- ತಮಿಳುನಾಡಿನಲ್ಲಿ ಚೆನ್ನೈಗೆ ಪರ್ಯಾಯವಾಗಿ ಕೊಯಮತ್ತೂರು, ಸೇಲಂ, ಮಧುರೈ ಸೇರಿದಂತೆ ಹಲವು ನಗರಗಳನ್ನು ಅಭಿವೃದ್ಧಿಪಡಿಸಿರುವಂತೆ
- ಮುಂದಿನ ಹಂತದಲ್ಲಿ ರಾಯಚೂರು, ಬೆಳಗಾವಿ, ದಾವಣಗೆರೆ, ವಿಜಯಪುರ ಹಾಗೂ ಬಳ್ಳಾರಿ ನಗರಗಳ ಅಭಿವೃದ್ಧಿಗೂ ವಿಶೇಷ ಆದ್ಯತೆ
ತಮಿಳುನಾಡು, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳ ಮಾದರಿಯಲ್ಲಿ ಬೆಂಗಳೂರು ಹೊರತುಪಡಿಸಿ ರಾಜ್ಯದ ಪ್ರಮುಖ ನಗರಗಳ ಅಭಿವೃದ್ಧಿಗೆ ಸರ್ಕಾರ ವಿಶೇಷ ಕಾರ್ಯಯೋಜನೆ ರೂಪಿಸುತ್ತಿದೆ ಎಂದು ಮುಖ್ಯಮಂತ್ರಿಗಳ ಅವರ ಆರ್ಥಿಕ ಸಲಹೆಗಾರ ಎಲ್.ಕೆ. ಅತೀಕ್ ತಿಳಿಸಿದ್ದಾರೆ.
ವಿಜಯವಾಣಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಮೇಲೆ ಜನಸಂಖ್ಯೆ ಹಾಗೂ ಹೂಡಿಕೆಗಳ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೈಸೂರು, ಮಂಗಳೂರು, ಹುಬ್ಬಳ್ಳಿ ಮತ್ತು ಕಲಬುರ್ಗಿ ಸೇರಿದಂತೆ ಟೈರ್-2 ನಗರಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಅಲ್ಲಿಗೆ ಹೆಚ್ಚಿನ ಬಂಡವಾಳ ಹೂಡಿಕೆ ಆಕರ್ಷಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ತಮಿಳುನಾಡಿನಲ್ಲಿ ಚೆನ್ನೈಗೆ ಪರ್ಯಾಯವಾಗಿ ಕೊಯಮತ್ತೂರು, ಸೇಲಂ, ಮಧುರೈ ಸೇರಿದಂತೆ ಹಲವು ನಗರಗಳನ್ನು ಅಭಿವೃದ್ಧಿಪಡಿಸಿರುವಂತೆ, ಮಹಾರಾಷ್ಟ್ರದಲ್ಲಿ ಮುಂಬೈ, ಪುಣೆ, ನಾಗಪುರ ಹಾಗೂ ಗುಜರಾತ್‌ನಲ್ಲಿ ವಿವಿಧ ನಗರಗಳನ್ನು ಸಮಾನವಾಗಿ ಬೆಳೆದಿವೆ. ಹಾಗಾಗಿ ಈ ಮಾದರಿಯನ್ನು ಅಧ್ಯಯನ ಮಾಡಲಾಗಿದೆ. ಅದೇ ರೀತಿಯ ಅಭಿವೃದ್ಧಿ ಮಾದರಿಯನ್ನು ಕರ್ನಾಟಕದಲ್ಲೂ ಅನುಸರಿಸಲು ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು.
ಪ್ರಸ್ತುತ ಉದ್ಯಮಿಗಳು ಉತ್ತಮ ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲ ಲಭ್ಯವಿರುವ ಬೆಂಗಳೂರನ್ನೇ ಆಯ್ಕೆ ಮಾಡುತ್ತಿದ್ದಾರೆ. ಆದರೆ ಮೈಸೂರಿನಲ್ಲಿ ಸೌಲಭ್ಯಗಳು ಹಾಗೂ ರಿಯಾಯಿತಿಗಳನ್ನು ಹೆಚ್ಚಿಸಿರುವ ಪರಿಣಾಮ ಅಲ್ಲಿಯೂ ಹೂಡಿಕೆಗಳು ಹೆಚ್ಚಾಗುತ್ತಿವೆ. ಇದೇ ಮಾದರಿಯನ್ನು ಇತರೆ ಟೈರ್-2 ನಗರಗಳಿಗೂ ವಿಸ್ತರಿಸಲಾಗುವುದು ಎಂದು ಹೇಳಿದರು.
ಮುಂದಿನ ಹಂತದಲ್ಲಿ ರಾಯಚೂರು, ಬೆಳಗಾವಿ, ದಾವಣಗೆರೆ, ವಿಜಯಪುರ ಹಾಗೂ ಬಳ್ಳಾರಿ ನಗರಗಳ ಅಭಿವೃದ್ಧಿಗೂ ವಿಶೇಷ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಮಹಾನಗರ ಪಾಲಿಕೆಗಳಿರುವ ನಗರಗಳಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ಹಾಗೂ ನಗರಾಭಿವೃದ್ಧಿಗೆ ವೇಗ ನೀಡಲು ಪೆರಿಫೆರಲ್ ರಿಂಗ್ ರಸ್ತೆ (ವರ್ತುಲ ರಸ್ತೆ) ನಿರ್ಮಾಣಕ್ಕೂ ಸರ್ಕಾರ ವಿಶೇಷ ಆದ್ಯತೆ ನೀಡಲಿದೆ.
- ಎಲ್.ಕೆ. ಅತೀಕ್, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ