Health Minister U T Khadar
- * ಋತುಬಂಧದ ಸಮಯದಲ್ಲಿನ ಸಮಸ್ಯೆ ಪರಿಹಾರಕ್ಕೆ ‘ಋತುತಾರೆ’ ಯೋಜನೆ
- * ಆಶಾ ಕಾರ್ಯಕರ್ತರಿಂದ ಮನೆ ಮನೆ ಸಮೀಕ್ಷೆ ಹಾಗೂ ಜಾಗೃತಿ
ಋತುಬಂಧದ ಸಮಯದಲ್ಲಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ದೈಹಿಕ ಸಮಸ್ಯೆಗಳು ಹಾಗೂ ಮಾನಸಿಕ ಒತ್ತಡಗಳ ನಿರ್ವಹಣೆಗೆ ಆರೋಗ್ಯ ಇಲಾಖೆಯು ‘ಋತುತಾರೆ’ ಯೋಜನೆ ಜಾರಿಗೊಳಿಸಲು ನಿರ್ಧರಿಸಿದೆ.
ಈ ಯೋಜನೆ ಕುರಿತಾಗಿ ಮಂಗಳವಾರ ನಗರದ ಆರೋಗ್ಯ ಸೌಧದಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ನಟಿ ರಮ್ಯಾ ಹಾಗೂ ಸ್ತ್ರೀರೋಗ ತಜ್ಞರೊಂದಿಗೆ ಸಭೆ ನಡಿಸಿದರು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಮಹಿಳಾ ಆರೋಗ್ಯ ನೀತಿಯನ್ನು ಜಾರಿಗೆ ತರಲಾಗುತ್ತಿದೆ. ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಪ್ರತ್ಯೇಕ ನೀತಿಯಿಲ್ಲ. ಇದನ್ನು ಜಾರಿಗೆ ತರುತ್ತಿರುವ ಪ್ರಥಮ ರಾಜ್ಯ ಕರ್ನಾಟಕ ಆಗಲಿದೆ ಎಂದರು.
ಋತುಬಂಧದ ವೇಳೆ ಬಹಳಷ್ಟು ಮಹಿಳೆಯರು ದೈಹಿಕ ಹಿಂಸೆಯ ಜತೆಗೆ ಮಾನಸಿಕ ಸಮಸ್ಯೆ ಅನುಭವಿಸುತ್ತಾರೆ. ಮನೆ ಒಳಗೆ ಹಾಗೂ ಹೊರಗೆ ಕೆಲಸ ಮಾಡುವವರು ವಿವಿಧ ಸವಾಲು ಎದುರಿಸುತ್ತಾರೆ. ಆದ್ದರಿಂದ ಅವರಿಗೆ ಅಗತ್ಯ ಬೆಂಬಲ ನೀಡಲು, ಜನಜಾಗೃತಿ ಮೂಡಿಸಲು ‘ಋತುತಾರೆ’ ಯೋಜನೆ ಜಾರಿಗೆ ತರಲಾಗುತ್ತಿದೆ. ಈ ಯೋಜನೆಯಡಿ ಜಾಗೃತಿ ಮೂಡಿಸಲು ನಟಿ ರಮ್ಯಾ ಅವರನ್ನು ರಾಯಭಾರಿಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಯೋಜನೆಗೆ ಸಂಬಂಧಿಸಿದಂತೆ ಮುಂದಿನ ಆರು ತಿಂಗಳ ಅವಧಿಯಲ್ಲಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಲಿದ್ದಾರೆ. ಋತುಬಂಧದ ಪೂರ್ವ ಹಾಗೂ ನಂತರ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಲಿದ್ದಾರೆ. ಜೀವನಶೈಲಿಯಲ್ಲಿ ಬದಲಾವಣೆ, ಊಟೋಪಚಾರ, ನಿದ್ದೆಯ ಅವಧಿ, ಮಾನಸಿಕ ಸಮಸ್ಯೆ ನಿರ್ವಹಣೆ ಸೇರಿ ಹಲವು ಸಂಗತಿಗಳ ಬಗ್ಗೆ ಯೋಜನೆಯಡಿ ಅರಿವು ಮೂಡಿಸಲಾಗುತ್ತದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತ್ವಿಕ್ ರಂಜನಮ್ ಪಾಂಡೆ, ಆಯುಕ್ತ ಗುರುದತ್ತ ಹೆಗಡೆ, ಸ್ತ್ರೀರೋಗ ತಜ್ಞರು ಇತರರ ಇದ್ದರು.
ಋತುಬಂಧದ ವೇಳೆ ಯಾವೆಲ್ಲಾ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ? ಇದಕ್ಕಿರುವ ಚಿಕಿತ್ಸೆಗಳು ಹಾಗೂ ಪರಿಹಾರಗಳು ಏನು ಎನ್ನುವುದರ ಬಗ್ಗೆ ಗ್ರಾಮೀಣ ಮಾತ್ರವಲ್ಲ ನಗರದವರೂ ಹೆಚ್ಚು ತಿಳಿದಿಲ್ಲ. ಆದ್ದರಿಂದ ಈ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ.