ಭಂಕೂರ, ಶಾಂತನಗರ, ಎಬಿಎಲ್​ ಕ್ರಾಸ್​ಗಳಲಿ ಎಕ್ಸ್​ಪ್ರೆಸ್​ ಸಹಿತ ಎಲ್ಲ ಬಸ್​ಗಳ ನಿಲುಗಡೆಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಭಂಕೂರ ಕ್ರಾಸ್​ ಬಳಿ ರಸ್ತೆಯಲ್ಲಿ ಸಂಚಾರ ತಡೆದು ಎಸ್​ಯುಸಿಐ(ಸಿ) ಸಂಟನೆಯಿಂದ ಪ್ರತಿಭಟನೆ ನಡೆಸಿ ಚಿತ್ತಾಪುರ ಡಿಪೋ ಉಪ ವ್ಯವಸ್ಥಾಪಕ ಗೊಲ್ಲಾಳಪ್ಪ ಬಿರಾದಾರಗೆ ಮನವಿ ಸಲ್ಲಿಸಲಾಯಿತು. ರಾವೇಂದ್ರ ಎಂ.ಜಿ., ಗಣಪತರಾವ ಮಾನೆ, ಜಗನ್ನಾಥ ಎಚ್​.ಎಚ್​., ಗುಂಡಮ್ಮ ಮಡಿವಾಳ ಇತರರಿದ್ದರು. 
ರಾಜ್ಯ

ಸಮರ್ಪಕ ಸಾರಿಗೆ ಸೌಕರ್ಯ ಕಲ್ಪಿಸುವಲ್ಲಿ ಸರ್ಕಾರ ವಿಫಲ

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಸಮಿತಿ ಸದಸ್ಯ ಎಂ.ಶಶಿಧರ ಟೀಕೆ
  • ಭಂಕೂರ ಕ್ರಾಸ್​ನಲ್ಲಿ ಎಸ್​ಯುಸಿಐ (ಎಂ) ಸಂಟನೆಯಿಂದ ಪ್ರತಿಭಟನೆ
ಶಹಾಬಾದ್​: ದೇಶ ಸ್ವಾತಂತ್ರಗೊಂಡು ಏಳು ದಶಕ ಕಳೆದರೂ ಜನಸಾಮಾನ್ಯರಿಗೆ ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿವೆ ಎಂದು ಎಸ್​ಯುಸಿಐ(ಸಿ) ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಶಶಿಧರ ಟೀಕಿಸಿದರು.
ಎಬಿಎಲ್​ ಕ್ರಾಸ್​, ಶಾಂತನಗರ ಹಾಗೂ ಭಂಕೂರ ಕ್ರಾಸ್​ನಲ್ಲಿ ಎಕ್ಸ್​ಪ್ರೆಸ್​ ಹಾಗೂ ಎಲ್ಲ ಬಸ್​ಗಳ ನಿಲುಗಡೆ ಮಾಡಬೇಕು ಎಂದು ಒತ್ತಾಯಿಸಿ ಭಂಕೂರ ಕ್ರಾಸ್​ನಲ್ಲಿ ರಸ್ತೆ ಸಂಚಾರ ತಡೆದು ಎಸ್​ಯುಸಿಐ (ಎಂ) ಸಂಟನೆಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ನಗರದಿಂದ ಸುತ್ತಲಿನ ಗ್ರಾಮಗಳಿಗೆ ಹೋಗಲು ಸಮರ್ಪಕ ಬಸ್​ ವ್ಯವಸ್ಥೆ ಇಲ್ಲ. ಭಂಕೂರ, ವಾಡಿ ಕ್ರಾಸ್​ ಬಳಿ ಬಸ್​ಗಳು ನಿಲ್ಲಿಸದಿರುವುದರಿಂದ ಶಹಾಬಾದ್​ನಿಂದ ನಿತ್ಯ ಯಾದಗಿರಿ, ಕಲಬುರಗಿ, ಚಿತ್ತಾಪುರಕ್ಕೆ ಹೋಗಿ ಬರಲು ವ್ಯಾಪಾರಸ್ಥರು, ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದು ಕಿಡಿಕಾರಿದರು.
ಶಹಾಬಾದ್​ ಮಾರ್ಗವಾಗಿ ಸಂಚರಿಸುವ ಕಲಬುರಗಿ, ಯಾದಗಿರಿ, ಚಿತ್ತಾಪುರ, ರಾಯಚೂರ ಬಸ್​ಗಳನ್ನು ಭಂಕೂರ, ಶಾಂತನಗರ, ಎಬಿಎಲ್​ ಕ್ರಾಸ್​ ಬಳಿ ಕಡ್ಡಾಯವಾಗಿ ನಿಲ್ಲಿಸಬೇಕು. ಹೆಚ್ಚಿನ ಬಸ್​ಗಳನ್ನು ಈ ಮಾರ್ಗದಲ್ಲಿ ಓಡಿಸಬೇಕು. ಶಹಾಬಾದ್​ನಿಂದ ಯಾದಗಿರಿಗೆ ಬಸ್​ ಓಡಿಸಬೇಕು. ಭಂಕೂರ, ಎಬಿಎಲ್​ ಕ್ರಾಸ್​ ಬಳಿ ಬಸ್​ ತಂಗುದಾಣ ನಿರ್ಮಿಸಬೇಕು. ಎಬಿಎಲ್​ ಕ್ರಾಸ್​ ಬಳಿ ಸಂಚಾರಿ ನಿಯಂತ್ರಕರನ್ನು ನೇಮಿಸಬೇಕು. ನಿಗದಿತ ಸಮಯಕ್ಕೆ ಬಸ್​ಗಳು ಸಂಚರಿಸಲು ಕ್ರಮ ಕೈಗೊಳ್ಳಬೇಕು. ಶಹಾಬಾದ್​ಗೆ ಬಸ್​ ಡಿಪೋ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ಚಿತ್ತಾಪುರ ಡಿಪೋ ಉಪ ವ್ಯವಸ್ಥಾಪಕ ಗೊಲ್ಲಾಳಪ್ಪ ಬಿರಾದಾರ ಮನವಿ ಸ್ವೀಕರಿಸಿ ಮಾತನಾಡಿ, ಎಕ್ಸ್​ಪ್ರೆಸ್​ ಸಹಿತಿ ಎಲ್ಲ ಬಸ್​ಗಳನ್ನು ಭಂಕೂರ, ಎಬಿಎಲ್​ ಕ್ರಾಸ್​ನಲ್ಲಿ ನಿಲ್ಲಿಸಲಾಗುವುದು. ಅಲ್ಲದೆ ಸಂಚಾರಿ ನಿಯಂತ್ರಕರನ್ನು ನೇಮಿಸಲು ಕ್ರಮ ಕೈಗೊಳ್ಳಲಾಗುವುದು. ಹೆಚ್ಚಿನ ಬಸ್​ಗಳನ್ನು ಓಡಿಸಲು ಆಯಾ ಡಿಪೋಗಳಿಗೆ ಪತ್ರ ಬರೆಯುವುದಾಗಿ ಭರವಸೆ ನೀಡಿದರು. ಸಾರಿಗೆ ಅಧಿಕಾರಿಗಳಾದ ಭೀಮಶಾ, ವಿಜಯಕುಮಾರ ಜತೆಗಿದ್ದರು.
ಪ್ರಮುಖರಾದ ಗಣಪತರಾವ ಮಾನೆ, ಭಾಗಣ್ಣ ಬುಕ್ಕಾ, ಜಗನ್ನಾಥ ಎಸ್​.ಎಚ್​., ರಾವೇಂದ್ರ ಎಂ.ಜಿ., ಗುಂಡಮ್ಮ ಮಡಿವಾಳ, ರಾಜೇಂದ್ರ ಆತ್ನೂರ್​, ನೀಲಕಂಠ ಹುಲಿ, ರಮೇಶ ದೇವಕರ್​, ಮಹಾದೇವಿ ಮಾನೆ, ಸಿದ್ದು ಚೌಧರಿ, ಸ್ಫೂರ್ತಿ ಗುರಜಾಲಕರ್​, ದೇವರಾಜ ಹೊನಗುಂಟಾ, ಅಜಯ ಗುರಜಾಲಕರ್​, ರು ಪವಾರ್​, ತಿಮ್ಮಣ್ಣ ಮಾನೆ, ತೇಜಸ್​ ಇಬ್ರಾಹಿಂಪುರ, ದೇವರಾಜ, ಆನಂದ, ರಾಧಿಕಾ ಚೌಧರಿ ಇತರರಿದ್ದರು.