ಬೆಂಗಳೂರು: ಬೆಂಗಳೂರು ಮಹಾನಗರದ ಜನತೆ ಮೇಲೆ ರಾಜ್ಯ ಕಾಂಗ್ರೆಸ್ ಸರ್ಕಾರ ತೆರಿಗೆ ಮೇಲೆ ತೆರಿಗೆ ಹಾಕಿ ಸುಲಿಗೆ ಮಾಡುತ್ತಿದೆ ಎಂದು ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಆರೋಪಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲದರ ಮೇಲೆ ತೆರಿಗೆ ಹೆಚ್ಚಳ ಮಾಡಲಾಗಿದೆ. ಆಸ್ತಿ ತೆರಿಗೆ ಮೂರು ಪಟ್ಟು, ನೀರಿನ ಬಿಲ್ ಶೇ.50 ಹಾಗೂ ವಿದ್ಯುತ್ ದರ ಶೇ.30 ಏರಿಕೆ ಮಾಡಲಾಗಿದೆ. ಕಸ ವಿಲೇವಾರಿ ತೆರಿಗೆ 4 ಪಟ್ಟು ಏರಿಕೆ ಮಾಡಿ ಜನರನ್ನು ಕಾಂಗ್ರೆಸ್ ಸರ್ಕಾರ ಸುಲಿಗೆ ಮಾಡುತ್ತಿದೆ ಎಂದು ಕಿಡಿಕಾರಿದರು.
ಬೆಂಗಳೂರು ಜನರಿಂದ ಸರ್ಕಾರಕ್ಕೆ ಹೆಚ್ಚಿನ ತೆರಿಗೆ ಬರುತ್ತದೆ. ಆದರೆ ಅವರಿಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳನ್ನು ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ನಗರದಲ್ಲಿ ಉಸಿರಾಡಲೂ ಹಣ ಕೊಡಬೇಕಾಗಿದೆ. ಇದನ್ನು ಬಿಜೆಪಿ ಖಂಡಿಸುತ್ತದೆ ಎಂದರು.
ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಯಾವಾಗಲೂ ವಿವಾದಾತ್ಮಕ ಹೇಳಿಕೆ ನೀಡುತ್ತಾರೆ. ಅವರು ಬೇಜವಾಬ್ದಾರಿ ಅಧ್ಯಕ್ಷರು. ದೇಶ ವಿರೋಧಿಗಳನ್ನೇ ದೇಶಭಕ್ತರು ಎಂದು ಹೇಳುತ್ತಾರೆ. ಹಿಂದೆಯೂ ಇಂತಹುದೇ ಹೇಳಿಕೆ ನೀಡಿದ್ದರು ಎಂದು ಅಶ್ವತ್ಥನಾರಾಯಣ್ ಉತ್ತರಿಸಿದರು.