ರಾಯಚೂರು ಕೈಗಾರಿಕೆಗಳಿಗೂ ಇ-ಖಾತಾ ನೊಂದಣಿ ಕಡ್ಡಾಯಗೊಳಿಸಿರುವ ಸರ್ಕಾರ ಗೊಂದಲಗಳನ್ನು ನಿವಾರಿಸದೇ ಇರುವದರಿಂದ ಹೊಸ ಕೈಗಾರಿಕೆಗಳ ನಿವೇಶನ ನೊಂದಣಿಯಾಗದೇ ಪರದಾಡುವ ಸ್ಥಿತಿ ಎದುರಾಗಿದೆಂದು ರಾಯಚೂರು ಕಾಟನ್ ಮಿಲ್ಲರ್ ಅಸೋಸಿಯೇಷನ ಅಧ್ಯಕ್ಷ ವಿ.ಲಕ್ಷ್ಮೀರೆಡ್ಡಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರದ ಅಧೀನ ಸಂಸ್ಥೆಗಳಾದ ಕೆಐಎಡಿಬಿ, ಎಪಿಎಂಸಿ, ಕೆಎಸ್‌ಎಸ್‌ಐಡಿಸಿ ಹಾಗೂ ಹೌಸಿಂಗ್ ಬೋರ್ಡ್‌ಗಳಿಂದ ಪಡೆದ ನಿವೇಶನಗಳಿಗೂ ಇ-ಖಾತಾ ಕಡ್ಡಾಯಗೊಳಿಸಲಾಗಿದೆ.
ಆದರೆ ಇ-ಖಾತಾ ಯಾರು ಕೊಡಬೇಕೆನ್ನುವದೇ ಸ್ಪಷ್ಟವಾಗಿಲ್ಲ. ಮಹಾನಗರ ಪಾಲಿಕೆ ಆಯುಕ್ತರು ಅದೇ ಸಂಸ್ಥೆಯಿಂದ ಇ-ಖಾತಾ ಪಡೆಯಬೇಕೆನ್ನುತ್ತಾರೆ. ಎಪಿಎಂಸಿ ಸೇರಿದಂತೆ ಕೆಐಎಡಿಬಿ ಸಂಸ್ಥೆಗಳಿಗೆ ಇ-ಖಾತಾ ಕುರಿತು ಯಾವುದೇ ಸರ್ಕಾರ ಆದೇಶ ಬಂದಿಲ್ಲ ಎಂದು ಹೇಳುತ್ತಾರೆ.
ಯಾರಿಂದ ಇ-ಖಾತಾ ಪಡೆಯಬೇಕೆನ್ನುವದೇ ತಿಳಿಯದೇ ಹೋಗಿದೆ. ಕಾವೇರಿ-2 ಆಪ್‌ನಲ್ಲಿ ಇ-ಖಾತಾ ನೊಂದಣಿ ಕಡ್ಡಾಯಗೊಳಸಿದ್ದರಿಂದ ನಿವೇಶನ ನೊಂದಣಿಯಾಗುತ್ತಿಲ್ಲ. ಸಬ್ ರಜಿಸ್ಟ್ರಾರರಿಗೂ ಯಾವುದೇ ಆದೇಶ ಬಂದಿರುವದಿಲ್ಲವೆಂದು ಹೇಳುತ್ತಿದ್ದಾರೆ. ಬ್ಯಾಂಕ್ ಸಾಲ ಮಾಡಿ ನಿವೇಶನ ಖರೀದಿಸಿ ಕೈಗಾರಿಕೆ ಸ್ಥಾಪಿಸಲು ಮುಂದಾಗಿರುವ ಕೈಗಾರಿಕೋಧ್ಯಮಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಈ ಕುರಿತು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್, ಕಂದಾಯ ಸಚಿವ ಕೃಷ್ಣ ಬೈರೆಗೌಡ ಹಾಗೂ ಮುಖ್ಯಮಂತ್ರಿಗಳಿಗೂ ಮನವಿ ನೀಡಲಾಗಿದೆಯಾದರು ಅಧಿಕಾರಿಗಳು ಸಮಸ್ಯೆ ಪರಿಹರಿಸಲು ಮುಂದಾಗುತ್ತಿಲ್ಲ ಆದರಿಂದ ಒಂದು ವಾರದಲ್ಲಿ ಸಮಸ್ಯೆಗೆ ಪರಿಹಾರ ಒದಗಿಸದೇ ಹೋದಲ್ಲಿ ಕೈಗಾರಿಕೆಗಳನ್ನು ಬಂದ್ ಮಾಡಿ ಪ್ರತಿಭಟಿಸಲಾಗುತ್ತದೆಂದು ಎಚ್ಚರಿಸಿದರು
ಈ ಸಂದರ್ಭದಲ್ಲಿ ಪ್ರಮುಖರಾದ ಶಿವಾನಂದ ಚುಕ್ಕಿ, ರಾಕೇಶ ಮಲದಕಲ್, ರಮೇಶ ಇದರು.