ಕಕ್ಕೇರಾದ ಶ್ರೀ ಸಂಗಮೇಶ್ವರ ಮಠದ ಕರಿಯಪ್ಪ ತಾತನವರ ಜಾತ್ರಾ ಮಹೋತ್ಸವ ನಿಮಿತ್ತ ಸೋಮವಾರ ಜರುಗಿದ ಹೂವಿನ ರಥೋತ್ಸವದಲ್ಲಿ ಭಾಗವಹಿಸಿದ್ದ ಅಸಂಖ್ಯಾತ ಭಕ್ತರು.
ಪಟ್ಟಣದ ಶ್ರೀ ಕರಿಯಪ್ಪ ತಾತನ ಜಾತ್ರಾ ಮಹೋತ್ಸವ ನಿಮಿತ್ತ ಸಹಸ್ರಾರು ಭಕ್ತರ ಜೈಗೋಷಗಳ ಮಧ್ಯೆ ಸೋಮವಾರ ಅದ್ದೂರಿಯಾಗಿ ಶ್ರೀ ಕರಿಯಪ್ಪ ತಾತನವರ ಹೂವಿನ ರಥೋತ್ಸವ ಜರುಗಿತು.
ಸಂಜೆ ೬.೨೧ರ ಸುಮಾರಿಗೆ ವಿವಿಧ ಪುಷ್ಪಲಂಕಾರಗೊಂಡ ರಥಕ್ಕೆ ಪೂಜ್ಯ ನಂದಣ್ಣಪ್ಪ ಪೂಜಾರಿ ಅವರು ಪೂಜೆ ಸಲ್ಲಿಸಿದ ಬಳಿಕ ರಥದ ಸುತ್ತ ಕಳಸದೊಂದಿಗೆ ಐದು ಸುತ್ತು ಪ್ರದಕ್ಷಿಣೆ ಹಾಕಿ, ರಥದ ಮೇಲೆ ಕಳಸವನ್ನಿರಿಸುತ್ತಿದ್ದಂತೆ ನೆರೆದ ಭಕ್ತ ಸಮೂಹ ಚಪ್ಪಾಳೆ ತಟ್ಟಿ ಖುಷಿ ವ್ಯಕ್ತಪಡಿಸಿದರು.
ನಂತರ ಪೂಜ್ಯದ್ವಯರಾದ ಅಯ್ಯಣ್ಣ ಪೂಜಾರಿ, ಪರಮಣ್ಣ ಪೂಜಾರಿ ಅವರು ರಥದ ಮೇಲೇರಿ ಭಕ್ತರತ್ತ ಬಿಳಿ ವಸ್ತ್ರ ಬೀಸಿ ರಥ ಎಳೆಯುವುದಕ್ಕೆ ಚಾಲನೆ ನೀಡುತ್ತಿದ್ದಂತೆ ಸಂಗಮೇಶ್ವರ ಮಹಾರಾಜಕೀ ಜೈ, ಕರಿಯಪ್ಪ ತಾತನವರ ಮಹಾರಾಜಕೀ ಜೈ, ರಾಮಯ್ಯತಾತನವರ ಮಹಾರಾಜಕೀ ಜೈ ಎಂದು ರಥದತ್ತ ಹೂ, ಉತ್ತತ್ತಿ, ಬಾಳೆಹಣ್ಣು ಎಸೆದು ಕರಿಯಪ್ಪ ತಾತನವರ ಕೃಪೆಗೆ ಪಾತ್ರರಾದರು. ರಥೋತ್ಸವ ಪಾದಕಟ್ಟೆ ತಲುಪಿ ಸುರಕ್ಷಿತವಾಗಿ ಸ್ವಸ್ಥಳಕ್ಕೆ ಬಂದು ತಲುಪಿತು.
ಬೆಳಗ್ಗೆಯಿಂದ ಭಕ್ತರು ಮಧ್ಯಾಹ್ನದವರೆಗೆ ದೀರ್ಘದಂಡ ನಮಸ್ಕಾರ ಸಲ್ಲಿಸಿ, ಕರಿಯಪ್ಪ ತಾತಾ, ಸಂಗಮೇಶ್ವರ ಗದ್ದುಗೆಗೆ, ರಾಮಯ್ಯತಾತನ ಗದ್ದುಗೆಗೆ ಕಾಯಿ ಕರ್ಪೂರ ಸಲ್ಲಿಸಿದರು. ನಾಗಮೂರ್ತಿಗೆ ಪುರುಷರು, ಮಹಿಳೆಯರು ಹಾಗೂ ಚಿಕ್ಕಮಕ್ಕಳು ನಾಗಮೂರ್ತಿಗೆ ಹಾಲೆರೆದು ತಮ್ಮ ಭಕ್ತಿಯ ಪರಾಕಾಷ್ಠೆ ಮೆರೆದರು.
ನಾಗಪಂಚಮಿಯಂದು ಶ್ರೀಮಠದ ನಾಗದೇವರ ದಾರ ಧರಿಸುವುದರಿಂದ ಸರ್ಪದೋಷದಿಂದ ಮುಕ್ತಿಯಾಗುವ ಪ್ರತೀತಿ ಇರುವ ಹಿನ್ನೆಲೆಯಲ್ಲಿ ಭಕ್ತವೃಂದ ಕಾಣಿಕೆ ಸಲ್ಲಿಸಿ ನಾಗದೇವರ ದಾರ ಪಡೆದು ತಮ್ಮ ಕೈಗಳಿಗೆ ಕಟ್ಟಿಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು.
ಪೂಜ್ಯ ನಂದಣ್ಣಪ್ಪ ಪೂಜಾರಿ, ಹನುಮಂತರಾಯ ಜಹಾಗೀರದಾರ, ಅಯ್ಯಣ್ಣ ಪೂಜಾರಿ, ಪರಮಣ್ಣ ಪೂಜಾರಿ, ಮಾನಯ್ಯ ಪೂಜಾರಿ, ಪುರಸಭೆ ಅಧ್ಯಕ್ಷ ಪರಮಣ್ಣ ಕಮತಗಿ, ಉಪಾಧ್ಯಕ್ಷ ಜಟ್ಟೆಪ್ಪ ದಳಾರ, ಪ್ರಮುಖರಾದ ಗುಂಡಪ್ಪ ಸೊಲಾಪುರ, ರಾಜು ಹವಾಲ್ದಾರ್, ಬಸವರಾಜ ಆರೇಶಂಕರ, ದೇವಿಂದ್ರಪ್ಪ ಬಳಿಚಕ್ರ, ರಮೇಶಶೆಟ್ಟಿ, ಲಕ್ಮಣ ಲಿಂಗದಳ್ಳಿ, ಪರಮಾತ್ಮ ಗುರಿಕಾರ, ಸಿದ್ದಣ್ಣ ದೇಸಾಯಿ, ಭೀಮಣ್ಣಗೌಡ ಹಳ್ಳಿ, ಗುಡದಪ್ಪ ಕುರಿ, ವಿಜಯಚಾರ್ಯ ಜೋಶಿ, ನಂದಣ್ಣ ಬಾಕ್ಲಿ, ಪರಮಣ್ಣ ಗುತ್ತೇದಾರ, ರೋಹಿತ್ ಶೆಟ್ಟಿ, ಷಣ್ಮುಖಪ್ಪ ದೊರೆ, ಅಮರಪ್ಪ ಮಂಡಿ, ಬಸಣ್ಣ ಕುಂಬಾರ, ಚಂದ್ರು ವಜ್ಜಲ್, ಬುಚ್ಚಪ್ಪ, ಪರಮಣ್ನ ವಡಿಕೇರಿ, ಪುರಸಭೆ ಸದಸ್ಯರುಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸೇರಿದಂತೆ ಪುರಸಭೆ ಹಾಗೂ ಕಂದಾಯ ಅಧಿಕಾರಿಗಳಿದ್ದರು. ಸಹಸ್ರಾರು ಭಕ್ತವೃಂದ ವಿವಿಧ ಗ್ರಾಮಗಳಿಂದ ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.
ಮುನ್ನೆಚ್ಚರಿಕೆ ಕ್ರಮವಾಗಿ ಸಿಪಿಐ ರವಿಕುಮಾರ ಎಸ್.ಎನ್. ಮಾರ್ಗದರ್ಶನದಲ್ಲಿ ಕೊಡೇಕಲ್ ಪಿಎಸ್‌ಐ ರಾಜಶೇಖರ ರಾಠೋಡ್ ನೇತೃತ್ವದಲ್ಲಿ ವಾಲ್ಮೀಕಿ, ಕನಕದಾಸ, ಅಂಬೇಡ್ಮರ್ ವೃತ್ತಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಿದ್ದರು. ಅದ್ದೂರಿ ರಥೋತ್ಸವಕ್ಕೆ ಅಪಾರ ಜನಸ್ತೋಮ ಸಾಕ್ಷಿಯಾದರು. ರತೋತ್ಸವ ಜರುಗಿದ ಬಳಿಕ ಬಜಿ-ಜಿಲೇಬಿ ಸಿಹಿ ತಿನಿಸುಗಳ ಖರೀದಿ ಜೋರಾಗಿತ್ತು.