ಬೆಂಗಳೂರು: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದಿಂದ ವಿವಿಧ ಕ್ಷೇತ್ರಗಳಲ್ಲಿ ಸೃಷ್ಟಿಯಾಗುವ ಅವಕಾಶ, ಎದುರಾಗಬಹುದಾದ ಅಪಾಯ ಮತ್ತು ಬಳಕೆ ವಿಧಾನಕ್ಕೆ ಸಂಬಂಧಿಸಿದಂತೆ ರಾಜ್ಯದ ಐಟಿಬಿಟಿ ಇಲಾಖೆ ಸರ್ವೆ ನಡೆಸಿ ಮಹತ್ವದ ಮಾಹಿತಿ ಕಲೆ ಹಾಕಿದೆ. ಎಐನಿಂದಾಗುತ್ತಿರುವ ಬದಲಾವಣೆ ಒಪ್ಪಿಕೊಂಡೇ ವಿವಿಧ ಹಂತದ ವ್ಯವಸ್ಥೆ ರೂಪಿಸಲು ಸರ್ಕಾರ ಸಜ್ಜಾಗುತ್ತಿದೆ.
ಮಾಹಿತಿ ಪ್ರಕಾರ, ಕ್ಷೇತ್ರದಿಂದ ಕ್ಷೇತ್ರಕ್ಕೆ ಎಐ ಅಳವಡಿಕೆ ಪರಿಣಾಮ ಬದಲಾಗುತ್ತಿದ್ದರೂ ಉದ್ಯೋಗಗಳ ಸ್ವರೂಪ ಹಾಗೂ ಕೌಶಲ್ಯ ಅಗತ್ಯಗಳಲ್ಲಿ ಬದಲಾವಣೆ ಕಂಡುಬರುತ್ತಿರುವುದು ಅರಿವಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಎಐ ಅವಕಾಶಗಳು, ಅಪಾಯಗಳು, ಉದ್ಯೋಗ ಕ್ಷೇತ್ರದ ಮೇಲೆ ಹಾಗೂ ಡೇಟಾ ಸಿದ್ಧತೆಯಲ್ಲಿರುವ ಕೊರತೆ ಅರ್ಥಮಾಡಿಕೊಳ್ಳಲು ಇಲಾಖೆಯು ಐಟಿ ವಿಜನ್ ಗ್ರೂಪ್ ಸದಸ್ಯರು ಸಿಇಒ, ಸಿಐಒ, ಸಿಟಿಒಗಳೊಂದಿಗೆ ನಿರಂತರ ಸಮಾಲೋಚನೆ ನಡೆಸುತ್ತಿದೆ. ಎಐ ಪ್ರಮುಖ ಕ್ಷೇತ್ರಗಳ ಮೇಲೆ ಬೀರುವ ಪರಿಣಾಮ ಅರ್ಥಮಾಡಿಕೊಳ್ಳಲು ಅಧ್ಯಯನ ಕೈಗೊಂಡಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.
ಇದರ ಭಾಗವಾಗಿ, ರಾಜ್ಯದ ಪ್ರಮುಖ ಸಂಸ್ಥೆಗಳ ಚೀಫ್ ಟೆಕ್ನಾಲಜಿ ಆಫೀಸರ್, ಚೀಪ್ ಇನ್ಫರ್ವೆಶನ್ ಆಫೀಸರ್, ಚೀಫ್ ಎಕ್ಸ್ಪೀರಿಯನ್ಸ್ ಅಫೀಸರ್ಗಳ ಮತ್ತು ಡಿಜಿಟಲ್ ಕ್ಷೇತ್ರದ ಪ್ರಮುಖರ ಎಐ ರೆಡಿನೆಸ್ ಮತ್ತು ಇಂಪ್ಯಾಕ್ಟ್ ಸರ್ವೆ ನಡೆಸಲಾಗಿದ್ದು, ಉದ್ಯೋಗ ಕ್ಷೇತ್ರದಲ್ಲಿನ ಬದಲಾಗುತ್ತಿರುವ ಕೌಶಲ್ಯ ವಿಶ್ಲೇಷಿಸಲಾಗಿದೆ. ಸಂಸ್ಥೆಗಳು ಗ್ರಾಹಕ ಸೇವೆ, ಐಟಿ ಕಾರ್ಯಾಚರಣೆ, ಮಾರಾಟ, ಮಾರುಕಟ್ಟೆ ಕ್ಷೇತ್ರಗಳಲ್ಲಿ ಎಐ ಬದಲಾವಣೆ ತರುತ್ತಿದೆ, ಐಟಿ ಸಪೋರ್ಟ್, ಸಾಫ್ಟ್ವೇರ್ ಡೆವಲಪ್ವೆುಂಟ್ ಮತ್ತು ಕಸ್ಟಮರ್ ಸಪೋರ್ಟ್ ಕ್ಷೇತ್ರದ ಉದ್ಯೋಗಗಳು ಹೆಚ್ಚು ಪ್ರಭಾವಿತವಾಗಿವೆ.
1. ಎಐ ಅಳವಡಿಕೆಯಿಂದ ಉದ್ಯೋಗಿಗಳ ಕೌಶಲದಲ್ಲಿ ಬದಲಾವಣೆ ಆಗಿದೆ ಎಂದ ಶೇ.65 ಜನ
2. ಉದ್ಯೋಗಿಗಳಲ್ಲಿ ರೀ ಸ್ಕಿಲ್ಲಿಂಗ್, ಅಪ್ ಸ್ಕಿಲ್ಲಿಂಗ್ ಅಗತ್ಯ ಸಾರಿದ ಶೇ.95 ಪರಿಣತರು
3. ಮುಂದಿನ 5 ವರ್ಷದಲ್ಲಿ ಶೇ.85 ದಿನನಿತ್ಯದ ಸಾಮಾನ್ಯ ಕಾರ್ಯ ಎಐ ಮೂಲಕ ಚಾಲು
4. ಶೇ.70ಕ್ಕಿಂತ ಹೆಚ್ಚು ಸಂಸ್ಥೆ ಎಐ ಹಿನ್ನೆಲೆಯಲ್ಲಿ ನೇಮಕಾತಿ ಹೆಚ್ಚಿಸಲು ಯೋಜನೆ , ಶೇ.75 ಸಂಸ್ಥೆಗಳು ಒಟ್ಟು ಉದ್ಯೋಗ ಸೃಷ್ಟಿ ಹೆಚ್ಚಾಗುತ್ತದೆ ಎಂಬ ನಿರೀಕ್ಷೆಯಲ್ಲಿವೆ
5. ಈವರೆಗೆ ಹೆಚ್ಚಿನ ಸಂಸ್ಥೆಗಳು ಸಿಬ್ಬಂದಿ ಸಂಖ್ಯೆಯಲ್ಲಿ ಅಲ್ಪ ಮಟ್ಟದ ಕಡಿತ ಗಮನಿಸಿ ರುವುದಾಗಿ ಹೇಳಿದರೆ, ಶೇ.95 ಸಂಸ್ಥೆಗಳು ಕೌಶಲ್ಯ ಅಗತ್ಯಗಳಲ್ಲಿ ಮಧ್ಯಮದಿಂದ ಹೆಚ್ಚಿನ ಮಟ್ಟದ ಬದಲಾವಣೆ ಒಪ್ಪಿಕೊಂಡಿವೆ