579 ಮದ್ಯದ ಸನ್ನದುಗಳ ಇ-ಹರಾಜು
ಬೆಂಗಳೂರು: ರಾಜ್ಯಾದ್ಯಂತ ಒಟ್ಟು 579 ಮದ್ಯದ ಸನ್ನದುಗಳನ್ನು ಮುಂದಿನ 5 ವರ್ಷಗಳ ಅವಧಿಗೆ ಇ-ಹರಾಜು ಮೂಲಕ ಹಂಚಿಕೆ ಮಾಡಲು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಈ ಸಂಬಂಧ ಬಿಡ್‌ದಾರರ ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಜು.24 ರಿಂದ ಜು. 31ವರೆಗೆ ವಿವಿಧ ಹಂತಗಳಲ್ಲಿ ನೇರ ಹರಾಜು ಪ್ರಕ್ರಿಯೆ ನಡೆಯಲಿದೆ. ಇ-ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 483 ವೈನ್‌ಶಾಪ್(ಸಿಎಲ್-2ಎ) ಮತ್ತು 96 ಬಾರ್ ಆ್ಯಂಡ್ ರೆಸ್ಟೋರೆಂಟ್(ಸಿಎಲ್9-ಎ) ಸನ್ನದುಗಳು ಹರಾಜಿಗೆ ಮುಕ್ತವಾಗಿವೆ. ಬೆಂಗಳೂರು ನಗರದಲ್ಲಿ 119(ಸಿಎಲ್2ಎ) ಮತ್ತು 67 (ಸಿಎಲ್9ಎ) ಸನ್ನದುಗಳು ಲಭ್ಯವಿದೆ.ಪರಿಶಿಷ್ಟ ಜಾತಿ(ಎಸ್ಸಿ) ಮತ್ತು ಪರಿಶಿಷ್ಟ ಪಂಗಡ(ಎಸ್ಟಿ)ದವರಿಗೆ ಸನ್ನದುಗಳ ಮೀಸಲಾತಿ ನೀಡಲಾಗಿದೆ.
ಇ-ಹರಾಜಿನಲ್ಲಿ ಭಾಗವಹಿಸಲು ಯಾವುದೇ ವ್ಯಕ್ತಿ ಅಥವಾ ಏಕವ್ಯಕ್ತಿ ಮಾಲೀಕತ್ವ ಸಂಸ್ಥೆಗಳು ಅರ್ಹರು. ಜತೆಗೆ, ಭಾರತದ ಕಾನೂನುಗಳ ಅಡಿ ನೋಂದಾಯಿಸಲಾದ ಟ್ರಸ್ಟ್, ಸೊಸೈಟಿ, ಪಾಲುದಾರಿಕೆ ಸಂಸ್ಥೆ, ಸೀಮಿತ ಪಾಲುದಾರಿಕೆ ಒಡಂಬಡಿಕೆ ಅಥವಾ ಕಂಪನಿಗಳು ಕೂಡ ಅರ್ಜಿ ಸಲ್ಲಿಸಬಹುದು. ಬಿಡ್ ಮಾಡಲು ಇಚ್ಛಿಸುವವರು ಸಾವಿರ ರೂ.ನೋಂದಣಿ ಶುಲ್ಕ ಮತ್ತು ಅನ್ವಯವಾಗುವ ಜಿಎಸ್‌ಟಿ ಪಾವತಿಸಿ ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಪ್ರತಿ ಸನ್ನದು ಅರ್ಜಿಗೆ 50 ಸಾವಿರ ರೂ.ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಈ ಶುಲ್ಕ ಯಾವುದೇ ಕಾರಣಕ್ಕೂ ಮರುಪಾವತಿಯಾಗುವುದಿಲ್ಲ. ಬಿಡ್‌ದಾರರಿಗೆ ಒಂದಕ್ಕಿಂತ ಹೆಚ್ಚು ಸನ್ನದುಗಳಿಗೂ ಅರ್ಜಿ ಸಲ್ಲಿಸಲು ಅವಕಾಶ ಇದೆ. ಆಯಾ ಜಿಲ್ಲೆಯ ಹರಾಜಿನ ದಿನಕ್ಕೆ ಕನಿಷ್ಠ ಎರಡು ಕೆಲಸದ ದಿನಗಳ ಮೊದಲೇ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ.
ಅಬಕಾರಿ ಇಲಾಖೆಯು ಇ-ಹರಾಜಿನ ಸುಗಮ ನಿರ್ವಹಣೆಗಾಗಿ ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12ವರೆಗೆ ಮೊದಲ ಸ್ಲಾಟ್,ಮಧ್ಯಾಹ್ನ 3 ರಿಂದ ಸಂಜೆ 5ವರೆಗೆ ಎರಡನೇ ಸ್ಲಾಟ್ ಎಂದು ವಿಂಗಡಿಸಿ ವೇಳಾಪಟ್ಟಿ ಸಿದ್ಧಪಡಿಸಿದೆ. ಜು.24ರ ಬೆಳಿಗ್ಗೆ ನಡೆಯುವ ಮೊದಲ ಸ್ಲಾಟ್‌ನಲ್ಲಿ ಬೆಂಗಳೂರು ನಗರ ಜಿಲ್ಲೆ(ಬಿಯುಡಿ-1) ವ್ಯಾಪ್ತಿಯ 21, ಬೀದರ್‌ನ 11 ಮತ್ತು ಹಾವೇರಿಯ 14 ಸೇರಿ ಒಟ್ಟು 46 ಸನ್ನದುಗಳಿಗೆ ಹರಾಜು ನಡೆಯಲಿದೆ. ಅದೇದಿನ ಮಧ್ಯಾಹ್ನದ 2ನೇ ಸ್ಲಾಟ್‌ನಲ್ಲಿ ಬಿಯುಡಿ-5 ವ್ಯಾಪ್ತಿಯ 18, ಚಿಕ್ಕಮಗಳೂರಿನ 12 ಹಾಗೂ ಕಲಬುರಗಿಯ 15 ಸೇರಿ ಒಟ್ಟು 45 ಸನ್ನದುಗಳಿಗೆ ಬಿಡ್ಡಿಂಗ್ ನಡೆಯಲಿದೆ. ಜು.31ವರೆಗೆ ವಿವಿಧ ಜಿಲ್ಲೆಗಳಲ್ಲಿ ಹಂತ ಹಂತವಾಗಿ ಸನ್ನದು ಹರಾಜು ಪ್ರಕ್ರಿಯೆ ನಡೆಯಲಿದೆ.