ಸಿಎಂ ಶತದಿನ ಕಾರ್ಯ ಪರಾಮರ್ಶೆ
ಯೋಜನೆಗಳ ಪ್ರಗತಿ ಪರಿಶೀಲನೆ
ಬೆಂಗಳೂರು: ರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿದ 100 ದಿನಗಳ ಸಂಭ್ರಮದ ಸಂದರ್ಭದಲ್ಲಿ ಘೋಷಣೆ ಮಾಡಿದ್ದ ಆದ್ಯತೆ ಯೋಜನೆ, ಕಾರ್ಯಕ್ರಮ ಮತ್ತು ನೇಮಕಾತಿಗಳ ಅನುಷ್ಠಾನಕ್ಕಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಚಿವರು ಮತ್ತು ಅಧಿಕಾರಿ ವರ್ಗಕ್ಕೆ ಗಡುವು ನಿಗದಿ ಮಾಡಿದ್ದಾರೆ. ಇನ್ನು ಸಣ್ಣ ಮತ್ತು ಅತಿ ಸಣ್ಣ ರೈತರ ನೆರವಿಗೆ ಧಾವಿಸುವ ಉದ್ದೇಶದಿಂದ ರೂಪಿಸಲಾಗಿರುವ ಮಹತ್ವಾಕಾಂಕ್ಷಿಯ ನೇಗಿಲ ಯೋಗಿ ಯೋಜನೆಯನ್ನು ಅಕ್ಟೋಬರ್ ಅಂತ್ಯದೊಳಗೆ ಅನುಷ್ಠಾನ ಗೊಳಿಸಿ, ನ.1ಕ್ಕೆ ಅಧಿಕೃತ ಚಾಲನೆಗೆ ತಯಾರಿ ಮಾಡಿಕೊಳ್ಳುವಂತೆ ಕೃಷಿ ಸಚಿವರು ಹಾಗೂ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ಮುಖ್ಯಮಂತ್ರಿಗಳ 100 ದಿನಗಳ ಕಾರ್ಯ, ನೇಮಕಾತಿಗಳು ಹಾಗೂ ಆದ್ಯತೆ ಯೋಜನೆಗಳ ಪರಿಶೀಲನೆ ಸಭೆಯನ್ನು ಸಿಎಂ ಡಿ.ಕೆ. ಶಿವಕುಮಾರ್ ನಡೆಸಿ ಸಂಬಂಧಪಟ್ಟ ಇಲಾಖೆಗಳ ಸಚಿವರು ಮತ್ತು ಅಧಿಕಾರಿ ವರ್ಗದಿಂದ ಮಾಹಿತಿ ಪಡೆದರು. 100 ದಿನಗಳ ಸಂಭ್ರಮದಲ್ಲಿ ಘೋಷಣೆ ಮಾಡಿದ್ದ ಯೋಜನೆಗಳನ್ನು ನಿಗದಿತ ಸಮಯದಲ್ಲಿ ಅನುಷ್ಠಾನ ಸಲುವಾಗಿ ಯಾವೆಲ್ಲ ಕ್ರಮ ವಹಿಸಲಾಗಿದೆ ಮತ್ತು ಗುರಿ ತಲುಪಲು ಕೈಗೊಂಡಿರುವ ಉಪಕ್ರಮಗಳು ಏನೆಂಬುದರ ಬಗ್ಗೆ ರ್ಚಚಿಸಿ ಸಿಎಂ ಸಲಹೆ ಸೂಚನೆ ನೀಡಿದರು.
ಎರಡು ತಾಲೂಕಿಗೆ ವಿಸ್ತರಣೆ?: ನೇಗಿಲ ಯೋಗಿ ಯೋಜನೆಯನ್ನು ಪ್ರಾಯೋಗಿಕವಾಗಿ ಪ್ರತಿ ಜಿಲ್ಲೆಯ ಒಂದು ತಾಲೂಕಿನಲ್ಲಿ ಅನುಷ್ಠಾನಗೊಳಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ, ಈಗ 2 ತಾಲೂಕುಗಳಿಗೆ ವಿಸ್ತರಿಸಲು ಸಿಎಂ ಸೂಚಿಸಿದ್ದಾರೆ. 11 ಜಿಲ್ಲಾ ಉಸ್ತುವಾರಿ ಸಚಿವರಿಂದ ಮಾಹಿತಿ ಬಂದಿದ್ದು, ಒಂದು ವಾರದಲ್ಲಿ ಎಲ್ಲ ಜಿಲ್ಲೆಗಳ ಮಾಹಿತಿ ತಲುಪಿಸುವಂತೆ ಸಿಎಂ ತಾಕೀತು ಮಾಡಿದರು. ರೈತರ ಬಳಿ ಲಭ್ಯವಿರುವ ಟ್ರಾ್ಯಕ್ಟರ್ ಹಾಗೂ ಇತರ ಯಂತ್ರೋಪಕರಣಗಳ ಮಾಹಿತಿ ಪಡೆಯಲು ಪ್ರತ್ಯೇಕ ಆಪ್ ಅನ್ನು ಸರ್ಕಾರಿ ಏಜೆನ್ಸಿ ಮೂಲಕ ಅಭಿವೃದ್ಧಿಪಡಿಸಲಾಗುತ್ತಿದೆ.
3 ಎಕರೆ ಹಾಗೂ ಅದಕ್ಕಿಂತ ಕಡಿಮೆ ಭೂಮಿ ಹೊಂದಿರುವ ಬಡ ಮತ್ತು ಸಣ್ಣ ರೈತರ ಜಮೀನುಗಳ ಉಳುಮೆಗೆ ನೆರವಾಗುವ ಸಲುವಾಗಿ ರಾಜ್ಯ ಸರ್ಕಾರ ಓಲಾ, ಉಬರ್ ಮಾದರಿಯಲ್ಲಿ ಮುಖ್ಯಮಂತ್ರಿ ನೇಗಿಲ ಯೋಗಿ ಯೋಜನೆ ಅನುಷ್ಠಾನಕ್ಕೆ ಮಾಸ್ಟರ್ಪ್ಲಾ್ಯನ್ ಮಾಡಿದೆ. ಅದಕ್ಕಾಗಿ ಮೊಬೈಲ್ ಆಪ್ ಅಭಿವೃದ್ಧಿಪಡಿಸಿದ್ದು, ಟ್ರಾ್ಯಕ್ಟರ್, ಇತರ ಕೃಷಿ ಯಂತ್ರೋಪಕರಣ ಇರುವವರು ನೋಂದಣಿ ಮಾಡಿಕೊಳ್ಳಬೇಕು. ನಂತರ ಅಗತ್ಯ ಇರುವ ರೈತರು ಉಳುಮೆಗೆ ಟ್ರಾ್ಯಕ್ಟರ್ ಬುಕ್ಕಿಂಗ್ ಮಾಡಿಕೊಂಡಾಗ ಬಾಡಿಗೆ ಹಣದಲ್ಲಿ ಶೇ.50 ರೈತರು ಪಾವತಿಸಿದರೆ, ಉಳಿದ ಶೇ.50 ಹಣವನ್ನು ಸರ್ಕಾರ ಟ್ರಾ್ಯಕ್ಟರ್ ಮಾಲೀಕರಿಗೆ ಪಾವತಿಸಲಿದೆ. ಇದರಿಂದ 59 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅನುಕೂಲವಾಗಲಿದೆ. ಆರ್ಥಿಕ ಮುಗ್ಗಟ್ಟಿನ ಹಿನ್ನೆಲೆಯಲ್ಲಿ ಕೃಷಿಯಿಂದ ವಿಮುಖ ಆಗುತ್ತಿರುವ ರೈತರಿಗೆ ಕೃಷಿ ವೆಚ್ಚ ತಗ್ಗಿಸಲು ಹಾಗೂ ಭೂಮಿಯನ್ನು ಹದಗೊಳಿಸಲು ನೆರವಾಗುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ.
ಸರ್ಕಾರಿ ಶಾಲೆಯಲ್ಲಿ 6ನೇ ಕ್ಲಾಸ್ನಿಂದ ಎಐ ತರಬೇತಿ
ಪಶು ಸಂಗೋಪನೆಗಾಗಿ 4 ಪ್ರೋಟೀನ್ ಪಾರ್ಕ್ ಅಭಿವೃದ್ಧಿ
ಜವಳಿ ನೀತಿಯ ಮೂಲಕ 5 ಲಕ್ಷ ಉದ್ಯೋಗ ಸೃಷ್ಟಿ ಗುರಿ
100 ದಿನಗಳಲ್ಲಿ 25 ಸಾವಿರ ಕೋಟಿ ರೂ. ಹೂಡಿಕೆ ಗುರಿ
ಕೈಗಾರಿಕಾ ಭೂ ಬ್ಯಾಂಕ್ ಡಿಜಿಟಲೀಕರಣಗೊಳಿಸಲು ಕ್ರಮ
ದ್ವೀಪ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಟೆಂಡರ್ಗೆ ಸೂಚನೆ
ಮುಖ್ಯಮಂತ್ರಿ ರೈತ ಚೈತನ್ಯ ಅಗ್ರಿಟೆಕ್ ಮಿಷನ್ ಯೋಜನೆಯಲ್ಲಿ ರೈತರಿಗೆ 25 ಲಕ್ಷ ಎಸ್ಎಂಎಸ್ ಕಳುಹಿಸಲಾಗಿದೆ. ಜತೆಗೆ ರೈತರಿಗೆ ಸುಲಭವಾಗಿ ಅರ್ಥವಾಗುವಂತೆ ವಿಡಿಯೋ ಸಂದೇಶ ಕಳುಹಿಸಲು ಸೂಚನೆ. ಚಾಟ್ಬಾಟ್ ಸಂಯೋಜನೆ ಪ್ರಗತಿಯಲ್ಲಿದ್ದು, ಡ್ರೋಣ್/ಉಪಗ್ರಹ ಆಧಾರಿತ ಬೆಳೆ ಅಂದಾಜು ನಡೆಸಲು ಮತ್ತು ಡಿಜಿಟಲ್ ಬೆಳೆ ಸಮೀಕ್ಷೆ ಟೆಂಡರ್ ಕರೆಯಲು ಸಿದ್ಧತೆ ನಡೆಯುತ್ತಿದೆ. ಸಮೂಹ ಕೃಷಿ ಕೈಗೊಳ್ಳಲು ರೈತರನ್ನು ಉತ್ತೇಜಿಸಬೇಕು ಹಾಗೂ ವೈಜ್ಞಾನಿಕ ಸಂಸ್ಕರಣೆ ಮತ್ತು ಸಂಗ್ರಹಣೆಗೆ ಮಾರ್ಗದರ್ಶನ ನೀಡಬೇಕು. ಪುಷ್ಪೋದ್ಯಮಕ್ಕೆ ಉತ್ತೇಜನ ನೀಡುವಂತೆ ತೋಟಗಾರಿಕಾ ಸಚಿವರಿಗೆ ತಾಕೀತು ಮಾಡಿದರು.