ರಾಜ್ಯ

ಸರ್ಕಾರಿ ನೌಕರರು ಕೇಂದ್ರಸ್ಥಾನದಲ್ಲಿ ಕಡ್ಡಾಯವಾಗಿ ವಾಸ!...'ಕರ್ತವ್ಯ' ಆ್ಯಪ್ ಮೂಲಕ ರಾತ್ರಿ ಹಾಜರಾತಿ ಕಡ್ಡಾಯಗೊಳಿಸಿ ಸರ್ಕಾರದ ‌ಆದೇಶ

ಬೆಂಗಳೂರು: ಸರ್ಕಾರಿ ಅಭಿವೃದ್ಧಿ ಕೆಲಸಗಳು ಹಾಗೂ ಸಾರ್ವಜನಿಕ ಸೇವೆಗಳು ಜನಸಾಮಾನ್ಯರಿಗೆ ಸರಾಗವಾಗಿ ತಲುಪಬೇಕಾದರೆ ಅಧಿಕಾರಿಗಳು ಮತ್ತು ನೌಕರರು ತಮ್ಮ ಕಾರ್ಯಕ್ಷೇತ್ರ (ಕೇಂದ್ರಸ್ಥಾನ)ದಲ್ಲಿಯೇ ನೆಲೆಸಿರಬೇಕು.

ಬೆಂಗಳೂರು: ಸರ್ಕಾರಿ ಅಭಿವೃದ್ಧಿ ಕೆಲಸಗಳು ಹಾಗೂ ಸಾರ್ವಜನಿಕ ಸೇವೆಗಳು ಜನಸಾಮಾನ್ಯರಿಗೆ ಸರಾಗವಾಗಿ ತಲುಪಬೇಕಾದರೆ ಅಧಿಕಾರಿಗಳು ಮತ್ತು ನೌಕರರು ತಮ್ಮ ಕಾರ್ಯಕ್ಷೇತ್ರ (ಕೇಂದ್ರಸ್ಥಾನ)ದಲ್ಲಿಯೇ ನೆಲೆಸಿರಬೇಕು. ಈ ನಿಟ್ಟಿನಲ್ಲಿ ಸರ್ಕಾರಿ ನೌಕರರು ಕಡ್ಡಾಯವಾಗಿ ನಿಯೋಜಿತ ಕೇಂದ್ರಸ್ಥಾನದಲ್ಲೇ ವಾಸವಿರುವುದನ್ನು ಖಾತ್ರಿಪಡಿಸಿಕೊಳ್ಳಲು ಕರ್ನಾಟಕ ಸರ್ಕಾರವು ಜಿಯೋ-ಫೆನ್ಸಿಂಗ್ (Geo-Fencing) ತಂತ್ರಜ್ಞಾನ ಆಧಾರಿತ 'ಕರ್ತವ್ಯ' (Kartavya) ಆ್ಯಪ್ ಮೂಲಕ ರಾತ್ರಿ ವೇಳೆಯ ಹಾಜರಾತಿ ದಾಖಲಿಸುವುದನ್ನು ಕಡ್ಡಾಯಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ.

ಈ ಸಂಬಂಧ ಮೊದಲ ಹಂತವಾಗಿ, 2026 ನೇ ನವೆಂಬರ್ 01 ರಿಂದ ಜಾರಿಗೆ ಬರುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಾಲ್ಲೂಕು ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (PHC) ಕರ್ತವ್ಯ ನಿರ್ವಹಿಸುವ ಎಲ್ಲಾ ವೈದ್ಯರಿಗೆ ಈ ರಾತ್ರಿ ಹಾಜರಾತಿ ಕಡ್ಡಾಯಗೊಳಿಸಲಾಗಿದೆ.

ಹಾಜರಾತಿ ದಾಖಲಿಸುವ ಸಮಯ ಹಾಗೂ ಜಾಗ

ಪ್ರತಿದಿನ ರಾತ್ರಿ 9.00 ಗಂಟೆಯ ನಂತರ, ವೈದ್ಯರು ತಮ್ಮ ಕೇಂದ್ರಸ್ಥಾನವಿರುವ ನಗರ, ಪಟ್ಟಣ ಅಥವಾ ಗ್ರಾಮದ ಭೌಗೋಳಿಕ ವ್ಯಾಪ್ತಿಯೊಳಗಿದ್ದುಕೊಂಡೇ 'ಕರ್ತವ್ಯ' ಆ್ಯಪ್ ಮೂಲಕ ತಮ್ಮ ಹಾಜರಾತಿಯನ್ನು ನಮೂದಿಸಬೇಕು.

ಯಾರಿಗೆಲ್ಲಾ ವಿನಾಯಿತಿ..?

  • ಮಂಜೂರಾದ ರಜೆಯಲ್ಲಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ.

  • ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದು ಕೇಂದ್ರಸ್ಥಾನದಿಂದ ಹೊರಗೆ ಅಧಿಕೃತ ಕರ್ತವ್ಯದಲ್ಲಿರುವವರಿಗೆ.

  • ಕೇಂದ್ರಸ್ಥಾನ ಬಿಡಲು ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದಿರುವವರಿಗೆ.

  • (ಈ ಸಂಬಂಧ ರಜೆ ಅಥವಾ ಅನುಮತಿಯ ಬಗ್ಗೆ ಸ್ಪಷ್ಟ ಕಾರಣಗಳನ್ನು ಆ್ಯಪ್‌ನಲ್ಲಿ ಕಡ್ಡಾಯವಾಗಿ ದಾಖಲಿಸಬೇಕಾಗುತ್ತದೆ).

ಕಟ್ಟುನಿಟ್ಟಿನ ಮೇಲ್ವಿಚಾರಣೆ ಹಾಗೂ ಕ್ರಮ

ಆಯುಕ್ತರು ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿಗಳು ಪ್ರತಿ ತಿಂಗಳು ರಾತ್ರಿ ಹಾಜರಾತಿ ವರದಿಗಳನ್ನು ಕಡ್ಡಾಯವಾಗಿ ಪರಿಶೀಲಿಸಲಿದ್ದಾರೆ. ಸಕ್ಷಮ ಪ್ರಾಧಿಕಾರದ ಅನುಮತಿಯಿಲ್ಲದೆ ಕೇಂದ್ರಸ್ಥಾನದಲ್ಲಿ ವಾಸವಿರದ ಅಧಿಕಾರಿಗಳ ವಿರುದ್ಧ ನಾಗರಿಕ ಸೇವಾ ನಿಯಮಗಳಡಿ ಕಟ್ಟುನಿಟ್ಟಿನ ಶಿಸ್ತುಕ್ರಮ ಜರುಗಿಸಲಾಗುವುದು.

ಮಾನ್ಯ ಉಪಲೋಕಾಯುಕ್ತರ ವಿಚಾರಣೆ ವೇಳೆ ಹಲವು ನೌಕರರು ತಮ್ಮ ನಿಯೋಜಿತ ಕೇಂದ್ರಸ್ಥಾನದಲ್ಲಿ ವಾಸವಿರದೆ ದೂರದ ಊರುಗಳಿಂದ ಆಡಳಿತ ನಡೆಸುತ್ತಿದ್ದು, ಇದರಿಂದ ಕರ್ತವ್ಯಕ್ಕೆ ಸರಿಯಾದ ಸಮಯಕ್ಕೆ ಹಾಜರಾಗದೆ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿರುವುದು ಕಂಡುಬಂದಿತ್ತು. ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಸೇವಾ ನಿಯಮಗಳ ಪಾಲನೆಗಾಗಿ ಮಾನ್ಯ ಮುಖ್ಯಮಂತ್ರಿಗಳ ಅನುಮೋದನೆಯೊಂದಿಗೆ ಪ್ರಜಾ ಸೇವಾ ಇಲಾಖೆಯು ಈ ನೂತನ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಮುಂದಿನ ದಿನಗಳಲ್ಲಿ ಈ ಪ್ರಾಯೋಗಿಕ ಯೋಜನೆಯ ಫಲಿತಾಂಶದ ಆಧಾರದ ಮೇಲೆ, ಸರ್ಕಾರದ ಇತರ ಇಲಾಖೆಗಳ ನೌಕರರಿಗೂ ಈ ವ್ಯವಸ್ಥೆಯನ್ನು ವಿಸ್ತರಿಸಲಾಗುವುದು ಎಂದು ಪ್ರಜಾ ಸೇವೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಆದೇಶದಲ್ಲಿ ತಿಳಿಸಿದ್ದಾರೆ.

ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೂ 'ಕರ್ತವ್ಯ' ಆ್ಯಪ್ ಕಡ್ಡಾಯ

ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳು, ಕಚೇರಿಗಳು, ಮಂಡಳಿಗಳು, ನಿಗಮಗಳು, ಪ್ರಾಧಿಕಾರಗಳು ಹಾಗೂ ಸರ್ಕಾರಿ ಅನುದಾನಿತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ (Contractual) ಮತ್ತು ಹೊರಗುತ್ತಿಗೆ (Outsourced) ನೌಕರರ ಹಾಜರಾತಿಯನ್ನು ಇನ್ಮುಂದೆ 'ಕರ್ತವ್ಯ' (Kartavya) ಆ್ಯಪ್ ಮೂಲಕವೇ ದಾಖಲಿಸುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಪ್ರತ್ಯೇಕ ಸುತ್ತೋಲೆ ಹೊರಡಿಸಿದೆ.

ಕಡ್ಡಾಯ ನೋಂದಣಿ: ಸರ್ಕಾರದ ಅಧೀನದಲ್ಲಿರುವ ಎಲ್ಲಾ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರನ್ನು 2026ರ ನವೆಂಬರ್ 25ರೊಳಗಾಗಿ 'ಕರ್ತವ್ಯ' ಆ್ಯಪ್‌ನಲ್ಲಿ ನೋಂದಾಯಿಸಿಕೊಳ್ಳಲು ಆಯಾ ಇಲಾಖಾ ಮುಖ್ಯಸ್ಥರಿಗೆ ಸೂಚಿಸಲಾಗಿದೆ.

ಡಿಸೆಂಬರ್ 1ರಿಂದ ಡಿಜಿಟಲ್ ಹಾಜರಾತಿ: 2026ರ ಡಿಸೆಂಬರ್ 1ರಿಂದ ಎಲ್ಲಾ ಗುತ್ತಿಗೆ ಮತ್ತು ಹೊರಗುತ್ತಿಗೆ ಸಿಬ್ಬಂದಿಯ ಹಾಜರಾತಿಯನ್ನು ಕೇವಲ 'ಕರ್ತವ್ಯ' ಆ್ಯಪ್‌ನಲ್ಲಿ ಮಾತ್ರವೇ ದಾಖಲಿಸಬೇಕು.

ವೇತನ ಪಾವತಿಗೆ 'ಕರ್ತವ್ಯ' ವರದಿ ಕಡ್ಡಾಯ: 2027ರ ಜನವರಿ 1ರಿಂದ ಅನ್ವಯವಾಗುವಂತೆ, ಗುತ್ತಿಗೆ ನೌಕರರ ವೇತನ ಹಾಗೂ ಹೊರಗುತ್ತಿಗೆ ಏಜೆನ್ಸಿಗಳ ಬಿಲ್‌ಗಳನ್ನು 'ಕರ್ತವ್ಯ' ಆ್ಯಪ್‌ನಿಂದ ಪಡೆದ ಹಾಜರಾತಿ ವರದಿಯ ಆಧಾರದ ಮೇಲೆ ಮಾತ್ರ ಬಿಡುಗಡೆ ಮಾಡಲಾಗುವುದು. ಆ್ಯಪ್‌ನಲ್ಲಿ ಹಾಜರಾತಿ ದಾಖಲಾಗದಿದ್ದರೆ ಯಾವುದೇ ಪಾವತಿ ಮಾಡದಂತೆ ಹಣ ಪಡೆಯುವ ಮತ್ತು ಬಟವಾಡೆ ಮಾಡುವ ಅಧಿಕಾರಿಗಳಿಗೆ (DDO) ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.

ಪಾರದರ್ಶಕತೆ ಮತ್ತು ಏಕರೂಪತೆ

ಪ್ರಸ್ತುತ ಕೈಬರಹ ಅಥವಾ ಇತರೆ ಪ್ರತ್ಯೇಕ ವ್ಯವಸ್ಥೆಗಳ ಮೂಲಕ ಹಾಜರಾತಿ ನಿರ್ವಹಿಸಲಾಗುತ್ತಿತ್ತು. ವೇತನವನ್ನು ಸರ್ಕಾರದ ಅನುದಾನದಿಂದಲೇ ಭರಿಸುತ್ತಿರುವುದರಿಂದ ವಿಶ್ವಾಸಾರ್ಹತೆ ಮತ್ತು ಏಕರೂಪತೆ ತರಲು ಈ ನೂತನ ವ್ಯವಸ್ಥೆ ತರಲಾಗಿದೆ. ಈ ಆದೇಶದ ಪಾಲನೆಯಲ್ಲಿ ಯಾವುದೇ ಲೋಪ ಕಂಡುಬಂದಲ್ಲಿ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರು ಹಾಗೂ ಅಧಿಕಾರಿಗಳನ್ನೇ ವೈಯಕ್ತಿಕವಾಗಿ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಪ್ರಜಾ ಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಅವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.