ಕರ್ನಾಟಕ ಪರೀಕ್ಷಾ ಪ್ರಾಧಿಕಾರ
- ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಪ್ರಕ್ರಿಯೆ ಸರಳೀರಣ ಮಾಡಬೇಕಿದೆ ಎಂದು ಕೆಇಎ ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರನ್ನು ಒತ್ತಾಯಿಸಿದೆ
- ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹಾಗೂ ಇತರೆ ವಿಶ್ವವಿದ್ಯಾಲಯದ ಅಧಿಕಾರಿಗಳೊಂದಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇತ್ತೀಚೆಗೆ ಸಭೆ
- ಅನಗತ್ಯವಾಗಿ ಕೆಲವು ಪ್ರಕ್ರಿಯೆಗಳನ್ನು ಮಾಡುತ್ತಿರುವುದು ಕೂಡ ಸಭೆಯಲ್ಲಿ ಚರ್ಚೆಯಾಗಿದೆ.
ಬೆಂಗಳೂರು: ಕೃಷಿಕ ಕೋಟಾದಡಿ ಸಿಇಟಿಯಲ್ಲಿ ಪ್ರವೇಶ ಪಡೆಯಲು ಕೃಷಿ ವಿಶ್ವವಿದ್ಯಾಲಯಗಳು ನಡೆಸುವ ಪ್ರಾಯೋಗಿಕ ಪರೀಕ್ಷೆ ಫಲಿತಾಂಶ ಪ್ರಕಟಣೆಯಲ್ಲಿ ವಿಳಂಬನೀತಿ ಅನುಸರಿಸುತ್ತಿರುವುದರಿಂದ ಸಿಇಟಿ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿದೆ. ವಿದ್ಯಾರ್ಥಿಗಳ ದೃಷ್ಟಿಯಿಂದ ಪ್ರಕ್ರಿಯೆ ಸರಳೀಕರಣ ಮಾಡಲು ಸರ್ಕಾರ ಚರ್ಚೆಗೆ ಮುಂದಾಗಿದೆ.
ರಾಜ್ಯದ ಕೃಷಿ ಮತ್ತು ಸಂಬಂಧಿತ ವಿಶ್ವವಿದ್ಯಾಲಯಗಳಲ್ಲಿ ಪದವಿ ಪ್ರವೇಶಾತಿಗೆ ಕೃಷಿಕರ ಕೋಟಾದಡಿ ಅರ್ಜಿ ಸಲ್ಲಿಸಿದವರಿಗೆ ಕೃಷಿ ವಿಶ್ವವಿದ್ಯಾಲಯದವರು ಪ್ರಾಯೋಗಿಕ ಪರೀಕ್ಷೆ ನಡೆಸುತ್ತಾರೆ. ಇವರು ಪರೀಕ್ಷೆ ನಡೆಸಿ, ಫಲಿತಾಂಶ ನೀಡುವುದು ಪ್ರತಿ ವರ್ಷ ತಡವಾಗುತ್ತಿದ್ದು, ಪ್ರಾಧಿಕಾರವು ಸಿಇಟಿ ಫಲಿತಾಂಶ ಪ್ರಕಟಿಸಲು ತೊಂದರೆಯಾಗುತ್ತಿದೆ. ಇದರಿಂದ ಕೌನ್ಸೆಲಿಂಗ್ ಪ್ರಕ್ರಿಯೆ ಮೇಲೆಯೂ ನಕಾರಾತ್ಮಕ ಪರಿಣಾಮಗಳು ಉಂಟಾಗುತ್ತಿವೆ.
ಕೆಇಎ ವಾದವೇನು?
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುವ ಸಿಇಟಿ ಪರೀಕ್ಷೆ ನೋಂದಣಿ ವೇಳೆಯಲ್ಲಿಯೇ ವಿದ್ಯಾರ್ಥಿಗಳ ಎಲ್ಲ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಪಡೆದು ಪರಿಶೀಲಿಸಲಾಗುತ್ತದೆ. ಹೀಗಿದ್ದರೂ ಕೃಷಿ ವಿಶ್ವವಿದ್ಯಾಲಯಗಳು ಎಲ್ಲ ದಾಖಲೆಗಳನ್ನು ಮತ್ತೆ ಅಪ್‌ಲೋಡ್ ಮಾಡಲು ತಿಳಿಸುತ್ತಾರೆ. ಅಲ್ಲದೆ, ಎರಡು ಸೆಟ್ ಅಫಿಡೆವಿಟ್‌ಗಳನ್ನು ಸಹ ಪಡೆಯುತ್ತಿದ್ದು, ಇದು ವಿದ್ಯಾರ್ಥಿಗಳಿಗೆ ಆರ್ಥಿಕ ತೊಂದರೆಯಾಗುತ್ತಿದೆ. ಇದರ ಅಗತ್ಯವಿರುವ ಬಗ್ಗೆ ಪರಿಶೀಲಿಸುವುದು ಸೂಕ್ತವಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಪ್ರಕ್ರಿಯೆ ಸರಳೀರಣ ಮಾಡಬೇಕಿದೆ ಎಂದು ಕೆಇಎ ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರನ್ನು ಒತ್ತಾಯಿಸಿದೆ.
ಕೃಷಿ ವಿವಿ, ಅಧಿಕಾರಿಗೊಂದಿಗೆ ಸಭೆ:
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹಾಗೂ ಇತರೆ ವಿಶ್ವವಿದ್ಯಾಲಯದ ಅಧಿಕಾರಿಗಳೊಂದಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇತ್ತೀಚೆಗೆ ಸಭೆ ನಡೆಸಿದೆ. ಅಲ್ಲದೆ, ಎಲ್ಲ ವಿಶ್ವವಿದ್ಯಾಲಯದ ಅಧಿಕಾರಿಗಳೊಂದಿಗೆ ಮತ್ತೊಮ್ಮೆ ಮತ್ತೊಂದು ಸಭೆ ವೀಡಿಯಾ ಸಂವಾದ ಕೂಡ ನಡೆಸಿದೆ.
ಆದರೂ ಅನಗತ್ಯವಾಗಿ ಕೆಲವು ಪ್ರಕ್ರಿಯೆಗಳನ್ನು ಮಾಡುತ್ತಿರುವುದು ಕೂಡ ಸಭೆಯಲ್ಲಿ ಚರ್ಚೆಯಾಗಿದೆ. ಇದರಿಂದಲೇ ವಿಳಂಬವಾಗುತ್ತಿರುವುದು ಕೂಡ ಸಭೆಯಲ್ಲಿ ಒಪ್ಪಿಕೊಳ್ಳಲಾಗಿದೆ.
ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆ ಏನು?
ಸಾಮಾನ್ಯವಾಗಿ ವಿದ್ಯಾರ್ಥಿಗಳು ಸಿಇಟಿಗೆ ಅರ್ಜಿ ಸಲ್ಲಿಸುವ ವೇಳೆ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ತಂದೆ-ತಾಯಿ ಹೆಸರು, ಮೀಸಲಾತಿ ಪಡೆಯಲು ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಕೃಷಿಕ ಕೋಟಾಕ್ಕೆ ವ್ಯವಸಾಯಗಾರರ ಪ್ರಮಾಣಪತ್ರ ಸೇರಿ ಎಲ್ಲ ದಾಖಲೆಗಳನ್ನು ಕೆಇಎಗೆ ಸಲ್ಲಿಸಲಾಗಿರುತ್ತದೆ. ಹೀಗಿರುವಾಗ ಮತ್ತೊಮ್ಮೆ ವಿದ್ಯಾರ್ಥಿಗಳು ದಾಖಲೆಗಳನ್ನು ಸಲ್ಲಿಸುವ ಅಗತ್ಯವೇನಿದೆ. ಆದಾಯ ಪ್ರಮಾಣಪತ್ರದಲ್ಲಿ ನಮೂದಿಸಿರುವ ಮತ್ತು ಅಫಿಡವಿಟ್‌ನಲ್ಲಿ ೋಷಿಸಿರುವ ಆದಾಯ ಒಂದೇ ಆಗಿರಬೇಕು. ಇಲ್ಲವಾದಲ್ಲಿ ಅರ್ಜಿಯನ್ನು ಪರಿಗಣಿಸುವುದಿಲ್ಲ ಎಂಬ ಸೂಚನೆಯನ್ನು ನೀಡಲಾಗಿರುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಎರಡೆರಡು ಬಾರಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಅನಗತ್ಯವಾಗಿ ಸಮಯ ವ್ಯರ್ಥವಾಗುವ ಜತೆಗೆ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿಯೂ ಹೊರೆಯಾಗುತ್ತದೆ.
ಕೃಷಿಕರ ಕೋಟಾ ಅರ್ಜಿ ಪರಿಗಣಿಸಲು ಕೃಷಿ ವಿವಿ, ಕೆಇಎಗೆ ಸಲ್ಲಿಸಬೇಕಿರುವ ದಾಖಲೆಗಳು?
- ಸಿಇಟಿ ಪರೀಕ್ಷಾ ಪ್ರವೇಶ ಪತ್ರ
- ಕಂದಾಯ ಇಲಾಖೆಯು ನೀಡುವ ಆರ್‌ಡಿ ಸಂಖ್ಯೆ ಸಹಿತ ವ್ಯವಸಾಯಗಾರರ/ಕೃಷಿ ಸಂಬಂಧಿತ ಕೂಲಿ ಕಾರ್ಮಿಕರ ಪ್ರಮಾಣ ಪತ್ರ.
- ಅವಿಭಾಜ್ಯ ಕುಟುಂಬವಾಗಿದ್ದಲ್ಲಿ ಪೂರಕವಾದ ವಂಶವೃಕ್ಷ ಪ್ರಮಾಣ ಪತ್ರ. ಆರ್‌ಡಿ ಸಂಖ್ಯೆ ಮತ್ತು ಕ್ಯೂಆರ್ ಕೋಡ್‌ನೊಂದಿಗೆ ತಹಶೀಲ್ದಾರ್ ಕೊಡುವ ಪ್ರಮಾಣಪತ್ರ
- ಅಡವಿಟ್-1 (ಕೇವಲ ಕೃಷಿ ಒಂದೇ ಆಗಿದ್ದಲ್ಲಿ)
- ಅಫಿಡವಿಟ್-2 (ಕೃಷಿ ಜತೆಗೆ ಇತರೆ ವ್ಯವಹಾರಗಳನ್ನು ಹೊಂದಿದ್ದಲ್ಲಿ)
ಕೃಷಿ ಕೋಟಾ ಸೀಟು ಪಡೆಯುವ ವಿದ್ಯಾರ್ಥಿಗಳ ಪ್ರಾಯೋಗಿಕ ಪರೀಕ್ಷೆ ಫಲಿತಾಂಶ ವಿಳಂಬವಾಗುತ್ತಿರುವ ಪರಿಣಾಮ, ಕೃಷಿಕರ ಕೋಟಾ ಅಭ್ಯರ್ಥಿಗಳ ಜತೆಗೆ ಇತರೆ ಲಕ್ಷಾಂತರ ಅಭ್ಯರ್ಥಿಗಳು ಸಿಇಟಿ ಫಲಿತಾಂಶಕ್ಕಾಗಿ ಕಾಯಬೇಕಾಗಿದೆ. ಸಮಸ್ಯೆ ಇತ್ಯರ್ಥಪಡಿಸಲು ಕೃಷಿ ವಿವಿ ಮತ್ತು ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ.- ಎಚ್. ಪ್ರಸನ್ನ, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ