ಕೃಷಿ ಸಚಿವ ಎನ್. ಚಲುವರಾಯಸ್ವಾಮಿ
ಬೆಂಗಳೂರು: ಮಧ್ಯಪ್ರಾಚ್ಯ ಯುದ್ಧದಿಂದ ಉಂಟಾಗಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಸಗೊಬ್ಬರ ಕೊರತೆ ಉಂಟಾಗಲಿದ್ದು, ಸಮಸ್ಯೆ ಎದುರಿಸಲು ಸರ್ಕಾರ ಸಜ್ಜಾಗಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಭರವಸೆ ವ್ಯಕ್ತಪಡಿಸಿದರು.
ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿ, ಯುದ್ಧದ ಕಾರಣ ರಸಗೊಬ್ಬರ ಉತ್ಪಾದನೆ, ಆಮದಿನಲ್ಲಿ ಅಸ್ಥಿರತೆ ಉಂಟಾಗುತ್ತಿದೆ. ಪ್ರಸ್ತುತ ಡಿಎಪಿ 38 ಸಾವಿರ ಮೆಟ್ರಿಕ್ ಟನ್, ಯೂರಿಯಾ 14 ಸಾವಿರ ಮೆಟ್ರಿಕ್ ಟನ್ ಸೇರಿ ಒಟ್ಟಾರೆ 4.25 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಕೊರತೆ ಎದುರಾಗಿದೆ. ರಸಗೊಬ್ಬರ ಕಚ್ಚಾ ವಸ್ತುಗಳ ಆಮದು, ತಯಾರಿಕೆ, ಬೆಲೆ ನಿಗದಿ ಮತ್ತು ಪೂರೈಕೆ ಎಲ್ಲವೂ ಕೇಂದ್ರ ಸರ್ಕಾರದ ಜವಾಬ್ದಾರಿ ಆಗಿದ್ದು, ರಾಜ್ಯ ಸರ್ಕಾರ ಸರಬರಾಜು ಮಾಡುವ ಕೆಲಸ ಮಾತ್ರ ಮಾಡಲಿದೆ. ಕೇಂದ್ರ ಸರ್ಕಾರ ಪೂರೈಕೆ ಮಾಡಿದರೆ ರೈತರಿಗೆ ತಲುಪಿಸುತ್ತೇವೆ ಎಂದರು.
ರಸಗೊಬ್ಬರ ಕೊರತೆ ಎದುರಿಸಲು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ಈ ಬಾರಿ ಎ್ಐಡಿ ನಂಬರ್ ಇದ್ದ ರೈತರಿಗೆ ಜಮೀನು ವಿಸ್ತೀರ್ಣ ಮತ್ತು ಬೆಳೆಗೆ ತಕ್ಕಂತೆ ರಸಗೊಬ್ಬರ ಪೂರೈಕೆಗೆ ನಿರ್ಧಾರ ಮಾಡಲಾಗಿದೆ. ಪರ್ಯಾಯ ಗೊಬ್ಬರಗಳಾದ ಜೈವಿಕ, ಸಾವಯವ, ಹಸಿರೆಲೆ ಗೊಬ್ಬರ ಮತ್ತು ಬೆಳೆಯ ಅವಶೇಷಗಳ ಬಳಕೆಗೆ ಹಾಗೂ ನೈಸರ್ಗಿಕ ಕೃಷಿ, ಸಾವಯವ ಕೃಷಿಗೆ ಉತ್ತೇಜನ ನೀಡಲಾಗುತ್ತಿದೆ ಎಂದು ಕೃಷಿ ಸಚಿವರು ಮಾಹಿತಿ ನೀಡಿದರು.
ಶೇ.100 ನೀರಿನಲ್ಲಿ ಕರಗುವ ಗೊಬ್ಬರ, ಲಘು ಪೋಷಕಾಂಶಗಳು, ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿ ಬಳಕೆಯ ಕುರಿತು ರೈತರಲ್ಲಿ ವ್ಯಾಪಕವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಅಸಮತೋಲನ ರಸಗೊಬ್ಬರ ಬಳಕೆಯಾಗುತ್ತಿರುವ ಪ್ರದೇಶಗಳನ್ನು ಗುರುತಿಸಿ ಮಣ್ಣು ಪರೀಕ್ಷೆ ಆಧಾರದ ಮೇಲೆ ಅಗತ್ಯವಿರುವ ಮತ್ತು ಶಿಾರಸು ಮಾಡಿದ ಪ್ರಮಾಣದಲ್ಲಿ ಮಾತ್ರ ಬಳಕೆ ಮಾಡುವಂತೆ ರೈತರಲ್ಲಿ ಅರಿವು ಮೂಡಿಸಲು ಕೃಷಿ ಇಲಾಖೆಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ರಸಗೊಬ್ಬರಗಳ ಕೃತಕ ಅಭಾವ, ಕಾಳಸಂತೆಯಲ್ಲಿ ಮಾರಾಟ, ಹೆಚ್ಚಿನ ದರದಲ್ಲಿ ಮಾರಾಟ, ಕೃಷಿಯೇತರ ಚಟುವಟಿಕೆಗೆ ಬಳಕೆಯನ್ನು ತಡೆಯಲು ಜಾಗೃತ ತಂಡಗಳನ್ನು ರಚನೆ ಮಾಡಲಾಗಿದೆ ಎಂದರು.
ರೈತರ ಸಹಾಯಕ್ಕಾಗಿ ಆ್ಯಪ್
ಕೃತಕ ಬುದ್ಧಿಮತ್ತೆ(ಎಐ) ತಂತ್ರಜ್ಞಾನ ಬಳಸಿಕೊಂಡು ಮೊಬೈಲ್ ಅಪ್ಲಿಕೇಶನ್ ಸಿದ್ಧಪಡಿಸಲಾಗಿದೆ. ರೈತ ಕರೆ ಕೇಂದ್ರದಲ್ಲಿ ಸಿಗುವ ಎಲ್ಲ ಮಾಹಿತಿಯನ್ನು ಈ ಅಪ್ಲಿಕೇಶನ್‌ನಲ್ಲಿ ಸಿಗಲಿದೆ. ರೈತರು ಬೆಳೆ, ರಸಗೊಬ್ಬರ, ಕೀಟ ನಾಶಕ ಬಳಕೆ, ಯಾವ ಮಳೆಗೆ ಯಾವ ಬೆಳೆ ಬೆಳೆಯಬೇಕೆಂಬ ಮಾಹಿತಿ ನೀಡಲಾಗುತ್ತದೆ. ವಿಡಿಯೋ ಮತ್ತು ಆಡಿಯೋ ರೂಪದಲ್ಲೂ ಮಾಹಿತಿ ಸಿಗಲಿದೆ.ಜೂನ್ ಮೊದಲ ವಾರದಲ್ಲಿ ಮುಖ್ಯಮಂತ್ರಿಯವರ ಸಮುಖದಲ್ಲಿ ಆ್ಯಪ್ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದರು.