ಒಳಮೀಸಲಾತಿ ಹಂಚಿಕೆ ವಿಚಾರ ಸಂಪುಟ ಸಭೆಯಲ್ಲಿ ನಿರ್ಣಯ 
ರಾಜ್ಯ

5.25, 5.25, 4.5... ಒಳಮೀಸಲಾತಿ ಸಮಾನ ಹಂಚಿಕೆಗೆ ರಾಜ್ಯ ಸರ್ಕಾರ ಅಸ್ತು; ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

ಪ್ರಮುಖ ಮುಖ್ಯಾಂಶಗಳು

  • ಒಳಮೀಸಲಾತಿ ಕಗ್ಗಂಟಿಗೆ ಅಂತ್ಯ ಹಾಡಿದ ಸರ್ಕಾರ
  • ಸಮಾನ ಹಂಚಿಕೆಗೆ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ
  • ಶೇ.15ರಲ್ಲಿ ಮೂರು ಸಮುದಾಯಕ್ಕೂ ತಲಾ 5ರಷ್ಟು ಮೀಸಲಾತಿ ಹಂಚಿಕೆ
ಬೆಂಗಳೂರು: ಒಳಮೀಸಲಾತಿ ಕಗ್ಗಂಟಿಗೆ ಕಡೆಗೂ ಅಂತ್ಯವಾಡಿರುವ ರಾಜ್ಯ ಸರ್ಕಾರ, ಬಲಗೈ, ಎಡಗೈ ಮತ್ತು ಇತರ ಸಮುದಾಯಗಳಿಗೆ ಸಮಾನ ಹಂಚಿಕೆ ಮಾಡುವ ಮೂಲಕ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಣಯವನ್ನು ಕೈಗೊಂಡಿದೆ.
ಪರಿಶಿಷ್ಟ ಜಾತಿಯಲ್ಲಿ ಒಟ್ಟು 101 ಜಾತಿಗಳಿದ್ದು, ಅದರಲ್ಲಿ ಬಲಗೈ ಸಮುದಾಯುದಲ್ಲಿ 20, ಎಡಗೈಯಲ್ಲಿ 18 ಮತ್ತು ಇತರೆ ಸ್ಪೃಶ್ಯ ಸಮುದಾಯಗಳಲ್ಲಿ 63 ಜಾತಿಗಳಿವೆ. ಇದರಲ್ಲಿ ಮೂರು ಸಮುದಾಯಕ್ಕೂ ಸಮಾನ ಹಂಚಿಕೆ ಮಾಡುವ ಮೂಲಕ ಸಂಪುಟ ಸಭೆಯಲ್ಲಿ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
ಬಲಗೈ ಸಮುದಾಯುಕ್ಕೆ 5.25, ಎಡಗೈ 5.25 ಮತ್ತು ಇತರ ಸಮುದಾಯಗಳಿಗೂ 4.5 ಮೀಸಲಾತಿ ನೀಡುವ ಮೂಲಕ ಸಮಾನ ಹಂಚಿಕೆ ಮಾಡಲಾಗಿದೆ. ವರ್ಷಗಳಿಂದ ಒಳಮೀಸಲಾತಿ ಹಂಚಿಕೆ ಜಾರಿಗೆ ಭಾರೀ ಆಗ್ರಹ, ಪ್ರತಿಭಟನೆಗಳು ನಡೆದಿದ್ದವು. ಇದನ್ನೆಲ್ಲ ಸೂಕ್ಷ್ಮವಾಗಿ ಗಮನದಲ್ಲಿಟ್ಟುಕೊಂಡ ಸರ್ಕಾರ, ಸಂಪುಟ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಂಡಿದ್ದಾಗಿ ತಿಳಿಸಿದೆ.

ಸಿದ್ದರಾಮಯ್ಯ ಮಾತು

ಸಿಎಂ ಮಾತನಾಡಿ, ಪಕ್ಷದ ನಿಲುವು ಸಮಪಾಲು, ಸಮಬಾಳು. ಸಾಮಾಜಿಕ ನ್ಯಾಯಕ್ಕೆ ಬದ್ಧ. ವಿಳಂಬವಾಯಿತು, ಆದರೂ ಐತಿಹಾಸಿಕ ತೀರ್ಮಾನ ಮಾಡಿದ್ದೇವೆ. ಕೊಟ್ಟ ಮಾತನ್ನು ಕಡೆಗೂ ಉಳಿಸಿಕೊಂಡಿದ್ದೇವೆ. ದಲಿತ ಸಮುದಾಯದ ಎಲ್ಲ ಸಂಘಟನೆಗಳೂ ಅಸ್ತು ಎಂದಿವೆ. ಶೇ.17 ಮತ್ತು ಶೇ.7 ಮೀಸಲು ಕೊಡಲು ಸರ್ಕಾರ ಬದ್ಧವಾಗಿದೆ. ಕೋರ್ಟ್ ಒಂದು ವೇಳೆ ‌ನಮ್ಮ‌ ಪರವಾಗಿ ತೀರ್ಪು ಬಂದರೆ ಬ್ಯಾಕ್ ಲಾಗ್ ಎಂದು ತೀರ್ಮಾನ ಮಾಡಲಾಗುತ್ತದೆ ಎಂದರು.

ಸಚಿವ ಎಚ್.ಸಿ.ಮಹದೇವಪ್ಪ ಪ್ರತಿಕ್ರಿಯೆ

ಸರ್ಕಾರದ ಬದ್ಧತೆ ಇದು. ಎಲ್ಲರೂ ಒಮ್ಮತದಿಂದ ಒಪ್ಪಿಕೊಂಡಿದ್ದೇವೆ. ಗ್ರೂಪ್ ಮಾಡಿ ಮೀಸಲು ಹಂಚುವಾಗ ರೋಸ್ಟರ್ ಪಾಯಿಂಟ್‌ನಲ್ಲಿ ಗೊಂದಲವಾಯಿತು. ಧಾರವಾಡ ವಿವಿಯಲ್ಲಿ ಆರಂಭವಾದ ಗೊಂದಲ ರಾಜ್ಯ ವ್ಯಾಪಿಸಿತು. ಕೆಲವರು ಬೇಳೆ ಬೇಯಿಸಲು ಪ್ರಯತ್ನಿಸಿದರು. ಜೊತೆಗೆ ಸರ್ಕಾರದ ವಿರುದ್ಧ, ಪಕ್ಷದ ವಿರುದ್ಧ ಗೂಬೆ ಕೂರಿಸಲು ಪಿತೂರಿ ನಡೆಸಿದರು ಎಂದು ಹೇಳಿದರು.

ಸಿಎಂ 'ಕೈ' ಬಲ

ಮೂರು ಗುಂಪುಗಳಿಗೆ ಒಂದೇ ಬಾರಿಗೆ ಮೀಸಲು ಸಿಗಬೇಕು. ಒಂದೇ ಅನ್ವಯವಾಗದ ಸಂದರ್ಭದಲ್ಲಿ‌ ಎಸ್ಸಿ ಜನರಲ್‌ ಎಂದು ಇಟ್ಟಿದ್ದೇವೆ. ಶೇ.15 ಮೀಸಲು ಅನ್ವಯವಾಗದ ಕಾರಣ ಗೊಂದಲ ಪಡುವ ಅಗತ್ಯವಿಲ್ಲ. ಇದು ಐತಿಹಾಸಿಕ ದಿನವಾಗಿದೆ. ಸುವರ್ಣಾಕ್ಷರಗಳಲ್ಲಿ ಬರೆದಿಡುವ ತೀರ್ಮಾನವಾಗಿದೆ. ಚಿತ್ರದುರ್ಗದ ಐತಿಹಾಸಿಕ ತೀರ್ಮಾನ ಜಾರಿಯಾಗಿದೆ. ಎಲ್ಲರ ಒಗ್ಗಟ್ಟಿನಿಂದ ತೀರ್ಮಾನವಾಗಿದ್ದು, ಸಿಎಂ 'ಕೈ' ಬಲಪಡಿಸಿದ್ದಾರೆ. ನಾವೆಲ್ಲ ಅಣ್ಣ ತಮ್ಮಂದಿರಂತೆ ಇದ್ದೇವೆ ಎಂದು ಕೆ.ಎಚ್​ ಮುನಿಯಪ್ಪ ಸಂತಸದ ಮಾತುಗಳನ್ನಾಡಿದರು.