ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ವೆಂಕಟೇಶ್​ ಹಾಗೂ ಪೊಲೀಸ್​ ಸಿಬ್ಬಂದಿ ಸಮ್ಮುಖದಲ್ಲಿ ತೂಬಗೆರೆ ಕೋಳಿ ಅಂಗಡಿಗಳಿಗೆ ನೋಟಿಸ್​ ನೀಡಿ ಬೀಗ ಜಡಿದರು.  
ರಾಜ್ಯ

ತೂಬಗೆರೆಯ 5 ಕೋಳಿ ಅಂಗಡಿಗೆ ಬೀಗ ಜಡಿದ ಗ್ರಾಪಂ / TUBAGERE

ತೂಬಗೆರೆ : ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕೋಳಿ ತ್ಯಾಜ್ಯವನ್ನು ಕಾಚಹಳ್ಳಿ ಸಮೀಪದ ತೂಬಗೆರೆ ಕೆರೆಏರಿ ಮೇಲೆ ಸುರಿದ ಆರೋಪದ ಮೇಲೆ ಐದು ಅಂಗಡಿಗಳಿಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಬೀಗಜಡಿದು ಬಿಸಿಮುಟ್ಟಿಸಿದ್ದಾರೆ.
ಗ್ರಾಪಂ ಅಭಿವೃದ್ಧಿ ಅಧಿಕಾರಿ ವೆಂಕಟೇಶ್​ ಹಾಗೂ ಬಿಲ್​ ಕಲೆಕ್ಟರ್​ ಜ್ಯೋತಿ ಗುರುವಾರ ಗ್ರಾಮದ ಪ್ರತಿ ಕೋಳಿ ಅಂಗಡಿಗಳಿಗೆ ಭೇಟಿ ನೀಡಿ ಮಾಲೀಕರನ್ನು ತರಾಟೆ ತೆಗೆದುಕೊಂಡರು. 5000 ರೂ. ದಂಡ ಕಟ್ಟಿ, ಇಲ್ಲದಿದ್ದರೆ ಬೀಗ ಜಡಿಯುತ್ತೇವೆ ಎಂದು ಎಚ್ಚರಿಕೆ ಕೊಟ್ಟು ಬೀಗ ಹಾಕಿದರು.
ಈ ವೇಳೆ ಕೋಳಿ ಅಂಗಡಿ ಮಾಲೀಕರು ಹಾಗೂ ಪಿಡಿಒ ವೆಂಕಟೇಶ್​ ನಡುವೆ ಮಾತಿನ ಚಕಮತಿ ನಡೆಯಿತು. ಅಂಗಡಿಗಳಿಗೆ ಬೀಗ ಹಾಕಲು ನಾವು ಬಿಡಲ್ಲ. ನಮಗೆ ಎಲ್ಲಾದರೂ ಜಾಗ ತೋರಿಸಿ ಅಲ್ಲಿ ಕಸ ಹಾಕುತ್ತೇವೆ ಎಂದು ಅಂಗಡಿ ಮಾಲೀಕರು ಹೇಳಿದರು. ಜಾಗ ನೀಡದಿದ್ದರೆ ನಾವು ಎಲ್ಲಿ ಕಸ ಹಾಕಬೇಕು ಎಂದು ಪ್ರಶ್ನಿಸಿದರು. ಪರವಾನಗಿಗಾಗಿ ಗ್ರಾಮ ಪಂಚಾಯಿತಿಗೆ ಹಣ ನೀಡುತ್ತೇವೆ. ನಮಗೆ ಏಕೆ ಜಾಗ ನೀಡುತ್ತಿಲ್ಲ ಎಂದು ಗಲಾಟೆಗಿಳಿದರು.
ಎಲ್ಲ ಅಂಗಡಿಗಳಿಗೆ ನೋಟಿಸ್​ ಜಾರಿ ಮಾಡಿ ಬೀಗ ಜಡಿದ ನಂತರ ಕೋಳಿ ಅಂಗಡಿಗಳ ಮಾಲೀಕರೊಂದಿಗೆ ಗ್ರಾಪಂನಲ್ಲಿ ಸಭೆ ನಡೆಸಿದ್ದು, ಗ್ರಾಪಂನಿಂದ ಆಟೋ ವ್ಯವಸ್ಥೆ ಮಾಡುತ್ತೇವೆ. ನಿತ್ಯ ಬೆಳಗ್ಗೆ ನಿಮ್ಮ ಅಂಗಡಿ ಮುಂದೆಗೆ ಆಟೋ ಬರುತ್ತದೆ. ಕೋಳಿ ತ್ಯಾಜ್ಯವನ್ನು ಆಟೋಗೆ ಹಾಕಿ ಎಂದು ಹೇಳಿ, ಕೋಳಿ ಅಂಗಡಿಗಳ ಮಾಲೀಕರಿಗೆ ಪ್ರತಿ ತಿಂಗಳು ತ್ಯಾಜ್ಯ ತೆಗೆದುಕೊಂಡು ಹೋಗಲು ಸಾವಿರ ರೂಪಾಯಿ ದಂಡ ವಿಧಿಸಿದರು.
ಗಮನಸೆಳೆದ ವಿಜಯವಾಣಿ ವರದಿ : ಕೆಲವು ಅಂಗಡಿ ಮಾಲೀಕರು ಕಾಚಹಳ್ಳಿ ಸಮೀಪದ ತೂಬಗೆರೆ ಕೆರೆಏರಿ ಮೇಲೆ ಸುರಿಯುತ್ತಿದ್ದು, ದುರ್ವಾಸನೆ ಬೀರುತ್ತಿತ್ತು. ಸಾರ್ವಜನಿಕರು ಮೂಗುಮುಚ್ಚಿಕೊಂಡು ಓಡಾಡುವ ದುಸ್ಥಿತಿ ಇತ್ತು. ಕೋಳಿ ತ್ಯಾಜ್ಯ ಕೆರೆಏರಿ ಮೂಲಕ ಕೆರೆ ಒಡಲು ಸೇರುತ್ತಿದ್ದು, ಕೆರೆ ನೀರೂ ಮಲೀನವಾಗುತ್ತಿತ್ತು. ಇದನ್ನೇ ಕುಡಿದ ಜಾನುವಾರುಗಳು ಹಲವು ರೋಗಗಳಿಗೆ ತುತ್ತಾಗಿ ಅವುಗಳ ಪ್ರಾಣಕ್ಕೂ ಕಂಟವಾಗುತ್ತಿರುವ ಬಗ್ಗೆ ವಿಜಯವಾಣಿಯು "ಗಬ್ಬುನಾರುತ್ತಿದೆ ತೂಬಗೆರೆ ಕೆರೆಏರಿ' ಶೀರ್ಷಿಕೆಯಡಿ ಏ.30ರಂದು ಸಮಗ್ರ ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ ಗ್ರಾಮಪಂಚಾಯಿತಿ ಕೋಳಿ ಅಂಗಡಿಗಳ ಮೇಲೆ ದಾಳಿ ಮಾಡಿ ಬಿಸಿಮುಟ್ಟಿಸಿದೆ.

ಇನ್ನೂ ಮುಂದೆ ಕೋಳಿ ಅಂಗಡಿ ಆಗಲಿ, ಹೋಟೆಲ್​ನವರೇ ಆಗಲಿ ಕಸವನ್ನು ತಂದು ಕೆರೆ&ಕಟ್ಟೆ ಮೇಲೆ ಹಾಕಿದರೆ 5000 ರೂ. ದಂಡ ವಿಧಿಸುತ್ತೇವೆ. ಯಾರಾದರೂ ಕೆರೆ&ಕಟ್ಟೆ ಮೇಲೆ ಕೋಳಿ ತಾಜ್ಯ, ಕಾಫಿ ಲೋಟ ಹಾಕುವುದನ್ನು ನೋಡಿದರೆ ತಕ್ಷಣ ಪಂಚಾಯಿತಿಗೆ ತಿಳಿಸಿದರೆ ದಂಡ ಹಾಕುತ್ತೇವೆ.

— > ವೆಂಕಟೇಶ್​, ಗ್ರಾಪಂ ಅಭಿವೃದ್ಧಿ ಅಧಿಕಾರಿ