಹೌಸಿಂಗ್ ಬೋರ್ಡ್‌ನ ವಿದ್ಯಾನಗರದಲ್ಲಿ ವಿನಾಯಕ ಗೆಳೆಯರ ಬಳಗದ ವತಿಯಿಂದ ನೂತನವಾಗಿ ಬೃಹತ್ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಗಣೇಶೋತ್ಸವಕ್ಕೆ ಸಂಭ್ರಮದ ಚಾಲನೆ ನೀಡಲಾಯಿತು. 
ರಾಜ್ಯ

ವಿದ್ಯಾನಗರದಲ್ಲಿ ವೈಭವದ ಗಣಪತಿ ಪ್ರತಿಷ್ಠಾಪನೆ

ತಿ.ನರಸೀಪುರ: ಪಟ್ಟಣದ ಹೌಸಿಂಗ್ ಬೋರ್ಡ್‌ನ ವಿದ್ಯಾನಗರದಲ್ಲಿ ವಿನಾಯಕ ಗೆಳೆಯರ ಬಳಗದ ವತಿಯಿಂದ ನೂತನವಾಗಿ ಬೃಹತ್ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಗಣೇಶೋತ್ಸವಕ್ಕೆ ಸಂಭ್ರಮದ ಚಾಲನೆ ನೀಡಲಾಯಿತು.
ಗಣಪತಿ ಪ್ರತಿಷ್ಠಾಪನೆಗೂ ಮುನ್ನ ಡೊಳ್ಳು ಕುಣಿತ, ವಾದ್ಯಗಳ ನಾದ ಹಾಗೂ ಬಣ್ಣಬಣ್ಣದ ಕಾಗದಗಳ ಚಿತ್ತಾರದೊಂದಿಗೆ ಮೂರ್ತಿಯನ್ನು ಭವ್ಯವಾಗಿ ಕರೆತರಲಾಯಿತು. ಮೆರವಣಿಗೆಯಲ್ಲಿ ಯುವಕರು, ಮಹಿಳೆಯರು ಹಾಗೂ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು ಗಣಪತಿಗೆ ಜೈಕಾರ ಮೊಳಗಿಸಿದರು.
ವಿಶೇಷವಾಗಿ ರೂಪುಗೊಂಡ ಗಣಪತಿ ಮೂರ್ತಿಗೆ ಕಿರೀಟ, ಆಭರಣ ಹಾಗೂ ಬಂಗಾರದ ವರ್ಣದ ಅಲಂಕಾರ ಮಾಡಲಾಗಿದ್ದು, ಹಿಂಭಾಗದಲ್ಲಿರುವ ಗರುಡಾಕೃತಿಯ ವಿನ್ಯಾಸ ಮೂರ್ತಿಯ ವೈಭವವನ್ನು ಮತ್ತಷ್ಟು ಹೆಚ್ಚಿಸಿತು. ವಿದ್ಯುತ್ ದೀಪಗಳ ಅಲಂಕಾರದಲ್ಲೂ ಗಣಪತಿ ಭಕ್ತರ ಗಮನ ಸೆಳೆಯಿತು.
ಬಳಿಕ ಗಣಪತಿಯನ್ನು ವಿಧಿವತ್ತಾಗಿ ಪ್ರತಿಷ್ಠಾಪಿಸಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಭಕ್ತರು ಜೈ ಗಣೇಶ ಸೇರಿದಂತೆ ವಿವಿಧ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.
ಕಾಂಗ್ರೆಸ್ ಯುವ ಮುಖಂಡ ಸ್ವಾಮಿ ಮಾತನಾಡಿ, ವಿನಾಯಕ ಗೆಳೆಯರ ಬಳಗದಿಂದ ಪ್ರತಿಷ್ಠಾಪಿಸಿರುವ ಗಣಪತಿಗೆ ಮುಂದಿನ 11 ದಿನಗಳ ಕಾಲ ಪ್ರತಿದಿನ ವಿಶೇಷ ಪೂಜಾ ಕಾರ್ಯಕ್ರಮಗಳೊಂದಿಗೆ ಭಕ್ತರಿಗೆ ಪ್ರಸಾದ ವಿತರಿಸಲಾಗುವುದು ಎಂದು ತಿಳಿಸಿದರು.
ವಿನಾಯಕ ಗೆಳೆಯರ ಬಳಗದ ಯುವಕರು, ವಿದ್ಯಾನಗರ ಹಾಗೂ ಹೌಸಿಂಗ್ ಬೋರ್ಡ್ ಕಾಲನಿಯ ಪಾಲಕರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.