ಬೆಂಗಳೂರು: ಸಾಮಾನ್ಯವಾಗಿ ಹೊಸದಾಗಿ ಮನೆ ನಿರ್ಮಿಸುವವರು ಒಳಾಂಗಣ ವಿನ್ಯಾಸಕ್ಕೆ ವಿಶೇಷ ಒತ್ತು ನೀಡುತ್ತಾರೆ. ಅಂತೆಯೇ ಒಂದು ಮನೆಯ ಮೊದಲನೇ ಶಿಸ್ತು ಎಂದು ಪರಿಗಣಿಸಲ್ಪಡುವ ಚಪ್ಪಲಿಗಳನ್ನು ಇಡುವುದಕ್ಕೆ ಒಂದು ಸುಂದರ ಸ್ಟಾಂಡ್ ಇರುವುದು ಕೂಡಾ ಅಷ್ಟೇ ಮುಖ್ಯ.
ಎಷ್ಟೇ ದುಬಾರಿ ಚಪ್ಪಲಿ, ಶೂಗಳನ್ನು ಧರಿಸಿದರೂ ಅದನ್ನು ಮನೆಯ ಬಾಗಿಲ ಬಳಿಯೇ ಬಿಡಬೇಕು. ಹಾಗೆ ಚಪ್ಪಲಿಗಳನ್ನು ಬಿಡುವಾಗ ಚೆಲ್ಲಾಪಿಲ್ಲಿಯಾಗಿ ಬಿಟ್ಟರೆ ಮನೆಯ ಸೌಂದರ್ಯ ಕೆಡುತ್ತದೆ. ಆದ್ದರಿಂದ ಮನೆಯ ಮುಂಭಾಗದಲ್ಲಿ ಒಂದು ಸುಂದರ ಚಪ್ಪಲಿ ಸ್ಟಾೃಂಡ್ ಇದ್ದರೆ ಮನೆಯ ಸೌಂದರ್ಯ ವೃದ್ಧಿಸುತ್ತದೆ.
ಮನೆಗೆ ಪ್ರವೇಶಿಸುತ್ತಿದ್ದಂತೆ ಕಣ್ಣಿಗೆ ಬೀಳುವ ಮೊದಲ ಜಾಗವೇ ಪ್ರವೇಶದ್ವಾರ. ಈ ಜಾಗ ಸ್ವಚ್ಛವಾಗಿ, ಅಚ್ಚುಕಟ್ಟಾಗಿ ಮತ್ತು ಆಕರ್ಷಕವಾಗಿ ಇದ್ದರೆ ಮನೆಯ ಒಟ್ಟಾರೆ ಸೌಂದರ್ಯವೂ ಹೆಚ್ಚುತ್ತದೆ. ಮನೆಯ ಬಾಗಿಲಿನ ಬಳಿ ಚಪ್ಪಲಿ, ಶೂಗಳು ಎಲ್ಲೆಂದರಲ್ಲಿ ಹರಡಿಕೊಂಡಿದ್ದರೆ ಓಡಾಡಲು ತೊಂದರೆಯುಂಟಾಗುತ್ತದೆ. ಇದಕ್ಕೆ ಸರಳ ಪರಿಹಾರ ಸೂಕ್ತ ವಿನ್ಯಾಸದ ಚಪ್ಪಲಿ ಸ್ಟ್ಯಾಂಡ್.
ಇಂದು ಚಪ್ಪಲಿ ಸ್ಟ್ಯಾಂಡ್ ಕೇವಲ ಪಾದರಕ್ಷೆಗಳನ್ನು ಇಡುವ ಪೀಠೋಪಕರಣವಾಗಿ ಉಳಿದಿಲ್ಲ. ಮನೆಯ ಒಳಾಂಗಣ ವಿನ್ಯಾಸದ ಭಾಗವಾಗಿ ರೂಪುಗೊಂಡಿದೆ. ಕಡಿಮೆ ಜಾಗದಲ್ಲಿ ಹೆಚ್ಚು ಪಾದರಕ್ಷೆಗಳನ್ನು ಜೋಡಿಸಿಡುವ ವ್ಯವಸ್ಥೆ, ಕುಳಿತು ಶೂ ಧರಿಸಲು ಆಸನ, ಹೆಚ್ಚುವರಿ ಸಂಗ್ರಹಣಾ ಸ್ಥಳ, ಧೂಳು ಕಾಣದಂತೆ ಮುಚ್ಚಿದ ಕ್ಯಾಬಿನೆಟ್ ಹೀಗೆ ಹಲವು ಸೌಲಭ್ಯಗಳೊಂದಿಗೆ ವಿಭಿನ್ನ ಮಾದರಿಗಳು ಲಭ್ಯವಿವೆ. ಮನೆಯ ವಿಸ್ತೀರ್ಣ, ಕುಟುಂಬದ ಸದಸ್ಯರ ಸಂಖ್ಯೆ, ಪಾದರಕ್ಷೆಗಳ ಪ್ರಮಾಣ ಹಾಗೂ ಬಜೆಟ್‌ಗೆ ಅನುಗುಣವಾಗಿ ಸರಿಯಾದ ಮಾದರಿಯನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯ.
ವಿವಿಧ ಮಾದರಿ ಶೂ ರಾಕ್ ಲಭ್ಯ
ಪ್ರತಿಯೊಂದು ಪೀಠೋಪಕರಣಗಳಂತೆ ಚಪ್ಪಲಿ ಮತ್ತು ಶೂ ರಾಕ್‌ಗಳು ಕೂಡ ಮಾರುಕಟ್ಟೆಯಲ್ಲಿ ಬಗೆ ಬಗೆಯ ಮಾದರಿ ಮತ್ತು ವಿನ್ಯಾಸಗಳಲ್ಲಿ ದೊರೆಯುತ್ತವೆ. ಕಬ್ಬಿಣ, ಕಟ್ಟಿಗೆ, ಅಲ್ಯೂಮಿನಿಯಂ, ಗಾಜು ಮತ್ತು ಫೈಬರ್‌ಗಳ ಶೂ ರಾಕ್‌ಗಳು ದೊರೆಯುತ್ತವೆ. ಮನೆಯ ಅಂದಕ್ಕೆ ತಕ್ಕಂತೆ, ಮನೆಯಲ್ಲಿರುವ ಸದಸ್ಯರ ಸಂಖ್ಯೆ ಹಾಗೂ ಬಳಸುವ ಪಾದರಕ್ಷೆಗಳ ಸಂಖ್ಯೆಗನುಗುಣವಾದ ಅಳತೆಯಲ್ಲಿ ರಾಕ್‌ಗಳನ್ನು ಖರೀದಿಸಬಹುದು. ಚಪ್ಪಲಿಯ ಎತ್ತರ, ಶೂಗಳ ಸೈಜ್‌ಗೆ ಅನುಗುಣವಾಗಿ ಸ್ಲೋಪ್ ಫ್ಲಾಟ್ ಇರುವ ಹಲವು ಅಂತರಗಳ ಕಾಪಾಟು ಮಾದರಿ ಶೂ ರ‌್ಯಾಕ್‌ಗಳು ದೊರೆಯುತ್ತವೆ.
ಈ ಸ್ಟ್ಯಾಂಡ್‌ನಲ್ಲಿ ಚಪ್ಪಲಿ, ಶೂ ಮತ್ತು ಸ್ಯಾಂಡಲ್‌ಗಳನ್ನು ಪ್ರತ್ಯೇಕವಾಗಿ ಜೋಡಿಸಬಹುದು. ಗಾಳಿಯಾಡುವಂತೆ ವಿನ್ಯಾಸವಿದ್ದರೆ ಒದ್ದೆಯಾದ ಪಾದರಕ್ಷೆಗಳು ಒಣಗಲು ಹಾಗೂ ಕಾಲಿನ ಬೆವರಿನ ವಾಸನೆ ಕೂಡಾ ಹೋಗುತ್ತದೆ. ಸ್ಲೈಡ್ ಡೋರ್ ಇದ್ದರೆ ಜಾಗದ ಉಳಿತಾಯವಾಗುತ್ತದೆ. ಬಾಗಿಲ ಹಿಂದೆ ಇಟ್ಟರೂ ಓಡಾಡುವುದಕ್ಕೆ ಯಾವುದೇ ಅಡಚಣೆ ಆಗುವುದಿಲ್ಲ. ಹೊಸದಾಗಿ ಬಂದಿರುವ ಮೆಟಲ್ ಕ್ಯಾಬಿನೆಟ್ ಮಾದರಿ ರ‌್ಯಾಕ್‌ಗಳು ಇರುವ ಚಿಕ್ಕ ಜಾಗದಲ್ಲೇ ಫಿಕ್ಸ್ ಮಾಡಬಹುದು. ಹಾಗೂ ಚಪ್ಪಲಿ ಸ್ಟಾೃಂಡ್‌ಗಳ ಮೇಲೆ ಬೆಂಚ್ ಮಾದರಿಯಲ್ಲಿ ಅಗಲವಾಗಿದ್ದರೆ. ಅದರ ಮೇಲೆಯೇ ಕುಳಿತು ಶೂಗಳನ್ನು ಹಾಕಿಕೊಳ್ಳಬಹುದು.