Archakara Samavesha At AmbedkarBhavan  
ರಾಜ್ಯ

ದೇಗಲ ಅರ್ಚಕರ ತರಬೇತಿಗೆ ಸರ್ಕಾರ ಸಹಕಾರ - ಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ

ಪ್ರಮುಖ ಮುಖ್ಯಾಂಶಗಳು

  • - ರಾಮಲಿಂಗಾರೆಡ್ಡಿಗೆ ‘ಅರ್ಚಕರ ಕಣ್ಮಣಿ’ ಪ್ರಶಸ್ತಿ ಪ್ರದಾನ

ಬೆಂಗಳೂರು:

ವಿದ್ಯೆ ಯಾರೊಬ್ಬರ ಮನೆ ಆಸ್ತಿಯಲ್ಲ. ವಿದ್ಯಾ ದಾನ ಮಹಾದಾನ. ಈ ನಿಟ್ಟಿನಲ್ಲಿ ಗ್ರಾಮೀಣ ದೇವಾಲಯಗಳ ಅರ್ಚಕರಿಗೆ ಬೇಕಾಗುವ ತರಬೇತಿ ನೀಡಲು ಸರ್ಕಾರ ಅಗತ್ಯ ಸಹಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ನೌಕರರ ಸಂಘ ಬುಧವಾರ ನಗರದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಬೃಹತ್ ಸಮಾವೇಶ ಹಾಗೂ ಸಚಿವ ರಾಮಲಿಂಗಾರೆಡ್ಡಿ ಅವರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಸಿಎಂ ಮಾತನಾಡಿದರು.
ಅರ್ಚಕರ ಸಂಘದವರು ಹಾಗೂ ಮಠಗಳು ಕುಳಿತು ಚರ್ಚೆ ಮಾಡಿ ಗ್ರಾಮೀಣ ಭಾಗದಲ್ಲಿನ 34 ಸಾವಿರ ಮುಜರಾಯಿ ದೇವಾಲಯಗಳಲ್ಲಿ ಪೂಜೆ ಮಾಡುತ್ತಿರುವ ಅರ್ಚಕರಿಗೆ ಸಂಸ್ಕಾರ ಕಲಿಸಿ. ಅವರಿಗೆ 3 ತಿಂಗಳು ತರಬೇತಿ ನೀಡಿ, ಅದಕ್ಕೆ ಬೇಕಾದ ಸಹಕಾರವನ್ನು ಸರ್ಕಾರ ನೀಡಲಿದೆ. ಹಾಗೆಯೇ ಅರ್ಚಕರ ಬೇಡಿಕೆಗಳನ್ನು ಈಡೇರಿಸಲು ಕ್ರಮ ವಹಿಸಲಾಗುವುದು ಎಂದರು.
ಇದೇ ವೇಳೆ ಅರ್ಚಕರ ಬೇಡಿಕೆಗಳ ಈಡೇರಿಸುವ ಭರವಸೆ ನೀಡಿದ ಸಿಎಂ, ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಬೇರೆ ಯಾವ ಸರ್ಕಾರಗಳು ಮಾಡದ ಕೆಲಸ ಮಾಡಿ ನಿಮ್ಮ ಹೃದಯ ಗೆದ್ದಿದ್ದೇವೆ. ಇದು ಡಿ.ಕೆ.ಶಿವಕುಮಾರ್ ಸರ್ಕಾರವಲ್ಲ, ನಿಮ್ಮ ಸರ್ಕಾರ. ಹಾಗಾಗಿ ನಿಮ್ಮ ಮನೆ, ಮಠಗಳು ಹಾಗೂ ದೇವಾಲಯಗಳನ್ನು ಕಾಪಾಡಿಕೊಳ್ಳುವಂತೆ ಈ ನಿಮ್ಮ ಸರ್ಕಾರವನ್ನು ನೀವೇ ಕಾಪಾಡಿಕೊಳ್ಳಿ ಎಂದು ಅರ್ಚಕರಿಗೆ ಕರೆ ನೀಡಿದರು.
ಧರ್ಮ ಯಾವುದಾದರೂ ತತ್ವ ಒಂದೇ:
ನಮ್ಮ ಸರ್ಕಾರದಲ್ಲಿ ಧಾರ್ಮಿಕ ದತ್ತಿ ಇಲಾಖೆ ಇದೆ. ಧರ್ಮ ಯಾವುದಾದರೂ ತತ್ವವೊಂದೇ, ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾದರೂ ಭಕ್ತಿಯೊಂದೇ, ಕರ್ಮ ಹಲವಾದರೂ ನಿಷ್ಠೆಯೊಂದೇ, ದೇವನೊಬ್ಬ ನಾಮ ಹಲವು. ನೀವು ಭಕ್ತರ ಪ್ರಾರ್ಥನೆಯನ್ನು ದೇವರಿಗೆ ತಲುಪಿಸುವವರು. ನೀವೆಲ್ಲರೂ ದೇವರ ಮಕ್ಕಳಂತೆ. ಮುಂದೆ ಸರ್ಕಾರ ಅಧಿಕಾರಕ್ಕೆ ಬರಲು ನೀವು ಶ್ರಮಿಸಬೇಕು ಎಂದು ಸಿಎಂ ಕೋರಿದರು.
ರಾಮ ರಾಮ ಎಂದಾಕ್ಷಣ ಅವರು ಧರ್ಮ ರಕ್ಷಕರಾಗುತ್ತಾರಾ? ಧರ್ಮವನ್ನು ಗುತ್ತಿಗೆ ಪಡೆದ ಪಕ್ಷ ನಿಮ್ಮ ಬದುಕಿನಲ್ಲಿ ಏನಾದರೂ ಬದಲಾವಣೆ ತಂದಿದೆಯಾ? ಅವು ಏನಿದ್ದರೂ ಖಾಲಿ ಬುಟ್ಟಿ, ಬೇವಿನ ಸೊಪ್ಪು, ನಂದೆ ಬೆಳಗೋ ಪೂಜಾರಿ ಎಂಬಂತೆ ಖಾಲಿ ಟ್ರಂಕು. ಶಾಲು ಹಾಕಿಕೊಂಡು ದೇವರು, ಧರ್ಮ ಎಲ್ಲವೂ ನಮ್ಮದೇ ಎನ್ನುತ್ತಾರೆ. ನಾನು, ರಾಮಲಿಂಗಾರೆಡ್ಡಿ, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರು ಹಿಂದೂ ಅಲ್ಲವೇ ಎಂದು ಸಿಎಂ ಪ್ರಶ್ನಿಸಿದರು. ಪಂಚ ಗ್ಯಾರಂಟಿ ೋಷಣೆ ಮಾಡಿ ಅಧಿಕಾರಕ್ಕೆ ಬಂದಕೂಡಲೇ ಎಲ್ಲ ಭರವಸೆಗಳನ್ನೂ ಈಡೇರಿಸಿದ್ದೇವೆ. ಬಿಜೆಪಿಯವರು ನಿಮ್ಮ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿದ್ದರು. ಹಾಕಿದ್ದಾರಾ? ನಿಮ್ಮ ಆದಾಯ ದುಪ್ಪಟ್ಟು ಮಾಡಿದ್ದಾರಾ? ಅವರು ಬರೀ ಮಾತನಾಡುತ್ತಾರೆ? ನಾವು ಮಾತಿನಂತೆ ನಡೆದುಕೊಂಡಿದ್ದೇವೆ ಎಂದು ಶಿವಕುಮಾರ್ ಹೇಳಿದರು.

ರೆಡ್ಡಿಗೆ ಮುಜರಾಯಿ ಖಾತೆ ನೀಡಲು ಸಿದ್ಧ:

ನಿಮ್ಮ ಬೇಡಿಕೆಯಂತೆ ರಾಮಲಿಂಗಾ ರೆಡ್ಡಿ ಅವರಿಗೆ ಮುಜರಾಯಿ ಇಲಾಖೆ ನೀಡಲು ಸಿದ್ಧ. ಅವರಿಗೆ ಬೆಂಗಳೂರು ಖಾತೆ ನೀಡುವ ಆಸೆ ಇತ್ತು. ಆದರೆ ಪಕ್ಷ ತೀರ್ಮಾನ ಮಾಡಿತ್ತು. ಬೇರೆ ಯಾವುದಾದರೂ ಖಾತೆ ಕೇಳಿ ಅದನ್ನೂ ಕೊಡುತ್ತೇನೆ. ನಿಮ್ಮ ಬೇಡಿಕೆ ವಿಚಾರ ಅವರೊಂದಿಗೆ ಚರ್ಚೆ ಮಾಡುವೆ ಎಂದು ಸಿಎಂ ಭರವಸೆ ನೀಡಿದರು.
ರಾಮಲಿಂಗಾರೆಡ್ಡಿ ಅವರು ಮುಜರಾಯಿ ಸಚಿವರಾಗಿದ್ದ ಸಮಯದಲ್ಲಿ ಅರ್ಚಕರ, ದೇವಸ್ಥಾನಗಳ ಪರವಾಗಿ ಕೈಗೊಂಡ ಕ್ರಮಗಳನ್ನು ಶ್ಲಾಘಿಸಿ ಸಂಘವು ಕರ್ನಾಟಕ ರಾಜ್ಯ ‘ಅರ್ಚಕರ ಕಣ್ಮಣಿ’ ಪ್ರಶಸ್ತಿ ನೀಡಿ ಅಭಿನಂದನೆ ಸಲ್ಲಿಸಿತು. ಚಾಮುಂಡೇಶ್ವರಿ ದೇಗುಲದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್, ಸಂಘದ ರಾಜ್ಯಾಧ್ಯಕ್ಷ ವಿದ್ವಾನ್ ಶ್ರೀವತ್ಸ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಿಎಂಗೆ ಅರ್ಚಕರ ಮನವಿ

ಅರ್ಚಕರಿಗೆ ತಿಂಗಳಿಗೆ 10 ಸಾವಿರ ರೂ. ಗೌರವಧನ ನೀಡಬೇಕು. 5,000 ಪಿಂಚಣಿ ನೀಡಬೇಕು. ತಸ್ತೀಕ್ ಮೊತ್ತವನ್ನು ವಾರ್ಷಿಕ 72 ಸಾವಿರ ರೂ. ಇರುವುದರನ್ನು 1.20 ಲಕ್ಷ ರೂ.ಗೆ ಹೆಚ್ಚಿಸಬೇಕು. ವಿದ್ಯಾನಿಧಿ ಹೆಚ್ಚಿಸಬೇಕು. ಅರ್ಚಕರು ಮರಣಹೊಂದಿದರೆ ₹2 ಲಕ್ಷದ ಬದಲು 5 ಲಕ್ಷ ರೂ. ಪರಿಹಾರ ನೀಡಬೇಕು. ದೇವಾಲಯಗಳ ಜೀರ್ಣೋದ್ಧಾರಕ್ಕೆ ಅನುದಾನ ಒದಗಿಸಬೇಕು. ಅರ್ಚಕರಿಗೆ ವಸತಿ ನೀಡಬೇಕು. ಅರ್ಚಕರು ಉಳುಮೆ ಮಾಡುವ ಭೂಮಿಯನ್ನು ಅವರ ಹೆಸರಿಗೆ ಮಾಡಿಕೊಡಬೇಕು. ಧಾರ್ಮಿಕ ಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯರನ್ನು ಆಯ್ಕೆ ಮಾಡಬೇಕು ಎಂದು ಸಂಘದಿಂದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯದಲ್ಲಿ ಉತ್ತಮ ಮಳೆ, ಬೆಳೆಗಾಗಿ ದೇವಾಲಯಗಳಲ್ಲಿ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ ಮಾಡುವಂತೆ ಸೂಚಿಸಿ ಸರ್ಕಾರ ಎಲ್ಲ 36 ಸಾವಿರ ದೇವಾಲಯಗಳಿಗೂ ಸುತ್ತೋಲೆ ಹೊರಡಿಸಬೇಕು.

— ರಾಜಗುರು ಬಿ.ಎಸ್. ದ್ವಾರಕನಾಥ್, ಧಾರ್ಮಿಕ ಪರಿಷತ್ತಿನ ಸದಸ್ಯರು