- ಎನ್‌ಎಸ್‌ಕ್ಯೂಎಫ್ ನಡಿ ಈಗಿರುವ ತಾಂತ್ರಿಕೇತರ ಕೋರ್ಸ್‌ಗಳಾದ ಬ್ಯೂಟಿ ಮತ್ತು ವೆಲ್ನೆಸ್, ರಿಟೇಲ್ ಮತ್ತು ಅಪರೇಲ್ ವಿಷಯಗಳನ್ನು ಕೈ ಬಿಟ್ಟು ಎಐ ವಿಷಯವನ್ನು ಪರಿಚಯಿಸಲಾಗುತ್ತಿದೆ
- ಇನ್ನು ಎಐ ಬೋಧನೆಗೆ ಪ್ರತಿ ಶಾಲೆಗೆ ಒಬ್ಬರಂತೆ ಅತಿಥಿ ಶಿಕ್ಷಕರ ನೇಮಕಕ್ಕೆ ಸೂಚನೆ ನೀಡಲಾಗಿದೆ.
- ಆಯ್ಕೆಯಾದ ಶಿಕ್ಷಕರಿಗೆ ಆಗಸ್ಟ್ ಮೊದಲ ವಾರದಲ್ಲಿ ವಿಶೇಷ ತರಬೇತಿಯನ್ನು ನೀಡಲಾಗುತ್ತದೆ. ಮಾಸಿಕ 20 ಸಾವಿರ ರೂ. ಗೌರವಧನ
ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷ (2026-27) ದಿಂದ ರಾಜ್ಯದ ಸುಮಾರು 1,642 ಸರ್ಕಾರಿ ಪ್ರೌಢಶಾಲೆಗಳಲ್ಲಿ ’ಕೃತಕ ಬುದ್ಧಿಮತ್ತೆ’ ವಿಷಯವನ್ನು ಬೋಧಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ರಾಷ್ಟ್ರೀಯ ಕೌಶಲ ಅರ್ಹತಾ ಚೌಕಟ್ಟು (ಎನ್‌ಎಸ್‌ಕ್ಯೂಎಫ್) ನಡಿ ಈಗಿರುವ ತಾಂತ್ರಿಕೇತರ ಕೋರ್ಸ್‌ಗಳಾದ ಬ್ಯೂಟಿ ಮತ್ತು ವೆಲ್ನೆಸ್, ರಿಟೇಲ್ ಮತ್ತು ಅಪರೇಲ್ ವಿಷಯಗಳನ್ನು ಕೈ ಬಿಟ್ಟು ಎಐ ವಿಷಯವನ್ನು ಪರಿಚಯಿಸಲಾಗುತ್ತಿದೆ ಎಂದು ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರು ತಿಳಿಸಿದ್ದಾರೆ.
ಎನ್‌ಎಸ್‌ಕ್ಯೂಎಫ್ ಹೊಸದಾಗಿ ಆಯ್ಕೆಯಾದ 1,180 ಶಾಲೆಗಳು, 2024-25 ಹಾಗೂ 2025-26ನೇ ಸಾಲಿನಲ್ಲಿ ಅನುಮೋದನೆಗೊಂಡ 381 ಶಾಲೆಗಳು ಮತ್ತು 81 ’ಸಿಂಗಲ್ ಸೆಕ್ಟರ್’ ಶಾಲೆಗಳಲ್ಲಿ ಕೃತಕ ಬುದ್ಧಿಮತ್ತೆ ಪರಿಚಯವಾಗಲಿದೆ.
ಎನ್‌ಎಸ್‌ಕ್ಯೂಎಫ್ ಅನ್ನು ಹೈ ಸ್ಕೂಲ್ನಲ್ಲಿ ತೃತೀಯ ಭಾಷೆಗೆ ಪರ್ಯಾಯವಾಗಿ ಬೋಧಿಸಲಾಗುತ್ತಿದೆ. ಸದ್ಯ ಅಟೋಮೊಬೈಲ್, ಎಲೆಕ್ಟ್ರಾನಿಕ್ಸ್ ಮತ್ತು ಹಾರ್ಡ್‌ವೇರ್, ಐಟಿ/ಐಟಿಇಎಸ್, ರಿಟೇಲ್, ಬ್ಯೂಟಿ ಆ್ಯಂಡ್ ವೆಲ್‌ನೆಸ್ ಹಾಗೂ ಅಪೇರಲ್ ಆೃಂಡ್ ಮೇಡ್ ಅಪ್‌ನಂತಹ ಉದ್ಯೋಗಾಧಾರಿತ ವಿಷಯಗಳು ಎನ್‌ಎಸ್‌ಕ್ಯೂಎ್ ನಲ್ಲಿವೆ.
ಇನ್ನು ಎಐ ಬೋಧನೆಗೆ ಪ್ರತಿ ಶಾಲೆಗೆ ಒಬ್ಬರಂತೆ ಅತಿಥಿ ಶಿಕ್ಷಕರ ನೇಮಕಕ್ಕೆ ಸೂಚನೆ ನೀಡಲಾಗಿದೆ. ನೇಮಕಾತಿಯನ್ನು ಸಂಪೂರ್ಣ ಪಾರದರ್ಶಕವಾಗಿ ಶಾಲೆ ಮಟ್ಟದಲ್ಲಿಯೇ ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಮೂಲಕ ಕೈಗೊಳ್ಳಬೇಕು. ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳ ಅನುಮೋದನೆ ಪಡೆಯುವುದು ಕಡ್ಡಾಯವಾಗಿದೆ.
ಈ ಸಂಪೂರ್ಣ ನೇಮಕಾತಿ ಪ್ರಕ್ರಿಯೆಯನ್ನು ಜು.28ರೊಳಗೆ ಪೂರ್ಣಗೊಳಿಸಬೇಕು. ಆಯ್ಕೆಯಾದ ಶಿಕ್ಷಕರಿಗೆ ಆಗಸ್ಟ್ ಮೊದಲ ವಾರದಲ್ಲಿ ವಿಶೇಷ ತರಬೇತಿಯನ್ನು ನೀಡಲಾಗುತ್ತದೆ. ಮಾಸಿಕ 20 ಸಾವಿರ ರೂ. ಗೌರವಧನ ನೀಡಲಾಗುವುದು ಎಂದು ಸಮಗ್ರ ಶಿಕ್ಷಣ ಕರ್ನಾಟಕ ತಿಳಿಸಿದೆ.