ರಾಜ್ಯಪಾಲರು VS ಸರ್ಕಾರ 
ರಾಜ್ಯ

ರಾಜ್ಯಪಾಲರು VS ಸರ್ಕಾರ; ಇಲ್ಲಿದೆ ಸಂಪೂರ್ಣ ಚಿತ್ರಣ

ನವದೆಹಲಿ: ರಾಜ್ಯ ಸರ್ಕಾರಗಳು ಮತ್ತು ರಾಜ್ಯಪಾಲರ ನಡುವಿನ ತಿಕ್ಕಾಟ ಮಿತಿಮೀರಿರುವುದು ಸಂವಿಧಾನದ ಆಶಯಗಳಿಗೆ ವ್ಯತಿರಿಕ್ತ ಎಂದೇ ಹೇಳಬಹುದು. ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳದಲ್ಲಿ ಈ ಬೆಳವಣಿಗೆಗಳು ಮತ್ತೆ ಮತ್ತೆ ಘಟಿಸುತ್ತಲೇ ಇದ್ದು, ರಾಜಕೀಯ ಸಮರವಾಗಿ ಮಾರ್ಪಟ್ಟಿದೆ. ಕರ್ನಾಟಕದಲ್ಲೂ ರಾಜ್ಯಪಾಲ ಥಾವರ್​ಚಂದ್ ಗೆಹಲೋತ್ ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಕೆಲ ಸಾಲುಗಳ ಭಾಷಣವನ್ನು ಸಾಂಕೇತಿಕವಾಗಿ ಓದಿ ನಿರ್ಗಮಿಸಿದ್ದಾರೆ.
ಕರ್ನಾಟಕದಲ್ಲಿ ಈ ವಿವಾದ ತಾತ್ಕಾಲಿಕವಾಗಿ ಬಗೆಹರಿದಿದೆ. ಆದರೆ, ಕೇಂದ್ರ ಮತ್ತು ರಾಜ್ಯಗಳಲ್ಲಿ ಬೇರೆ ಬೇರೆ ಪಕ್ಷಗಳ ಸರ್ಕಾರ ಅಸ್ತಿತ್ವದಲ್ಲಿದ್ದಾಗ ವಿರೋಧಕ್ಕಾಗಿ ವಿರೋಧ ಎಂಬ ನೀತಿ ಅನುಸರಿಸಲಾಗುತ್ತಿದೆ. ರಾಜ್ಯಪಾಲರನ್ನು ರಾಜಕೀಯಕ್ಕೆ ಎಳೆದು ತರುವುದು ಸೂಕ್ತ ಅಲ್ಲ. ಅಲ್ಲದೆ, ರಾಜ್ಯಪಾಲರು ಕೂಡ ಸಂವಿಧಾನದ ಆಶಯಗಳಿಗೆ ಧಕ್ಕೆಯಾಗದಂತೆ ಮೌಲ್ಯಗಳನ್ನು ರಕ್ಷಿಸಬೇಕು. ಸುಪ್ರೀಂ ಕೋರ್ಟ್ ಕೂಡ ಈ ನಿಟ್ಟಿನಲ್ಲಿ ಈ ಹಿಂದೆ ಕೆಲವು ಸೂಚನೆಗಳನ್ನು ನೀಡಿದೆ. ಈ ಕುರಿತಾದ ಅವಲೋಕನ ಇಲ್ಲಿದೆ.

ರಾಜಭವನಗಳ ಹೆಸರನ್ನು ಇತ್ತೀಚೆಗಷ್ಟೇ ‘ಲೋಕಭವನ’ವಾಗಿ ಬದಲಾವಣೆ ಮಾಡಲಾಗಿದೆ. ಹೆಸರಷ್ಟೇ ಬದಲಾಗಿದ್ದು, ಇವುಗಳ ಸುತ್ತ ಆವರಿಸಿಕೊಂಡಿರುವ ರಾಜಕೀಯ ಕಾರ್ಮೋಡ ಮಾತ್ರ ಚದುರಿಲ್ಲ.

ದೇಶದ ಕೆಲವು ರಾಜ್ಯಗಳಲ್ಲಂತೂ ರಾಜ್ಯಪಾಲರ ವಿರುದ್ಧ ಅಲ್ಲಿನ ಸರ್ಕಾರಗಳು ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ರಾಜ್ಯಪಾಲರು ಕೂಡ ಸರ್ಕಾರದ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಮುಖ್ಯವಾಗಿ, ಕೇರಳ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ನಡೆದಿರುವ ಬೆಳವಣಿಗೆಗಳು ಕಳವಳಕ್ಕೆ ಕಾರಣವಾಗಿವೆ. ಗವರ್ನರ್ ಅಧಿಕಾರವ್ಯಾಪ್ತಿ ಚರ್ಚೆಗೆ ಗ್ರಾಸವಾಗಿದ್ದರೆ, ಕೆಲ ರಾಜಕೀಯ ಮುಖಂಡರ ವರ್ತನೆ ಬಗ್ಗೆಯೂ ಅಸಹನೆ ವ್ಯಕ್ತವಾಗಿದೆ. ತಮಿಳುನಾಡು ಮತ್ತು ಕೇರಳದಲ್ಲಿ ಹೊಸ ವರ್ಷದ ಮೊದಲ ಅಧಿವೇಶನದಲ್ಲೇ ರಾಜ್ಯ ಸರ್ಕಾರಗಳು ಮತ್ತು ರಾಜ್ಯಪಾಲರ ನಡುವೆ ಜಟಾಪಟಿ ಆರಂಭಗೊಂಡಿದೆ. ವರ್ಷದ ಮೊದಲ ಅಧಿವೇಶನ ಆರಂಭವಾಗುವಾಗ, ಸರ್ಕಾರದ ನೀತಿಗಳನ್ನು ಒಳಗೊಂಡ ಲಿಖಿತ ಭಾಷಣವನ್ನು ರಾಜ್ಯಪಾಲರು ಓದುವುದು ಮೊದಲಿನಿಂದ ಪಾಲಿಸಿಕೊಂಡು ಬಂದಿರುವ ಶಿಷ್ಟಾಚಾರವಾಗಿದೆ.

3ನೇ ಬಾರಿ ಭಾಷಣ ಮಾಡದೆ ಮರಳಿದ ರವಿ

ಡಿಎಂಕೆ ಸರ್ಕಾರ ಸಿದ್ಧಪಡಿಸಿದ್ದ ಸಾಂಪ್ರದಾಯಿಕ ಭಾಷಣವನ್ನು ಓದಲು ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಜ.20ರಂದು ನಿರಾಕರಿಸಿದ್ದು ಭಾರಿ ವಿವಾದಕ್ಕೆ ಕಾರಣವಾಯಿತು. ಭಾಷಣದಲ್ಲಿ ಹಲವು ‘ಅಸಮರ್ಥನೀಯ ಅಂಶಗಳು ಹಾಗೂ ದಾರಿ ತಪ್ಪಿಸುವ ಹೇಳಿಕೆಗಳಿವೆ’ ಎಂದು ರಾಜ್ಯಪಾಲರ ನಡೆಗೆ ಕಾರಣ ಹೇಳಿ ಲೋಕಭವನ ವಿವರಣೆ ನೀಡಿದೆ. ಇದು ಮೊದಲ ಬಾರಿಯೇನಲ್ಲ. ಅಧಿವೇಶನದಲ್ಲಿ ಸತತ ಮೂರನೇ ವರ್ಷ ಭಾಷಣ ಮಾಡದೆ ರವಿ ಮರಳಿದ್ದಾರೆ. ‘ರಾಜ್ಯಪಾಲರ ಮೈಕ್ ಪದೇಪದೆ ಸ್ವಿಚ್ ಆಫ್ ಮಾಡಿ ಅವರಿಗೆ ಮಾತನಾಡಲು ಅವಕಾಶ ನೀಡಲಿಲ್ಲ. ಹಾಗಾಗಿ ಅಲ್ಲಿಂದ ರಾಜ್ಯಪಾಲರು ಹೊರಬರಬೇಕಾಯಿತು ಎಂದು ಲೋಕಭವನ ಸ್ಪಷ್ಟನೆ ನೀಡಿತಾದರೂ, ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ವಿವಾದ ಇನ್ನೂ ಬಗೆಹರಿದಿಲ್ಲ.

ರಾಜ್ಯಪಾಲರು ಶಿಷ್ಟಾಚಾರ ಮರೆತು ವಿಧಾನಮಂಡಲದಿಂದ ನಿರ್ಗಮಿಸಿದರು ಎಂದು ಮುಖ್ಯಮಂತ್ರಿ ಸ್ಟಾಲಿನ್ ಆರೋಪಿಸಿದರು. ಮಾತ್ರವಲ್ಲ, ರಾಜ್ಯಪಾಲರ ನಡೆ ಖಂಡಿಸಿ ಸ್ಟಾಲಿನ್ ಮಂಡಿಸಿದ ನಿರ್ಣಯವನ್ನು ಸದನ ಅಂಗೀಕರಿಸಿತು. ‘ಭಾಷಣ ಓದದೇ ಇರುವ ರಾಜ್ಯಪಾಲರ ವರ್ತನೆಯನ್ನು ಸದನ ಒಪು್ಪವುದಿಲ್ಲ. ಸರ್ಕಾರ ಸಿದ್ಧಪಡಿಸಿರುವ ತಮಿಳು ಭಾಷೆಯಲ್ಲಿರುವ ಭಾಷಣವನ್ನು ಸ್ಪೀಕರ್ ಎಂ.ಅಪ್ಪವು ಓದಿದ್ದು, ಇದು ಮಾತ್ರ ಕಡತಕ್ಕೆ ಹೋಗಲಿದೆ’ ಎಂಬ ಅಂಶಗಳನ್ನು ಈ ನಿರ್ಣಯ ಒಳಗೊಂಡಿದೆ.

ಕೇರಳದಲ್ಲಿ ಮುಗಿಯದ ಜಟಾಪಟಿ

ಸದನವನ್ನು ಉದ್ದೇಶಿಸಿ ಮಾತನಾಡುವ ವೇಳೆ ರಾಜ್ಯಪಾಲ ರಾಜೇಂದ್ರ ಅರ್ಲೆಕರ್ ಭಾಷಣದಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಿದ್ದಾರೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಟೀಕಿಸಿದ್ದಾರೆ. ‘ವಿಧಾನಸಭೆ ಅಧಿವೇಶನ ಆರಂಭದಲ್ಲಿ ಸದನ ಉದ್ದೇಶಿಸಿ ಭಾಷಣ ಓದಿರುವ ರಾಜ್ಯಪಾಲ ರಾಜೇಂದ್ರ ಅರ್ಲೆಕರ್ ಕೇಂದ್ರ ಸರ್ಕಾರದ ವಿರುದ್ಧದ ಕೆಲ ಭಾಗಗಳನ್ನು ಕೈಬಿಟ್ಟಿದ್ದಾರೆ. ಆದರೆ, ಸಂವಿಧಾನದ ಪ್ರಕಾರ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿರುವ ಭಾಷಣಕ್ಕೇ ಪ್ರಾಧಾನ್ಯ ಇರಲಿದೆ’ ಎಂದು ಪಿಣರಾಯಿ ವಿಜಯನ್ ಹೇಳುವ ಮೂಲಕ, ರಾಜ್ಯಪಾಲರ ನಡೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕೇರಳ ವಿಧಾನಸಭೆ ಅಂಗೀಕರಿಸಿದ ಹಲವು ಮಸೂದೆಗಳು ದೀರ್ಘಕಾಲದಿಂದ ಅಂಕಿತಕ್ಕಾಗಿ ಬಾಕಿ ಉಳಿದಿವೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಕೇರಳ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ರಾಜ್ಯದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸಂವಿಧಾನ ಪೀಠಕ್ಕೆ ವರ್ಗಾಯಿಸಿದೆ.

ರಾಜ್ಯ ಸರ್ಕಾರಗಳ ವಾದವೇನು?

  • ಸಂವಿಧಾನದ 176ನೇ ವಿಧಿ ಪ್ರಕಾರ, ರಾಜ್ಯ ಸರ್ಕಾರ ಸಿದ್ಧಪಡಿಸಿರುವ ಭಾಷಣವನ್ನು ರಾಜ್ಯಪಾಲರು ಪೂರ್ತಿಯಾಗಿ ಓದುವುದು ಕಡ್ಡಾಯ.
  • ಸರ್ಕಾರ ಸಿದ್ಧಪಡಿಸಿರುವ ಭಾಷಣ ಓದುವ ವೇಳೆ, ಭಾಷಣಕ್ಕೆ ಸಂಬಂಧಿಸಿ ರಾಜ್ಯಪಾಲರು ತಮ್ಮ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಲು ಇಲ್ಲವೇ ಭಾಷಣದಲ್ಲಿನ ಕೆಲ ಅಂಶಗಳನ್ನು ತೆಗೆದುಹಾಕಲು ಅವಕಾಶವಿಲ್ಲ.
  • ಬಹುಮತ ಪಡೆದು ಅಧಿಕಾರದ ಚುಕ್ಕಾಣಿ ಹಿಡಿದಿರುವ ಸರ್ಕಾರಕ್ಕೆ ರಾಜ್ಯಪಾಲರು ಸಹಕಾರ ನೀಡಬೇಕು.
"

ವರ್ಷದ ಆರಂಭದಲ್ಲಿ ನಡೆಯುವ ವಿಧಾನಸಭೆ ಅಧಿವೇಶನ ವೇಳೆ ಸದನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡುವುದನ್ನು ಕಡ್ಡಾಯಗೊಳಿಸುವ ಅವಕಾಶಗಳನ್ನು ಸಂವಿಧಾನದಿಂದ ತೆಗೆದುಹಾಕಬೇಕು. ಈ ಸಂಬಂಧ ಸಂವಿಧಾನಕ್ಕೆ ತಿದ್ದುಪಡಿ ತರಲು ಡಿಎಂಕೆ ಪಕ್ಷ ಪ್ರಯತ್ನಿಸಲಿದೆ.

ಎಚ್ಚರಿಸಿದ್ದ ಸುಪ್ರೀಂ ಕೋರ್ಟ್

ರಾಜ್ಯ ಸರ್ಕಾರ ಅಂಗೀಕರಿಸಿದ ವಿಧೇಯಕಗಳಿಗೆ ಅಂಕಿತ ಹಾಕದೆ ವಿಳಂಬನೀತಿ ಅನುಸರಿಸುತ್ತಿದ್ದ ಪಂಜಾಬ್ ಮತ್ತು ತಮಿಳುನಾಡು ರಾಜ್ಯಪಾಲರಿಗೆ ಸುಪ್ರೀಂ ಕೋರ್ಟ್ 2023ರ ನವೆಂಬರ್​ನಲ್ಲಿ ಚಾಟಿ ಬೀಸಿ, ‘ನೀವು ಬೆಂಕಿಯೊಂದಿಗೆ ಆಟವಾಡುತ್ತಿದ್ದೀರಿ’ ಎಂದು ಎಚ್ಚರಿಸಿತ್ತು. ರಾಜ್ಯ ಸರ್ಕಾರಗಳು ಅಂಗೀಕರಿಸಿದ ಮಸೂದೆಗಳ ಬಗ್ಗೆ ಆಕ್ಷೇಪಗಳಿದ್ದರೆ, ಅನುಮಾನಗಳಿದ್ದರೆ ರಾಜ್ಯಪಾಲರು ಸ್ಪಷ್ಟನೆ ಕೋರಿ ಅದನ್ನು ಕೂಡಲೇ ಸರ್ಕಾರಕ್ಕೆ ಕಳುಹಿಸಬೇಕೆ ಹೊರತು, ಅನಿರ್ದಿಷ್ಟ ಕಾಲದವರೆಗೆ ಸರ್ಕಾರ ಕಾಯುವಂತೆ ಮಾಡಬಾರದು. ಇದರಿಂದ ಸರ್ಕಾರದ ಕಾರ್ಯನಿರ್ವಹಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಕೋರ್ಟ್ ಹೇಳಿತ್ತು.

ಕಾಲಮಿತಿ ನಿಗದಿ ಪಡಿಸಿದ ನ್ಯಾಯಾಲಯ: ಸಚಿವ ಸಂಪುಟದ ಸಹಾಯ ಮತ್ತು ಸಲಹೆ ಇಲ್ಲದೆ ರಾಜ್ಯಪಾಲರು ಅಂಕಿತ ಹಾಕುವುದನ್ನು ತಡೆಹಿಡಿಯಲು ನಿರ್ಧರಿಸಿದರೆ ಮಸೂದೆಗಳನ್ನು ಮೂರು ತಿಂಗಳೊಳಗೆ ವಿಧಾನಸಭೆಗೆ ಹಿಂದಿರುಗಿಸಬೇಕು. ವಿಧಾನ ಮಂಡಲ ಪುನರ್ವಿಮರ್ಶೆ ನಂತರ ಮಸೂದೆಯನ್ನು ರಾಜ್ಯಪಾಲರಿಗೆ ಮತ್ತೊಮ್ಮೆ ಕಳುಹಿಸಿದರೆ ಅಂಥ ಮಸೂದೆಗೆ ಒಂದು ತಿಂಗಳೊಳಗೆ ರಾಜ್ಯಪಾಲರು ಒಪ್ಪಿಗೆ ನೀಡಬೇಕು. ರಾಜ್ಯಪಾಲರು ಕಾಲಮಿತಿ ಒಳಗೆ ಕಾರ್ಯನಿರ್ವಹಿಸಲು ವಿಫಲವಾದರೆ ನ್ಯಾಯಾಲಯಗಳಿಂದ ನ್ಯಾಯಾಂಗ ಪರಿಶೀಲನೆಗೆ ಒಳಪಡಿಸಬಹುದು. ಹಾಗಾಗಿ ರಾಜ್ಯಪಾಲರು ರಾಜ್ಯ ಶಾಸಕಾಂಗಕ್ಕೆ ಅಡೆತಡೆಗಳನ್ನು ಒಡ್ಡದಂತೆ ಜಾಗೃತರಾಗಿರಬೇಕು ಎಂದು ಸುಪ್ರೀಂ ಕೋರ್ಟ್ 2025ರ ಏಪ್ರಿಲ್​ನಲ್ಲಿ ನೀಡಿದ ತನ್ನ ಆದೇಶದಲ್ಲಿ ತಿಳಿಸಿದೆ.

ವಿಶ್ವವಿದ್ಯಾಲಯಗಳ ಸ್ವಾಯತ್ತತೆ

ಇತ್ತೀಚೆಗೆ ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಕುಲಪತಿಗಳ ನೇಮಕಾತಿ ವಿಷಯದಲ್ಲಿ ದೊಡ್ಡ ಸಂಘರ್ಷಗಳು ನಡೆದಿವೆ. ರಾಜ್ಯ ಸರ್ಕಾರಗಳು ತಮ್ಮ ರಾಜಕೀಯ ಸಿದ್ಧಾಂತಕ್ಕೆ ಪೂರಕವಾದವರನ್ನು ವಿಶ್ವವಿದ್ಯಾಲಯಗಳಿಗೆ ತುರುಕಲು ಪ್ರಯತ್ನಿಸುತ್ತಿವೆ. ರಾಜ್ಯಪಾಲರು ಅಂತಹ ನೇಮಕಾತಿಗಳನ್ನು ಪ್ರಶ್ನಿಸುವ ಮೂಲಕ ಶಿಕ್ಷಣದ ಗುಣಮಟ್ಟ ಮತ್ತು ಸಾಂಸ್ಥಿಕ ಸ್ವಾಯತ್ತತೆಯನ್ನು ಕಾಪಾಡುತ್ತಿದ್ದಾರೆ ಎಂಬ ಸಮರ್ಥನೆ ವ್ಯಾಪಕವಾಗಿದೆ.

ಸೂಕ್ತ ನಿಯಮ ಅಗತ್ಯ

ರಾಜ್ಯಪಾಲರ ನೇಮಕದಲ್ಲಿ ರಾಜಕೀಯ ಪರಿಗಣನೆ ಇರುತ್ತದೆ ಎಂದಾದರೆ, ಅವರನ್ನು ಆ ಸ್ಥಾನದಿಂದ ಕದಲಿಸುವಾಗಲೂ ರಾಜಕೀಯ ನಿರ್ಣಯವೇ ಪ್ರಧಾನ ಪಾತ್ರ ವಹಿಸುತ್ತದೆ. ಇದಕ್ಕೆ ಆ ಪಕ್ಷ ಈ ಪಕ್ಷ ಎಂಬ ಭೇದವಿಲ್ಲ. ಆದ್ದರಿಂದಲೇ, ಲೋಕಭವನ ಎಂದರೆ ರಾಜಕಾರಣಿಗಳ ‘ಪುನರ್ವಸತಿ ಕೇಂದ್ರ’ ಎಂಬ ವ್ಯಾಖ್ಯಾನ ಕೇಳಿಬರುವುದು. ಸಿಎಜಿ, ಸಿವಿಸಿ (ಕೇಂದ್ರೀಯ ಜಾಗೃತದಳ) ಮುಂತಾದ ಸಂವಿಧಾನಿಕ ಸಂಸ್ಥೆಗಳ ಮುಖ್ಯಸ್ಥರ ನೇಮಕಕ್ಕೆ ನಿರ್ದಿಷ್ಟ ನೀತಿನಿಯಮಗಳಿವೆ. ಆದರೆ ರಾಜ್ಯಪಾಲರ ನೇಮಕಕ್ಕೆ ಅಂಥದೇನೂ ನಿಯಮವಿಲ್ಲ; ಕೇಂದ್ರದ ಆಡಳಿತ ಪಕ್ಷದ ಮರ್ಜಿಯ ಮೇಲೆ ನೇಮಕ ನಡೆಯುತ್ತದೆ. ಇದರಿಂದಾಗಿಯೇ, ಸರ್ಕಾರ ಬದಲಾದಾಗ, ರಾಜ್ಯಪಾಲರ ಬದಲಾವಣೆ, ರಾಜೀನಾಮೆಯಂಥ ವಿಷಯಗಳು ಚರ್ಚೆಗೆ ಆಹಾರವಾಗುವುದು. ರಾಜ್ಯಪಾಲರ ನೇಮಕಕ್ಕೆ ಒಂದು ನಿರ್ದಿಷ್ಟ ನಿಯಮ ರೂಪಿಸಿದರೆ ಇಂಥ ಆಭಾಸಗಳನ್ನು ತಡೆಗಟ್ಟಬಹುದು.
ಸುಪ್ರೀಂ ಕೋರ್ಟ್ ಹೇಳಿರುವಂತೆ, ‘ಅಂತರಾತ್ಮದಲ್ಲಿ ಇಣುಕಿ, ಆತ್ಮಸಾಕ್ಷಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು’. ಹಲವು ರಾಜ್ಯಗಳಲ್ಲಿ ಇದೇ ರೀತಿಯ ಸಮಸ್ಯೆ ಇದೆ. ಇದು ಸೌಹಾರ್ದಯುತ ಮಾರ್ಗದಲ್ಲಿ ಬಗೆಹರಿಯಬೇಕು. ರಾಜ್ಯಪಾಲರ ಕಚೇರಿಗಳು ರಾಜಕೀಯ ಚಟುವಟಿಕೆಗಳ ತಾಣವಾಗಬಾರದು. ಅವರ ಅಧಿಕಾರದ ವ್ಯಾಪ್ತಿಯನ್ನು ಸರ್ಕಾರ ಅತಿಕ್ರಮಿಸಬಾರದು. ಎರಡೂ ಕಡೆ ಸಂಯಮ ಹಾಗೂ ಕಾನೂನಿನ ನಿಯಮಗಳ ಕಟ್ಟುನಿಟ್ಟಿನ ಪಾಲನೆ ಅಗತ್ಯವಾಗಿದೆ.

ರಾಜಕೀಯ ಪಕ್ಷಪಾತ

ವಿರೋಧ ಪಕ್ಷಗಳು ರಾಜ್ಯಪಾಲರನ್ನು ‘ಕೇಂದ್ರದ ಏಜೆಂಟ್’ ಎಂದು ಕರೆಯುವುದನ್ನು ಎಲ್ಲರೂ ಒಪ್ಪುವುದಿಲ್ಲ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ (ಉದಾಹರಣೆಗೆ ಇಂದಿರಾ ಗಾಂಧಿ ಅವರ ಕಾಲದಲ್ಲಿ) ಆರ್ಟಿಕಲ್ 356 ಬಳಸಿ ಚುನಾಯಿತ ಸರ್ಕಾರಗಳನ್ನೇ ವಜಾ ಮಾಡಿದ ಉದಾಹರಣೆಗಳಿವೆ. ಪ್ರಸ್ತುತ ರಾಜ್ಯಪಾಲರು ಕೇವಲ ಮಸೂದೆಗಳ ಪರಿಶೀಲನೆ ಅಥವಾ ಸಾಂವಿಧಾನಿಕ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆಯೇ ಹೊರತು ಸರ್ಕಾರಗಳನ್ನೇ ಬೀಳಿಸುತ್ತಿಲ್ಲ ಎಂಬುದು ಗಮನಿಸಬೇಕಾದ ಅಂಶ.

ಪಶ್ಚಿಮ ಬಂಗಾಳದಲ್ಲಿ ಹೊಸದೇನಲ್ಲ

ಪಶ್ಚಿಮ ಬಂಗಾಳದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಮತ್ತು ರಾಜ್ಯಪಾಲ ಸಿ.ವಿ.ಆನಂದ್ ಬೋಸ್ ನಡುವೆ ರಾಜಕೀಯ ವಾಕ್ಸಮರ ತುಂಬ ದಿನಗಳಿಂದ ನಡೆಯುತ್ತಲೇ ಇದೆ. ಬೋಸ್ ಅವರಿಗೆ ಜೀವ ಬೆದರಿಕೆ ಒಡ್ಡಿರುವ ಇ-ಮೇಲ್ ಇತ್ತೀಚೆಗೆ ಬಂದಿದ್ದು, ಭದ್ರತೆ ಹೆಚ್ಚಿಸಲಾಗಿದೆ.

ಸಂವಿಧಾನದ ರಕ್ಷಕನ ಪಾತ್ರ

ರಾಜ್ಯಪಾಲರದು ಕೇವಲ ಅಲಂಕಾರಿಕ ಹುದ್ದೆಯಲ್ಲ. ಸಂವಿಧಾನದ 159ನೇ ವಿಧಿಯಡಿ ಸಂವಿಧಾನವನ್ನು ರಕ್ಷಿಸುವ ಪ್ರಮಾಣವಚನವನ್ನು ಅವರು ಸ್ವೀಕರಿಸಿರುತ್ತಾರೆ. ರಾಜ್ಯ ಸರ್ಕಾರಗಳು ಸಂವಿಧಾನದ ಚೌಕಟ್ಟನ್ನು ಮೀರಿ ನಡೆದಾಗ ಅಥವಾ ರಾಷ್ಟ್ರೀಯ ಅಖಂಡತೆಗೆ ಧಕ್ಕೆ ತರುವಂತಹ ನಿರ್ಧಾರಗಳನ್ನು ಕೈಗೊಂಡಾಗ ರಾಜ್ಯಪಾಲರು ಮಧ್ಯಪ್ರವೇಶಿಸುವುದು ಅವರ ಕರ್ತವ್ಯ. ರಾಜ್ಯ ಸರ್ಕಾರಗಳು ಅಸಾಂವಿಧಾನಿಕ ಹಾದಿ ಹಿಡಿಯದಂತೆ ತಡೆಯುವ ಚೆಕ್ ಆಂಡ್ ಬ್ಯಾಲೆನ್ಸ್ ವ್ಯವಸ್ಥೆಯಾಗಿ ರಾಜ್ಯಪಾಲರ ಹುದ್ದೆಯನ್ನು ಸಂವಿಧಾನ ರೂಪಿಸಿದೆ.

ಸೈದ್ಧಾಂತಿಕ ವಿರೋಧ

ಬಿಜೆಪಿಯೇತರ ರಾಜ್ಯ ಸರ್ಕಾರಗಳು ಕೈಗೊಳ್ಳುವ ಕೆಲವು ನಿರ್ಧಾರಗಳು ಸರಿ ಇಲ್ಲ ಎಂದು ಕಂಡುಬಂದಾಗ ರಾಜ್ಯಪಾಲರು ಅಡ್ಡಿಪಡಿಸುವುದು ಸರಿ ಎಂಬ ನಿಲುವು ವ್ಯಾಪಕವಾಗಿ ವ್ಯಕ್ತವಾಗುತ್ತಿರುತ್ತದೆ. ರಾಜ್ಯ ಸರ್ಕಾರಗಳು ಜನಾದೇಶವನ್ನು ಹೊಂದಿದ್ದರೂ, ಆ ಜನಾದೇಶವು ಸಂವಿಧಾನವನ್ನು ಮೀರಿ ನಡೆಯಲು ಪರವಾನಗಿ ನೀಡುವುದಿಲ್ಲ ಎಂಬ ವಾದವೂ ಇದೆ.