ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪಗಳ ಬೆನ್ನಲ್ಲೇ, ಸರ್ಕಾರವು ಆಯೋಗದ ಸಮಗ್ರ ಸುಧಾರಣೆಗಾಗಿ ಎಂಟು ಸದಸ್ಯರ 'ಸರ್ವಪಕ್ಷ ಸದನ ಸಮಿತಿ' ರಚಿಸಲು ನಿರ್ಧರಿಸಿದೆ. ವಿಧಾನಸಭೆಯಲ್ಲಿ ಈ ಕುರಿತು ಉತ್ತರಿಸಿದ ಸಚಿವ ಕೃಷ್ಣಬೈರೇಗೌಡ, ಕೆಪಿಎಸ್‌ಸಿಯಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಈ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿದರು.
ಇತ್ತೀಚಿನ ಪರೀಕ್ಷೆಯಲ್ಲಿ ಒಂದೇ ಪರೀಕ್ಷಾ ಕೊಠಡಿಯಿಂದ 11-12 ಅಭ್ಯರ್ಥಿಗಳು ಮತ್ತು ಒಂದೇ ಕುಟುಂಬದ 3-4 ಸದಸ್ಯರು ಆಯ್ಕೆಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ ಸಚಿವರು, "ಕೆಪಿಎಸ್‌ಸಿ ನೀಡಿರುವ ವರದಿಯಂತೆ ಆ ನಿರ್ದಿಷ್ಟ ಕೊಠಡಿಯ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ. ಅಲ್ಲಿ ಯಾವುದೇ ಅಕ್ರಮ ಅಥವಾ ಅನುಮಾನಾಸ್ಪದ ಚಟುವಟಿಕೆಗಳು ನಡೆದಿಲ್ಲ" ಎಂದು ತಿಳಿಸಿದರು.
ಪ್ರತಿ ವರ್ಷ ನಿಯಮಿತವಾಗಿ ನೇಮಕಾತಿ ಪರೀಕ್ಷೆಗಳನ್ನು ನಡೆಸುವುದು. ಅಭ್ಯರ್ಥಿಗಳು ವರ್ಷಗಟ್ಟಲೆ ಕಾಯುವುದನ್ನು ತಪ್ಪಿಸಲು, ಮುಂದಿನ ಐದು ವರ್ಷಗಳ ಕಾಲ ಖಾಲಿ ಇರುವ ಹುದ್ದೆಗಳನ್ನು ಗುರುತಿಸಿ, ಅದಕ್ಕೆ ತಕ್ಕಂತೆ 'ಕ್ಯಾಲೆಂಡರ್ ಆಫ್ ಇವೆಂಟ್ಸ್' (Calendar of Events) ಸಿದ್ಧಪಡಿಸಲಾಗುವುದು. ಇದರಿಂದ ಯಾವ ಪರೀಕ್ಷೆ ಯಾವಾಗ ನಡೆಯಲಿದೆ ಎಂಬ ಸ್ಪಷ್ಟ ಮಾಹಿತಿ ವಿದ್ಯಾರ್ಥಿಗಳಿಗೆ ಸಿಗಲಿದೆ ಎಂದರು.
ಕೆಇಎ ಮಾದರಿ ಅಳವಡಿಕೆ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ತನ್ನ ಪರೀಕ್ಷೆಗಳಲ್ಲಿ ಅಳವಡಿಸಿಕೊಂಡಿರುವ ಅತ್ಯುತ್ತಮ ಕ್ರಮಗಳನ್ನು (Best Practices) ಕೆಪಿಎಸ್‌ಸಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಭದ್ರತೆ, ತಾಂತ್ರಿಕ ಬಳಕೆ ಮತ್ತು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಕೆಇಎ ಮಾದರಿಯನ್ನು ಅನುಸರಿಸುವ ಮೂಲಕ ಲೋಪದೋಷಗಳನ್ನು ತಡೆಯಲಾಗುವುದು ಎಂದು ಸಚಿವರು ವಿವರಿಸಿದರು.
ತನಿಖೆಯ ಪ್ರಶ್ನೆಯೇ ಇಲ್ಲ!
ಇತ್ತೀಚಿನ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂಬ ಪ್ರತಿಪಕ್ಷಗಳ ಆರೋಪವನ್ನು ಸಚಿವರು ಮತ್ತೊಮ್ಮೆ ಸಾರಾಸಗಟಾಗಿ ತಳ್ಳಿಹಾಕಿದರು. "ಸದ್ಯ ಬಂದಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಕೆಪಿಎಸ್‌ಸಿ ನೀಡಿರುವ ವಿವರಣೆ ಮತ್ತು ಸಿಸಿಟಿವಿ ದಾಖಲೆಗಳ ಪ್ರಕಾರ ಪರೀಕ್ಷೆಗಳು ಪಾರದರ್ಶಕವಾಗಿ ನಡೆದಿವೆ. ಆದ್ದರಿಂದ ಈಗಿನ ಪರೀಕ್ಷೆಗಳ ಬಗ್ಗೆ ತನಿಖೆ ನಡೆಸುವ ಅಗತ್ಯವಿಲ್ಲ, ಎಲ್ಲವೂ ಸರಿಯಾಗಿದೆ" ಎಂದು ಅವರು ಸ್ಪಷ್ಟಪಡಿಸಿದರು.
ಬಿಜೆಪಿ ಪಟ್ಟು: ಮರುಪರೀಕ್ಷೆಗೆ ಆಗ್ರಹ
ಸರ್ಕಾರದ ಸಮರ್ಥನೆಯ ನಡುವೆಯೂ ಪ್ರತಿಪಕ್ಷ ಬಿಜೆಪಿ ತನ್ನ ಪಟ್ಟು ಸಡಿಲಿಸಿಲ್ಲ. "ಲಕ್ಷಾಂತರ ಯುವಕರ ಭವಿಷ್ಯದ ದೃಷ್ಟಿಯಿಂದ ಸಮಗ್ರ ತನಿಖೆಯಾಗಬೇಕು ಮತ್ತು ಅಕ್ರಮ ಸಾಬೀತಾದರೆ ಮರುಪರೀಕ್ಷೆ ನಡೆಸಬೇಕು" ಎಂದು ಬಿಜೆಪಿ ಸದಸ್ಯರು ಸದನದಲ್ಲಿ ಆಗ್ರಹಿಸಿದರು.