2ನೇ ಆಯುರ್ವೇದ ವಿಶ್ವ ಸಮ್ಮೇಳನ
- * 2ನೇ ಆಯುರ್ವೇದ ವಿಶ್ವ ಸಮ್ಮೇಳನಕ್ಕೆ ಚಾಲನೆ
- * ಶಾಲಾ ಪಠ್ಯದಲ್ಲಿ ಆಯುರ್ವೇದ ಅಳವಡಿಕೆಗೆ ಒತ್ತಾಯ
- * ಡಾ.ವೀರೇಂದ್ರ ಹೆಗ್ಗಡೆ ಮತ್ತಿತರ ಗಣ್ಯರು ಭಾಗಿ
ಬೆಂಗಳೂರು: ಬದಲಾದ ಕಾಲಘಟ್ಟದಲ್ಲಿ ಜನರು ನಾನಾ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದಕ್ಕೆ ಆಯುರ್ವೇದದಲ್ಲಿ ಉತ್ತಮ ಪರಿಹಾರ ಲಭ್ಯವಿದೆ. ಈ ನಿಟ್ಟಿನಲ್ಲಿ ಆಯುರ್ವೇದ ಚಿಕಿತ್ಸಾ ಪದ್ಧತಿ ಕುರಿತು ವೈಜ್ಞಾನಿಕ ಸಂಶೋಧನೆಗಳು ಹೆಚ್ಚೆಚ್ಚು ನಡೆಯಬೇಕು. ಈ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆ ದ್ವಿತೀಯ ಆಯುರ್ವೇದ ವಿಶ್ವ ಸಮ್ಮೇಳನದಲ್ಲಿ ವ್ಯಕ್ತವಾಯಿತು.
ಆಯುಷ್ ಸಚಿವಾಲಯ ಹಾಗೂ ರಾಜ್ಯ ಆಯುಷ್ ಇಲಾಖೆಯ ಸಹಯೋಗದಲ್ಲಿ ಕಜೆ ಆಯುರ್ವೇದಿಕ್ ಚಾರಿಟೇಬಲ್ ಫೌಂಡೇಷನ್ ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ ನಾಲ್ಕು ದಿನಗಳ 2ನೇ ಆಯುರ್ವೇದ ವಿಶ್ವ ಸಮ್ಮೇಳನ ಗುರುವಾರ ಉದ್ಘಾಟನೆಗೊಂಡಿತು.
ರಾಜ್ಯಸಭೆ ಸದಸ್ಯ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮಾತನಾಡಿ, ಆಯುರ್ವೇದ ಚಿಕಿತ್ಸೆ ನೀಡುತ್ತಿರುವವರು, ಇದರಲ್ಲಿ ಅಧ್ಯಯನ ಮಾಡುತ್ತಿರುವವರು ಹಿಂಜರಿಯುವ ಅಗತ್ಯವಿಲ್ಲ. ಪ್ರಸ್ತುತ ಆಯುರ್ವೇದ ಚಿಕಿತ್ಸಾ ಪದ್ಧತಿಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರೆಯುತ್ತಿದ್ದು, ಈ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಂಶೋಧನೆ ಆಗಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿ, ವೈಜ್ಞಾನಿಕ ಅಧ್ಯಯನಕ್ಕೆ ಆದ್ಯತೆ ನೀಡಬೇಕು. ಸ್ಥಳೀಯ ಆಯುರ್ವೇದ ತಜ್ಞರನ್ನೂ ಪ್ರೋತ್ಸಾಹಿಸಬೇಕು ಎಂದರು.
ಆಯುರ್ವೇದದಲ್ಲಿದೆ ಆರೋಗ್ಯ:
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಬದಲಾದ ಜೀವನಶೈಲಿಯಿಂದ ಕ್ಯಾನ್ಸರ್, ಹೃದ್ರೋಗದಂತಹ ಸಾಂಕ್ರಾಮಿಕವಲ್ಲದ ರೋಗಗಳು ಹೆಚ್ಚುತ್ತಿವೆ. ಆರೋಗ್ಯಕರ ಜೀವನಕ್ಕೆ ಆಯುರ್ವೇದ ಸಹಕಾರಿ. ರೋಗ ಬಂದಾಗ ಔಷಧಗಳ ಮೊರೆಹೋಗುವ ಬದಲು, ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸಲು ಯೋಗ ಮತ್ತು ಆಯುರ್ವೇದ ಸಹಕಾರಿಯಾಗಿದೆ ಎಂದು ಹೇಳಿ, ಈ ಚಿಕಿತ್ಸಾ ಪದ್ಧತಿಯಲ್ಲಿ ಸಂಶೋಧನೆಗೆ ಅಗತ್ಯ ಸಹಕಾರ ನೀಡುವ ಭರವಸೆ ವ್ಯಕ್ತಪಡಿಸಿದರು.
ಜಾಲತಾಣಗಳಲ್ಲಿನ ಮಾಹಿತಿ ನಂಬಬೇಡಿ
ಕೇಂದ್ರ ಸರ್ಕಾರವು ಸೆ. 23ರಂದು ಆಯುರ್ವೇದ ದಿನ ಆಚರಿಸುತ್ತಿದ್ದು, ಒಂದು ತಿಂಗಳಪೂರ್ತಿ ಶಾಲೆಗಳಲ್ಲಿ ಆಯುರ್ವೆದದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಇದಲ್ಲದೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ಮತ್ತು ತರಬೇತಿ ಪರಿಷತ್ತು (ಎನ್‌ಸಿಆರ್‌ಟಿ) ಪಠ್ಯದಲ್ಲಿ ಆಯುರ್ವೇದವನ್ನು ಪರಿಚಯಿಸಿದೆ. ಆಯುರ್ವೇದಕ್ಕೆ ಸಂಬಂಧಿಸಿದಂತೆ ವೈಜ್ಞಾನಿಕ ದಾಖಲೆಗಳನ್ನು ಒದಗಿಸಲು ವಿವಿಧ ಸಂಶೋಧನಾ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸಲಹೆಗಳೆಲ್ಲ ಆಯುರ್ವೇದವಲ್ಲ. ಸತ್ಯಾಂಶ ತಿಳಿದು ಪ್ರಯೋಜನ ಪಡೆದುಕೊಳ್ಳಬೇಕು ಎಂದು ಆಯುಷ್ ಸಚಿವಾಲಯದ ಸಲಹೆಗಾರ ಕೌಸ್ತುಭ ಉಪಾಧ್ಯಾಯ ಸಲಹೆ ನೀಡಿದರು.
ಹರಿಹರದ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಮಾತನಾಡಿ, ಆರೋಗ್ಯಯುತ ಜೀವನ ನಡೆಸಲು ನಿತ್ಯದ ಬದುಕಿನಲ್ಲಿ ಯೋಗ ಮತ್ತು ಆಯುರ್ವೇದವನ್ನು ಅಳವಡಿಸಿಕೊಳ್ಳಬೇಕು ಎಂದರು.
ತರಳಬಾಳು ಜಗದ್ಗುರು ಬೃಹನ್ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಆಯುರ್ವೇದದ ಮಹತ್ವ ವಿವರಿಸಿದರು. ನವದೆಹಲಿಯ ಅಖಿಲ ಭಾರತೀಯ ಆಯುರ್ವೇದ ಸಂಸ್ಥೆಯ (ಎಐಐಎ) ನಿರ್ದೇಶಕ ಪ್ರದೀಪ್ ಕುಮಾರ್ ಪ್ರಜಾಪತಿ, ಹಿಮಾಲಯ ವೆಲ್‌ನೆಸ್ ಕಂಪನಿ ಮುಖ್ಯ ಕಾರ್ಯಾಚರಣೆ ಅಧಿಕಾರಿ ಜಯಶ್ರೀ ಉಳ್ಳಾಲ್ ಇತರರು ಉಪಸ್ಥಿತರಿದ್ದರು.
ಆಹಾರವನ್ನೇ ಔಷಧವಾಗಿ ಬಳಸುವುದು ಆಯುರ್ವೇದ ಪದ್ಧತಿ. ಜೀವನ ಪದ್ಧತಿಯ ಮೂಲಕ ಆರೋಗ್ಯ ಪೂರ್ಣವಾಗಿರುವುದು ಆಯುರ್ವೇದದ ಸೂತ್ರ. ವಯಕ್ತಿಕವಾಗಿ ನಾವು ಕೂಡ ಆಯುರ್ವೇದದ ಪ್ರಯೋಜನ ಪಡೆದಿದ್ದು, ಈ ಪದ್ಧತಿ ಇನ್ನಷ್ಟು ಬೆಳಯಲಿ.
ರೋಗ ಬರದಂತೆ ತಡೆಯಲೂ ಆಯುರ್ವೇದ ಸಹಕಾರಿ. ಇಂದು ಕೋಟ್ಯಾಂತರ ಜನರ ಆಯ್ಕೆಯಾಗಿರುವ ಆಯುರ್ವೇದ ಚಿಕಿತ್ಸಾ ಪದ್ಧತಿಗೆ ಪರ್ಯಾಯವಿಲ್ಲ.
ಮಕ್ಕಳಿಗೆ ಬಾಲ್ಯದಿಂದಲೇ ಆಯುರ್ವೇದವನ್ನು ಪರಿಚಯಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಶಾಲಾ ಪಠ್ಯದಲ್ಲಿ ಆಯುರ್ವೇದ ಅಳವಡಿಸಿ, ಒಂದನೇ ತರಗತಿಯಿಂದಲೇ ಬೋಧಿಸಬೇಕಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರವು ಈ ಬಗ್ಗೆ ಗಮನಹರಿಸಬೇಕು.ಆಯುರ್ವೇದ ವೈದ್ಯರು ಹಾಗೂ ವಿದ್ಯಾರ್ಥಿಗಳು ಈ ಚಿಕಿತ್ಸಾ ಪದ್ಧತಿಯ ಜತೆಗೆ ಹೆಚ್ಚಿನ ಪೂರಕ ವಿದ್ಯೆಗಳನ್ನೂ ತಿಳಿದಿರಬೇಕು. ಸದ್ಯ 12ನೇ ತರಗತಿ ಬಳಿಕ ಆಯುರ್ವೇದ ಕಲಿಕೆಗೆ ಅವಕಾಶಗಳಿವೆ. ಇದರಿಂದ ಉನ್ನತ ಅಧ್ಯಯನಕ್ಕೆ ಅನುಕೂಲವಾಗುತ್ತದೆ.