ಬೇರೆ ರಾಜ್ಯಗಳಂತೆ ಕರ್ನಾಟಕದಲ್ಲೂ ಗ್ಯಾರಂಟಿಗಳಿಗೆ ಕತ್ತರಿ ಬೀಳುತ್ತಾ? ಸಿಎಂ ಡಿಕೆಶಿ ನೀಡಿದ ಎಚ್ಚರಿಕೆ ಏನು? CM DK Shivakumar
- ಸಿಎಂ ಡಿ.ಕೆ. ಶಿವಕುಮಾರ್ ಕೊಟ್ಟ ಆ ಒಂದು ಹೇಳಿಕೆಗೆ ಗ್ಯಾರಂಟಿ ಗ್ರಾಹಕರು ಶಾಕ್!
- ಬೇರೆ ರಾಜ್ಯಗಳಂತೆ ಕರ್ನಾಟಕದಲ್ಲೂ ಗ್ಯಾರಂಟಿಗಳಿಗೆ ಕತ್ತರಿ ಬೀಳುತ್ತೆ ಎಂದ ಸಿಎಂ ಡಿಕೆಶಿ
- ಕರ್ನಾಟಕದ ನಿವಾಸಿಗಳಿಗೆ ಮಾತ್ರ ಗ್ಯಾರಂಟಿ ಯೋಜನೆ ಎಂದ ಸಿಎಂ
- ಮತದಾನದ ಹಕ್ಕು ಕಳೆದುಕೊಂಡರೆ ಸರ್ಕಾರಿ ಯೋಜನೆಗಳೂ ಬಂದ್ ಎಂದ ಸಿಎಂ ಡಿಕೆ ಶಿವಕುಮಾರ್
ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಆರಂಭವಾಗಿದ್ದು, ಇದರ ಬೆನ್ನಲ್ಲೇ ರಾಜ್ಯದ ಜನತೆಗೆ ಖಡಕ್ ಸಂದೇಶ ರವಾನಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ( CM DK Shivakumar ), ಸರ್ಕಾರದ ಯೋಜನೆಗಳು ಕೇವಲ ಕರ್ನಾಟಕದ ನಿವಾಸಿಗಳು ಮತ್ತು ಮತದಾರರಿಗೆ ಮಾತ್ರ ಸಿಗಲಿವೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕ್ರಿಯೆಯ ಅಂಗವಾಗಿ ನಮ್ಮ ರಾಮನಗರದ ಜಿಲ್ಲಾಧಿಕಾರಿಗಳು (DC) ಬಂದಿದ್ದರು. ನಾನೂ ಸಹ ನನ್ನ ಹೊಸ ಏನುಮ್ಯುರೇಷನ್ ಫಾರ್ಮ್ ಅನ್ನು ಸಂಪೂರ್ಣವಾಗಿ ತುಂಬಿ ಕೊಟ್ಟಿದ್ದೇನೆ ಎಂದು ಮಾಹಿತಿ ನೀಡಿದರು.
ಈ ಪ್ರಕ್ರಿಯೆಯ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದ ಸಿಎಂ, ಮುಂದಿನ ಏಳು ದಿನಗಳಲ್ಲಿ ಅಧಿಕಾರಿಗಳು ರಾಜ್ಯದ ಎಲ್ಲಾ ಮನೆ ಮನೆಗೂ ಭೇಟಿ ನೀಡಿ ಏನುಮ್ಯುರೇಷನ್ ಫಾರ್ಮ್ ಅನ್ನು ತಲುಪಿಸಲಿದ್ದಾರೆ. ನಿಮ್ಮ ಮನೆಗೆ ಬರುವ ಬಿಎಲ್ಒ (BLO) ಗಳಿಗೆ ಸಾರ್ವಜನಿಕರು ಫಾರ್ಮ್ ಅನ್ನು ಭರ್ತಿ ಮಾಡಿ ಕೊಡಬೇಕಾಗುತ್ತದೆ. ಏಳು ದಿನಗಳ ಒಳಗಾಗಿ ಕುಟುಂಬಸ್ಥರು ಈ ಅರ್ಜಿಯನ್ನು ಕಡ್ಡಾಯವಾಗಿ ತುಂಬಿಕೊಡಬೇಕು. ಒಂದು ವೇಳೆ ಅರ್ಜಿಯಲ್ಲಿ ಕುಟುಂಬದ ಮುಖ್ಯ ಸದಸ್ಯರು ಇಲ್ಲದೇ ಇದ್ದರೆ, ಮನೆಯಲ್ಲಿ ಲಭ್ಯವಿರುವ ಇತರ ಸದಸ್ಯರು ಸಹಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ವಿವರಿಸಿದರು.
ಅರ್ಜಿ ಸಲ್ಲಿಸುವ ತಾಂತ್ರಿಕ ವಿವರಗಳ ಬಗ್ಗೆ ಮಾತನಾಡಿದ ಅವರು, ಈ ಹಿಂದೆ ಮತದಾರರ ಪಟ್ಟಿಗೆ ಯಾವ ಫೋನ್ ನಂಬರ್ ನೀಡಲಾಗಿದೆಯೋ, ಅದೇ ನಂಬರ್ ಅನ್ನು ಫಾರ್ಮ್‌ನಲ್ಲಿ ನಮೂದಿಸಬೇಕಾಗುತ್ತದೆ. ಆದರೆ, ಇತ್ತೀಚಿನ ಬದಲಾವಣೆಗಳಿಗೆ ಅನುಗುಣವಾಗಿ ಹೊಸ ಫೋನ್ ನಂಬರ್ ಅನ್ನು ಸೇರಿಸಲು ಸಹ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ನಾನೇನೂ ಹೆಚ್ಚು ಓದಿದವನಲ್ಲ ಆದರೂ ನಾನೂ ಸಹ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡೇ ನನ್ನ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಕೆ ಮಾಡಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಇದೇ ವೇಳೆ ಗ್ಯಾರಂಟಿ ಯೋಜನೆಗಳ ಲಿಂಕ್ ಕುರಿತು ಕಟು ವಾಸ್ತವ ಬಿಚ್ಚಿಟ್ಟ ಸಿಎಂ, ದೇಶದ ಬೇರೆ ರಾಜ್ಯಗಳಲ್ಲಿ ಈಗಾಗಲೇ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುತ್ತಿದೆ. ಮತಪರಿಷ್ಕರಣೆ ನಡೆದ ಬಳಿಕ ಬೇರೆ ರಾಜ್ಯಗಳಲ್ಲಿ ಯಾರೆಲ್ಲಾ ತಮ್ಮ ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೋ, ಅಂತವರಿಗೆ ಅಲ್ಲಿನ ಸರ್ಕಾರಿ ಯೋಜನೆಗಳ ಲಾಭವನ್ನು ಕಡಿತಗೊಳಿಸಲಾಗಿದೆ. ಒಂದು ವೇಳೆ ಜನರಿಗೆ ಮತದಾನದ ಹಕ್ಕೇ ಇಲ್ಲದೇ ಹೋದರೆ ನಾವು ಅವರಿಗೆ ಯಾಕೆ ಗ್ಯಾರಂಟಿ ಯೋಜನೆಗಳನ್ನು ನೀಡಬೇಕು? ಎಲ್ಲಾದರೂ ಒಂದು ಕಡೆ ಗ್ಯಾರಂಟಿ ಕೊಡಲು ನಿಯಮ ಇರಬೇಕಾಗುತ್ತದೆ ಎಂದು ತೀಕ್ಷ್ಣವಾಗಿ ನುಡಿದರು.
ಕೊನೆಯದಾಗಿ ಮತದಾರರ ಜವಾಬ್ದಾರಿಯನ್ನು ನೆನಪಿಸಿದ ಮುಖ್ಯಮಂತ್ರಿಗಳು, ಬೇರೆ ಕಡೆಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳಂತೆ ನಾವು ಸಹ ಕಠಿಣ ನಿರ್ಧಾರ ಕೈಗೊಳ್ಳಲಿದ್ದೇವೆ. ನಮ್ಮ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳು ಏನಿದ್ದರೂ ಅವು ಕೇವಲ ಕರ್ನಾಟಕದ ಅಧಿಕೃತ ಮತದಾರರು ಮತ್ತು ಕರ್ನಾಟಕದ ನಿವಾಸಿಗಳಿಗೆ ಮಾತ್ರ ಸೀಮಿತವಾಗಿರಲಿವೆ. ಆದ್ದರಿಂದ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ತಮ್ಮ ಮನೆಗೆ ಬರುವ ಏನುಮ್ಯುರೇಷನ್ ಫಾರ್ಮ್ ಅನ್ನು ನಿಖರವಾಗಿ ತುಂಬಿಕೊಟ್ಟು, ತಮ್ಮ ಮತದ ಹಕ್ಕನ್ನು ಮತ್ತು ಸರ್ಕಾರದ ಯೋಜನೆಗಳ ಲಾಭವನ್ನು ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದರು.