ಚಡಚಣ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಮಾತನಾಡಿದರು. ತಹಸೀಲ್ದಾರ್ ಸಂಜಯ ಇಂಗಳೆ, ತಾಪಂ ಇಒ ಅಶೋಕ ರಾಠೋಡ, ಪಪಂ ಅಧ್ಯಕ್ಷ ಮಲ್ಲು ದೋತ್ರೆ ಮತ್ತಿತರರಿದ್ದರು.
- ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಹೇಳಿಕೆ
- ವದಂತಿಗಳಿಗೆ ಕಿವಿಗೊಡಬೇಡಿ
ಚಡಚಣ: ಪಟ್ಟಣದಲ್ಲಿಯೇ 2026-27ನೇ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಪದವಿ ಕಾಲೇಜ್ ಪ್ರಾರಂಭಿಸುತ್ತೇನೆ, ಸಾರ್ವಜನಿಕರು ಮತ್ತು ಶಿಕ್ಷಣ ಪ್ರೇಮಿಗಳು ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕೆಲಸವಿಲ್ಲದ ಕೆಲವರು ಪಟ್ಟಣಕ್ಕೆ ಮಂಜೂರಾದ ಸರ್ಕಾರಿ ಪದವಿ ಕಾಲೇಜ್‌ನ್ನು ಬೇರೆ ಗ್ರಾಮಕ್ಕೆ ಸ್ಥಳಾಂತರಿಸುತ್ತಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ಅವರಿಗೆ ಭಗವಂತ ಒಳ್ಳೆಯ ಬುದ್ದಿ ಕೊಡಲಿ, ಪಟ್ಟಣದಲ್ಲಿ ಪದವಿ ಕಾಲೇಜ್ ಪ್ರಾರಂಭವಾಗಬೇಕೆಂದು ನಾನು ಸತತ ಪ್ರಯತ್ನ ಮಾಡಿ, ಮುಖ್ಯಮಂತ್ರಿ, ಉಸ್ತುವಾರಿ ಸಚಿವರ ಮೇಲೆ ಒತ್ತಡ ಹೇರಿ 2026-27ನೇ ಸಾಲಿನ ಆಯವ್ಯಯದಲ್ಲಿ ಪದವಿ ಕಾಲೇಜ್ ಮಂಜೂರು ಮಾಡಿಸಿದ್ದೇನೆ. ಒಂದು ವೇಳೆ ಬೇರೆ ಕಡೆ ಪದವಿ ಕಾಲೇಜ್ ಪ್ರಾರಂಭ ಮಾಡುವ ಉದ್ದೇಶ ನನಗಿದ್ದರೆ, ನಾನು ಚಡಚಣ ಪಟ್ಟಣಕ್ಕೆ ಯಾಕೆ ಪದವಿ ಕಾಲೇಜ್ ಮಂಜೂರು ಮಾಡಿಸುತ್ತಿದ್ದೆ ಎಂಬ ಸಾಮಾನ್ಯ ಜ್ಞಾನವಾದರೂ ನನ್ನನ್ನು ಟೀಕಿಸುವವರಿಗೆ ಬೇಕು ಎಂದರು.
ಪಟ್ಟಣದ ಸರ್ವಾಂಗೀಣ ಅಭಿವೃದ್ಧಿ ನನ್ನ ಉದ್ದೇಶ. ಪದವಿ ಕಾಲೇಜ್ ಜತೆಗೆ ಶ್ರಮಿಕ ಮಕ್ಕಳ ವಸತಿ ಶಾಲೆ, ಎಲ್‌ಕೆಜಿಯಿಂದ ಹಿಡಿದು ಪಿಯುಸಿವರೆಗೆ ಶಿಕ್ಷಣ ನೀಡುವ ಮೌಲಾನಾ ಆಜಾದ್ ಮಾದರಿ ಶಾಲೆ, ಸರ್ಕಾರಿ ಐಟಿಐ ಕಾಲೇಜ್ ಪ್ರಾರಂಭಿಸುತ್ತಿದ್ದೇನೆ. ಚಡಚಣ ಪಟ್ಟಣದಲ್ಲಿ ಸರ್ಕಾರಿ ಜಮೀನು ಇಲ್ಲದ ಕಾರಣ ಹಾವಿನಾಳ ಸಮೀಪದಲ್ಲಿರುವ 62 ಎಕರೆ ಜಮೀನಿನಲ್ಲಿ ಎಲ್ಲ ಶಾಲಾ ಕಾಲೇಜ್‌ಗಳನ್ನು ಪ್ರಾರಂಭಿಸಿ ಎಜ್ಯುಕೇಶನ್ ಹಬ್ ನಿರ್ಮಾಣ ಮಾಡಬೇಕು ಎಂದು ನನ್ನ ಆಸೆಯಾಗಿತ್ತು. ಆದರೆ ಕೆಲವರು ಸುಮ್ಮನೆ ಕಾಲೇಜ್‌ನ್ನು ಕನ್ನೂರ ಗ್ರಾಮಕ್ಕೆ ಸ್ಥಳಾಂತರಿಸಿದ್ದೇನೆ ಎಂದು ಮೂರ್ಖತನದ ಹೇಳಿಕೆಗಳನ್ನು ನೀಡಿದ್ದಾರೆ. ಸಾರ್ವಜನಿಕರು ಸತ್ಯ ಏನು ಎಂಬುದನ್ನು ಅರಿತುಕೊಳ್ಳಬೇಕು ಎಂದರು.
ಚಡಚಣ ಪಟ್ಟಣದಲ್ಲಿ ಕಾಲೇಜು ಪ್ರಾರಂಭಿಸಲು 5 ಎಕರೆ ಭೂಮಿಯನ್ನು ಯಾರಾದರೂ ದಾನಿಗಳು ನೀಡಿದರೆ ಆ ಶಾಲೆಗೆ ಅವರ ಹಿರಿಯರ ಹೆಸರು ಇಡಲು ಸಿದ್ಧ ಎಂದು ಅವರು ಹೇಳಿದರು.
ತಹಸೀಲ್ದಾರ್ ಸಂಜಯ ಇಂಗಳೆ, ತಾಪಂ ಇಒ ಅಶೋಕ ರಾಠೋಡ, ಪಪಂ ಅಧ್ಯಕ್ಷ ಮಲ್ಲು ದೋತ್ರೆ, ಉಪಾಧ್ಯಕ್ಷ ಇಲಾಯಿ ನದಾಫ್, ಕಾಂಗ್ರೇಸ್ ತಾಲೂಕು ಅಧ್ಯಕ್ಷ ಆರ್.ಡಿ. ಹಕ್ಕೆ ಮತ್ತಿತರರಿದ್ದರು.