‘Sandipani Shishyavetan Yojana’ launched
- * ಮಾಜಿ ಸಚಿವ ದಿನೇಶ್ ಗುಂಡೂರಾವ್ ಒತ್ತಾಯ
- * 2026-27ನೇ ಸಾಲಿನ ಸಾಂದೀಪನಿ ಶಿಷ್ಯವೇತನ ಯೋಜನೆಗೆ ಚಾಲನೆ
ಬ್ರಾಹ್ಮಣ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ 100 ಕೋಟಿ ರೂ. ಮೂಲ ಬಂಡವಾಳ ಒದಗಿಸುವಂತೆ ಸರ್ಕಾರವನ್ನು ಮಾಜಿ ಸಚಿವ ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಲ್ಲಿ ಬುಧವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ 2026-27ನೇ ಸಾಲಿನ ‘ಸಾಂದೀಪನಿ ಶಿಷ್ಯವೇತನ ಯೋಜನೆ’ಗೆ ಚಾಲನೆ ನೀಡಿ ಮಾತನಾಡಿದರು.
ಮುಂದುವರಿದ ಜನಾಂಗ ಎನಿಸಿಕೊಂಡಿರುವ ಬ್ರಾಹ್ಮಣ ಸಮಾಜದಲ್ಲೂ ಸಾಕಷ್ಟು ಬಡವರಿದ್ದಾರೆ. ಇಂತಹ ಬಡವರ ಅಭಿವೃದ್ಧಿಗೆ ಮಂಡಳಿಯು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಕಿರುಸಾಲ ಯೋಜನೆ, ಪ್ರತಿಭಾ ಪುರಸ್ಕಾರ, ಉನ್ನತ ಶಿಕ್ಷಣಕ್ಕೆ ಸಹಾಯಧನ ಸೇರಿ ವಿವಿಧ ಕಾರ್ಯಕ್ರಮಗಳ ಮೂಲಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಜತೆಗೆ ಬಡ ಬ್ರಾಹ್ಮಣರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕಾರ್ಯವೂ ಆಗುತ್ತಿದೆ ಎಂದರು.
ಮಂಡಳಿಯ ಯೋಜನೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಹಾಗೆಯೇ ಸಾಲ ವಸೂಲಾತಿ ಪ್ರಮಾಣ ಸಹ ಶೇ.98 ಆಗಿದೆ ಎನ್ನುವುದು ಸಂತಸದ ವಿಷಯ. ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಉತ್ತಮ ಶಿಕ್ಷಣ ಪಡೆಯಲಿ ಎನ್ನುವ ಉದ್ದೇಶದಿಂದ ಸಾಂದೀಪಿನಿ ಶಿಷ್ಯವೇತನ ಯೋಜನೆ ಜಾರಿಗೆ ತರಲಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಸಗೋಡು ಜಯಸಿಂಹ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಸಮುದಾಯದ ಬ್ರಾಹ್ಮಣ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವ ಉದ್ದೇಶದಿಂದ ಸಾಂದೀಪನಿ ಶಿಷ್ಯವೇತನ ಜಾರಿಗೊಳಿಸಲಾಗಿದೆ ಎಂದು ಹೇಳಿದರು. ಮಂಡಳಿಯ ವ್ಯವಸ್ಥಾಪಕ ನಿರ್ದೇಶಕಿ ಕೆ. ದೀಪಶ್ರೀ ಹಾಗೂ ಪದಾಧಿಕಾರಿಗಳು ಇದ್ದರು.
ಅರ್ಜಿ ಸಲ್ಲಿಕೆ ವಿವರ
ಶಿಷ್ಯವೇತನ ಸೌಲಭ್ಯ ಪಡೆಯ ಬಯಸುವ ಆಸಕ್ತ ವಿದ್ಯಾರ್ಥಿಗಳು ರಾಜ್ಯದ ಕಾಯಂ ನಿವಾಸಿ ಆಗಿರಬೇಕು. ಆರ್ಥಿಕವಾಗಿ ಹಿಂದುಳಿದ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಡಿ. 31 ಕೊನೆಯ ದಿನ. ವೆಬ್‌ಸೈಟ್: ksbdb.karnataka.gov.in