ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ
- ಕಳೆದ ವರ್ಷ ಸಿಬಿಎಸ್‌ಇ ಡಿಜಿಟಲ್ ಮೌಲ್ಯಮಾಪವ ಅಳವಡಿಸಿಕೊಂಡಿರುವ ಬೆನ್ನಲ್ಲೇ, ರಾಜ್ಯದಲ್ಲಿಯೂ ಅದೇ ದಾರಿಯಲ್ಲಿ ರೂಪುರೇಷಗಳನ್ಜು ಚರ್ಚಿಸಲಾಗುತ್ತಿದೆ.
- ಒಂದು ವೇಳೆ ಯೋಜನೆಯನ್ನು ಜಾರಿಗೊಳಿಸಬಹುದು ಎಂಬುದು ಖಾತ್ರಿಯಾದರೆ, ಪ್ರಾಯೋಗಿಕವಾಗಿ ಈ ವರ್ಷ ಕಡಿಮೆ ವಿದ್ಯಾರ್ಥಿಗಳಿರುವ ಒಂದೆರಡು ಜಿಲ್ಲೆಗಳಲ್ಲಿ ಜಾರಿ
- ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಸೇರಿ ಒಟ್ಟು 15 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಲಿದ್ದಾರೆ.
- ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ರೂಪದಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಈ ವೇಳೆ ಪ್ರತಿ ಉತ್ತರ ಪತ್ರಿಕೆಗೂ ಪ್ರತ್ಯೇಕ ಪಾಸ್‌ವರ್ಡ್ ನೀಡಲಾಗುತ್ತದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (ಕೆಎಸ್‌ಇಎಬಿ)ಯು ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಡಿಜಿಟಲ್ ಮೌಲ್ಯಮಾಪನಕ್ಕೆ ಚಿಂತನೆ ನಡೆಸಿದೆ.
ಕಳೆದ ವರ್ಷ ಸಿಬಿಎಸ್‌ಇ ಡಿಜಿಟಲ್ ಮೌಲ್ಯಮಾಪವ ಅಳವಡಿಸಿಕೊಂಡಿರುವ ಬೆನ್ನಲ್ಲೇ, ರಾಜ್ಯದಲ್ಲಿಯೂ ಅದೇ ದಾರಿಯಲ್ಲಿ ರೂಪುರೇಷಗಳನ್ಜು ಚರ್ಚಿಸಲಾಗುತ್ತಿದೆ. ಈ ಸಂಬಂಧ ರಾಜ್ಯ ಸರ್ಕಾರದಿಂದ ಮಂಡಳಿ ಸೂಚನೆ ನೀಡಿದ್ದು, ಮಂಡಳಿಯು ಸಾಧಕ- ಬಾಧಕಗಳನ್ನು ತುಲನೆ ಮಾಡಲಾಗುತ್ತಿದೆ.
ಯೋಜನೆ ಸಿದ್ಧತೆಯಲ್ಲಿ ತೊಡಗಿದ ಮಂಡಳಿ:
ರಾಜ್ಯ ಸರ್ಕಾರದಿಂದ ಮಂಡಳಿಗೆ ಸೂಚನೆ ಬಂದಿರುವ ಕಾರಣ, ಒಂದು ವೇಳೆ ಆನ್‌ಲೈನ್‌ನಲ್ಲಿ ಮೌಲ್ಯಮಾಪನ ಮಾಡುವುದರಿಂದ ಲಾಭ- ನಷ್ಟಗಳೇನು?, ಸಮಯದ ಕೊರತೆ ನೀಗಲಿದೆಯೇ?, ಮೌಲ್ಯಮಾಪಕರಿಗೆ ಹೊರೆ ಕಡಿತವಾಗಲಿದೆಯೇ, ಖರ್ಚು-ವೆಚ್ಚಗಳು ಎಷ್ಟಾಗಲಿದೆ? ಎಂಬುದು ಸೇರಿ ಯೋಜನೆಯನ್ನು ಅನುಷ್ಠಾನ ಮಾಡಲು ತಾಂತ್ರಿಕವಾಗಿ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕೆಂಬುದರ ಬಗ್ಗೆ ಚರ್ಚಿಸಲಾಗುತ್ತಿದೆ.
ಒಂದು ವೇಳೆ ಯೋಜನೆಯನ್ನು ಜಾರಿಗೊಳಿಸಬಹುದು ಎಂಬುದು ಖಾತ್ರಿಯಾದರೆ, ಪ್ರಾಯೋಗಿಕವಾಗಿ ಈ ವರ್ಷ ಕಡಿಮೆ ವಿದ್ಯಾರ್ಥಿಗಳಿರುವ ಒಂದೆರಡು ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗುತ್ತದೆ. ಮತ್ತೆ ಎದುರಾಗುವ ತಾಂತ್ರಿಕ ಲೋಪಗಳನ್ನು ಸರಿಪಡಿಸಿಕೊಂಡು ಮುಂದಿನ ವರ್ಷಗಳಲ್ಲಿ ಡಿಜಿಟಲ್ ಮೌಲ್ಯಮಾಪನಕ್ಕೆ ಅಣಿಯಾಗಲಿದೆ ಎಂದು ಮಂಡಳಿ ಉನ್ನತ ಮೂಲಗಳು ಖಾತ್ರಿಪಡಿಸಿವೆ.
15 ಲಕ್ಷ ಮಕ್ಕಳ ಪರೀಕ್ಷೆ:
ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಸೇರಿ ಒಟ್ಟು 15 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಲಿದ್ದಾರೆ. ಮುಖ್ಯ ಪರೀಕ್ಷೆ ಹೊರತಾಗಿ ಪೂರಕ ಪರೀಕ್ಷೆಯಲ್ಲಿಯೂ ಕನಿಷ್ಠ 2ರಿಂದ ಮೂರು ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಲಿದ್ದಾರೆ. ಇಷ್ಟು ದೊಡ್ಡ ಮಟ್ಟದಲ್ಲಿ ಡಿಜಿಟಲ್ ಮೌಲ್ಯಮಾಪನ ನಡೆಸಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡ ಬಳಿಕವೇ ಅಂತಿಮ ನಿರ್ಧಾರಕ್ಕೆ ಬರಲಾಗುತ್ತದೆ ಎಂದು ಮಂಡಳಿ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ವಿವಿಗಳಲ್ಲಿ ಡಿಜಿಟಲ್ ಮೌಲ್ಯಮಾಪನ ಅಳವಡಿಕೆ
ರಾಜ್ಯದ ಬೆಂಗಳೂರು ವಿಶ್ವವಿದ್ಯಾಲಯ, ವಿಟಿಯು, ಆರ್‌ಜಿಯುಎಚ್‌ಎಸ್ ಸೇರಿ ಹಲವು ವಿಶ್ವವಿದ್ಯಾಲಯಗಳು ಈಗಾಗಲೇ ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯನ್ನು ಜಾರಿಗೊಳಿಸಿ ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿವೆ.
ಡಿಜಿಟಲೀಕರಣದ ಅನುಕೂಲವೇನು?
- ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ರೂಪದಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಈ ವೇಳೆ ಪ್ರತಿ ಉತ್ತರ ಪತ್ರಿಕೆಗೂ ಪ್ರತ್ಯೇಕ ಪಾಸ್‌ವರ್ಡ್ ನೀಡಲಾಗುತ್ತದೆ.
- ಅಭ್ಯರ್ಥಿ ಮಾತ್ರ ತನ್ನ ಉತ್ತರ ಪತ್ರಿಕೆಯನ್ನು ನೋಡಲು ಅವಕಾಶವಿರುತ್ತದೆ. (ಈಗಲೂ ವಿದ್ಯಾರ್ಥಿಯು ಸ್ಕಾೃನ್ ಪ್ರತಿ ಪಡೆಯಲು ಅವಕಾಶವಿದೆ. ಅರ್ಜಿ ಸಲ್ಲಿಸಿದವರಿಗೆ ಮಾತ್ರ ಪಿಡಿಎ್ ಕಳುಹಿಸಿಕೊಡಲಾಗುತ್ತದೆ)
- ಹೊಸ ವ್ಯವಸ್ಥೆ ಜಾರಿಗೆ ಬಂದರೆ ಎಲ್ಲ ವಿದ್ಯಾರ್ಥಿಗಳಿಗೂ ತಮ್ಮ ಉತ್ತರ ಪತ್ರಿಕೆ ಸುಲಭವಾಗಿ ಲಭ್ಯವಾಗಲಿದೆ.
ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಡಿಜಿಟಲ್ ಮೌಲ್ಯಮಾಪನ ಮಾಡುವ ಸಂಬಂಧ ಯೋಜನೆಯು ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಯೋಜನೆ ಅಂತಿಮ ರೂಪ ಪಡೆದ ಬಳಿಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ.
— -ಪ್ರಕಾಶ್ ನಿಟ್ಟಾಲಿ, ಅಧ್ಯಕ್ಷ, ಕೆಎಸ್‌ಇಎಬಿ