ಶ್ರೀನಿವಾಸಪುರ Auction ತಾಲೂಕಿನ ಆವಲಕುಪ್ಪ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿರುವ ಮಾವಿನ ತೋಟದ ಫಸಲಿನ ಬಹಿರಂಗ ಹರಾಜು ಕಾರ್ಯಕ್ರಮದಲ್ಲಿ ಬಿಆರ್ಪಿ ಎಲ್.ವೆಂಕಟಾಚಲಪತಿ, ಎಸ್ಡಿಎಂಸಿ ಅಧ್ಯೆ ಎಂ.ಸ್ವಾತಿ, ಉಪಾಧ್ಯಕ್ಷ ನಾಗರಾಜ್, ಶಿಕ್ಷಕಿ ಪಾರ್ವತಮ್ಮ ಇದ್ದರು.
ಶ್ರೀನಿವಾಸಪುರ: ತಾಲೂಕಿನ ಆವಲಕುಪ್ಪ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿರುವ ಮಾವಿನ ತೋಟದ ಫಸಲು ಈ ಬಾರಿ ಬರೋಬ್ಬರಿ 1.55 ಲಕ್ಷ ರೂ.ಗಳಿಗೆ ಬಹಿರಂಗ ಹರಾಜಾಗಿದೆ. ಶ್ರೀನಿವಾಸಪುರದ ಬಾಳೆಹಣ್ಣಿನ ವ್ಯಾಪಾರಿ ನಯಾಜ್ ಎಂಬುವವರು ಅತಿ ಹೆಚ್ಚು ಬಿಡ್ ಕೂಗುವ ಮೂಲಕ ಈ ಫಸಲನ್ನು ತಮ್ಮದಾಗಿಸಿಕೊಂಡಿದ್ದಾರೆ.
ಹೊದಲಿ ಗ್ರಾಪಂ ವ್ಯಾಪ್ತಿಯ ಆವಲಕುಪ್ಪ ಗ್ರಾಮದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಗೆAuction ಸೇರಿದ 10 ಎಕರೆ ಜಮೀನಿನಲ್ಲಿ ಮಾವಿನ ತೋಟವಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಶಾಲಾ ಆವರಣದಲ್ಲಿ ಬಿಆರ್ಪಿ ಹಾಗೂ ಎಸ್ಡಿಎಂಸಿ ಪದಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪಾರದರ್ಶಕವಾಗಿ ಬಹಿರಂಗ ಹರಾಜು ಪ್ರಕ್ರಿಯೆ ನಡೆಸಲಾಯಿತು.
ಈ ಹರಾಜಿನಲ್ಲಿ ಒಟ್ಟು 11 ಮಂದಿ ಬಿಡ್ದಾರರು ಭಾಗವಹಿಸಿದ್ದರು. ತೀವ್ರ ಪೈಪೋಟಿಯ ನಡುವೆ ನಯಾಜ್ ಅವರು 1.55 ಲಕ್ಷ ರೂ.ಗಳ ಅಂತಿಮ ಬಿಡ್ ಕೂಗುವ ಮೂಲಕ ಹರಾಜನ್ನು ತಮ್ಮದಾಗಿಸಿಕೊಂಡರು.
ಹರಾಜಿನಿಂದ ಬಂದ ಒಟ್ಟು ಮೊತ್ತದ ಹಂಚಿಕೆ ಬಗ್ಗೆ ಮಾಹಿತಿ ನೀಡಿದ ಮುಖ್ಯಶಿಕ್ಷಕ ಶಂಕರಪ್ಪ, ನಿಯಮದಂತೆ ಹರಾಜು ಮೊತ್ತದ ಒಂದು ಭಾಗ ಶಾಲಾ ಅಭಿವೃದ್ಧಿ ಸಮಿತಿಯ ಖಾತೆಗೆ ಜಮೆಯಾಗಲಿದೆ. ಇನ್ನುಳಿದ ಎರಡು ಭಾಗದಷ್ಟು ಮೊತ್ತವನ್ನು ಕಳೆದ ಹಲವು ವರ್ಷಗಳಿಂದ ಈ ಮಾವಿನ ತೋಟವನ್ನು ಶ್ರದ್ಧೆಯಿಂದ ನಿರ್ವಹಣೆ ಮಾಡುತ್ತಿರುವ ಎ.ಎಂ. ಮುಳಬಾಗಿಲಪ್ಪ ಅವರಿಗೆ ನೀಡಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ, ಮಾವಿನ ಫಸಲನ್ನು ಕೀಳುವಾಗ ಮರಗಳಿಗೆ ಹಾಗೂ ರೆಂಬೆಗಳಿಗೆ ಯಾವುದೇ ಹಾನಿಯಾಗದಂತೆ ಜಾಗ್ರತೆ ವಹಿಸಬೇಕು ಎಂದು ಮುಖ್ಯಶಿಕ್ಷಕ ಶಂಕರಪ್ಪ ಬಿಡ್ದಾರರಿಗೆ ಸೂಚನೆ ನೀಡಿದರು.
ನಾರಮಾಕಲಹಳ್ಳಿ ಶಾಲಾ ಮುಖ್ಯ ಶಿಕ್ಷಕ ಎಸ್.ವಿ.ರಮೇಶ್, ಗ್ರಾಪಂ ಮಾಜಿ ಸದಸ್ಯ ಗೋವಿಂದರೆಡ್ಡಿ, ಗ್ರಾಮಸ್ಥರಾದ ಹನುಮಂತಪ್ಪ, ರಾಮಚಂದ್ರ, ಪಿ.ಬಾಲಾಂಜಿ, ನರೇಶ್, ಸಿ.ವೆಂಕಟರವಣ, ಜಿ.ಶಂಕರ್, ಆಂಜಪ್ಪ, ಜಯರಾಮರೆಡ್ಡಿ, ರಾಜಪ್ಪ, ರವಿ, ಶಾರದಮ್ಮ ಇದ್ದರು.