ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​ 
ರಾಜ್ಯ

ಭಾಷಣ ವಿವಾದ: ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳುವಂತೆ ರಾಷ್ಟ್ರಪತಿಗಳಿಗೆ ಪತ್ರ ಬರೆಯಲು ಸರ್ಕಾರ ಚಿಂತನೆ! Thawar Chand Gehlot

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಕಾಂಗ್ರೆಸ್​ ಸರ್ಕಾರ ಮತ್ತು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಡುವೆ ಭಾಷಣ ಜಟಾಪಟಿ
  • ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡದೇ ಸದನದಿಂದ ಹೊರ ನಡೆದ ರಾಜ್ಯಪಾಲ
  • ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾದ ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್ ಅವರ ನಡೆ
  • ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳುವಂತೆ ರಾಷ್ಟ್ರಪತಿಗಳಿಗೆ ಪತ್ರ ಬರೆಯಲು ಸರ್ಕಾರದ ಚಿಂತನೆ
ಬೆಂಗಳೂರು: ವಿಧಾನಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡದೇ ಸದನದಿಂದ ಹೊರ ನಡೆದ ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​ ( Thawar Chand Gehlot ) ಅವರ ನಡೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ರಾಜ್ಯ ಸರ್ಕಾರದಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಬೆಳವಣಿಗೆಯ ಬೆನ್ನಲ್ಲೇ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳುವಂತೆ ರಾಷ್ಟ್ರಪತಿಗಳಿಗೆ ಪತ್ರ ಬರೆಯುವ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ. ಅಲ್ಲದೆ, ರಾಜ್ಯಪಾಲರ ವಿರುದ್ಧ ಗೌರ್ನರ್ ಗೋ ಬ್ಯಾಕ್ ಅಭಿಯಾನ ನಡೆಸುವ ಬಗ್ಗೆಯೂ ಚರ್ಚೆಯಾಗಿದೆ.
ಇಂದಿನ ಪ್ರಸಂಗವನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು. ಅಷ್ಟು ಸುಲಭವಾಗಿ ಈ ವಿಷಯವನ್ನು ಬಿಡಬಾರದು. ರಾಜ್ಯಪಾಲರೇ ಸಂಘರ್ಷ ಶುರು ಮಾಡಿದ್ದಾರೆ. ಇಲ್ಲಿ ಅವರಿಂದಲೇ ಕಾರ್ಯಲೋಪಗಳಾಗಿವೆ ಎಂದಿರುವ ಕಾಂಗ್ರೆಸ್​ ಸರ್ಕಾರ, ರಾಜ್ಯಪಾಲರ ವಿರುದ್ಧ ಗೋ ಬ್ಯಾಕ್ ನಿರ್ಣಯ ಮಂಡಿಸಲು ಸಂಪುಟ ಸಭೆಯಲ್ಲಿ ಸಮಾಲೋಚನೆ ನಡೆಸಿದೆ.

ಭಾಷಣ ನಿರಾಕರಿಸಿದ್ದೇಕೆ?

ಜಂಟಿ ಅಧಿವೇಶನದಲ್ಲಿ ಮಾತನಾಡಲು ರಾಜ್ಯ ಸರ್ಕಾರ ಸಿದ್ಧಪಡಿಸಿದ್ದ ರಾಜ್ಯಪಾಲರ ಭಾಷಣದಲ್ಲಿ ಸರ್ಕಾರದ ಸಾಧನೆಗಳಿಗಿಂತ ಹೆಚ್ಚಾಗಿ, ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಹಾಗೂ ಆರೋಪಗಳಿಗೆ ಸೀಮಿತವಾಗಿದೆ ಎಂಬುದು ರಾಜಭವನದ ವಾದ. ಈ ಕಾರಣಕ್ಕೆ ಭಾಷಣ ಓದಲು ರಾಜ್ಯಪಾಲರು ನಿರಾಕರಿಸಿದ್ದಾರೆ ಎಂಬ ಸುದ್ದಿ ನಿನ್ನೆಯೇ ಹೊರಬಿತ್ತು. ಇದಾದ ಬಳಿಕ ಕಾಂಗ್ರೆಸ್​ನ ಒಂದು ನಿಯೋಗ ರಾಜಭವನಕ್ಕೆ ತೆರಳಿ ಮನವೊಲಿಸಲು ಪ್ರಯತ್ನಿಸಿತು.

ಒಂದು ನಿಮಿಷದಲ್ಲೇ ಭಾಷಣ ಮುಕ್ತಾಯ

ಅಂತಿಮವಾಗಿ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಇಂದು ವಿಧಾನಸೌಧಕ್ಕೆ ಆಗಮಿಸಿದರು. ವಿಧಾನಸೌಧಕ್ಕೆ ಬರುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾನೂನು ಸಚಿವ ಎಚ್‌.ಕೆ ಪಾಟೀಲ್‌ ಸೇರಿ ಇತರ ಸಚಿವರು ಹೂಗುಚ್ಛ ನೀಡಿ ಸ್ವಾಗತಿಸಿದರು. ಬಳಿಕ ರೆಡ್ ಕಾರ್ಪೆಟ್ ಮೂಲಕ ವಿಧಾನಸೌಧದೊಳಗೆ ಕರೆದೊಯ್ದರು. ರಾಜ್ಯಪಾಲರು ತಮ್ಮ ಪೀಠದ ಬಳಿ ನಿಲ್ಲುತ್ತಿದ್ದಂತೆ, ರಾಷ್ಟ್ರಗೀತೆ ನುಡಿಸಲಾಯಿತು. ಬಳಿಕ, ಸಾಂಪ್ರದಾಯಿಕವಾಗಿ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಬೇಕಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು, ಆರ್ಥಿಕ ಸ್ಥಿತಿಗತಿಗಳನ್ನು ನಿಭಾಯಿಸುವಲ್ಲಿ ನನ್ನ ಸರ್ಕಾರ ಬದ್ಧವಾಗಿದೆ ಎಂದು ಕೇವಲ ಒಂದೆರಡು ವಾಕ್ಯಗಳಲ್ಲಿ ಮಾತನಾಡಿ ಶುಭಾಶಯ ತಿಳಿಸಿದರು. ಸರ್ಕಾರ ಕೊಟ್ಟ ಭಾಷಣದ ಪ್ರತಿ ಓದದೆ ತೆರಳಿದರು. ಆಡಳಿತ ಪಕ್ಷದ ಶಾಸಕರು ವಿರೋಧ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದರು. ಕೇವಲ ಒಂದು ನಿಮಿಷದಲ್ಲಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿ ಸದನದಿಂದ ಹೊರನಡೆದಿರುವುದು ಈಗ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ರಾಜ್ಯಪಾಲರ ವಿರುದ್ಧ ಕ್ರಮ ತೆಗೆದುಕೊಳ್ಳಬಹುದಾ?

ರಾಜ್ಯಪಾಲರು ಭಾಷಣ ಓದಲು ನಿರಾಕರಿಸಿದರೆ ಅವರ ಮೇಲೆ ಕಾನೂನು ಕ್ರಮ ಜರುಗಿಸಲು ಸಂವಿಧಾನದ 361ನೇ ವಿಧಿ ಅಡ್ಡಿಯಾಗುತ್ತದೆ. ಈ ವಿಧಿಯ ಅಡಿಯಲ್ಲಿ ರಾಜ್ಯಪಾಲರಿಗೆ ಅಧಿಕಾರಾವಧಿಯಲ್ಲಿ ಕಾನೂನು ರಕ್ಷಣೆ ಇರುತ್ತದೆ. ರಾಜ್ಯಪಾಲರ ಈ ನಡೆ ಸಂವಿಧಾನಾತ್ಮಕ ಬಿಕ್ಕಟ್ಟಿಗೆ ಕಾರಣವಾಗುತ್ತದೆಯೇ ಹೊರತು ಶಿಕ್ಷಾರ್ಹ ಅಪರಾಧವಾಗುವುದಿಲ್ಲ.
ಇತ್ತೀಚಿನ ವರ್ಷಗಳಲ್ಲಿ ರಾಜ್ಯಪಾಲರು ಸರ್ಕಾರದ ಭಾಷಣದಲ್ಲಿರುವ ಕೆಲವು ಅಂಶಗಳು "ತಪ್ಪು ಮಾಹಿತಿಯಿಂದ ಕೂಡಿದೆ" ಅಥವಾ "ಸಂವಿಧಾನ ವಿರೋಧಿಯಾಗಿದೆ" ಎಂದು ಹೇಳಿ ಆ ಭಾಗಗಳನ್ನು ಬಿಟ್ಟು ಓದಿದ ಅಥವಾ ಭಾಷಣವನ್ನೇ ಓದದೆ ಹೊರನಡೆದ ಘಟನೆಗಳು ನಡೆದಿವೆ. ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಕೇರಳ ಸರ್ಕಾರದಲ್ಲಿ ಇಂತಹ ಘಟನೆಗಳು ನಡೆದಿವೆ. ಈ ರೀತಿ ಆದಾಗ ಸರ್ಕಾರಗಳು ವಿಧಾನಸಭೆಯಲ್ಲಿ ರಾಜ್ಯಪಾಲರು ಬಿಟ್ಟುಬಿಟ್ಟ ಭಾಗಗಳನ್ನೂ ಸೇರಿಸಿ "ಮೂಲ ಭಾಷಣವನ್ನೇ" ಕಡತಕ್ಕೆ ಸೇರಿಸುವ ನಿರ್ಣಯವನ್ನು ಅಂಗೀಕರಿಸುತ್ತವೆ.
ಸಂವಿಧಾನದ 163ನೇ ವಿಧಿಯಂತೆ, ರಾಜ್ಯಪಾಲರು ಮಂತ್ರಿಮಂಡಲದ ಸಲಹೆ ಮತ್ತು ಸೂಚನೆಯ ಮೇರೆಗೆ ಕಾರ್ಯನಿರ್ವಹಿಸಬೇಕು. ಭಾರತವು ಬ್ರಿಟಿಷ್ ಸಂಸದೀಯ ವ್ಯವಸ್ಥೆಯನ್ನು ಅನುಸರಿಸುತ್ತಿರುವುದರಿಂದ, ಬ್ರಿಟಿಷ್ ರಾಜ/ರಾಣಿ ಹೇಗೆ ಸರ್ಕಾರ ನೀಡಿದ ಭಾಷಣವನ್ನೇ ಓದುತ್ತಾರೋ, ಅದೇ ರೀತಿ ರಾಜ್ಯಪಾಲರು ಕೂಡ ಸರ್ಕಾರದ ಭಾಷಣವನ್ನೇ ಓದಬೇಕು ಎಂಬುದು ನಿಯಮ ನಮ್ಮಲ್ಲಿ ಇದೆ.

ಹೈಕೋರ್ಟ್​ ತೀರ್ಪುಗಳೇನು?

ಇದೇ ರೀತಿಯ ವಿವಾದ ಹಿಂದೊಮ್ಮೆ ಪಶ್ಚಿಮ ಬಂಗಾಳದಲ್ಲಿ ಸಂಭವಿಸಿತ್ತು. 1966ರಲ್ಲಿ ರಾಜ್ಯಪಾಲರ ವಿರುದ್ಧ ಪಶ್ವಿಮ ಬಂಗಾಳ ಸರ್ಕಾರ ಹೈಕೋರ್ಟ್​ ಮೆಟ್ಟಿಲೇರಿತ್ತು. ಈ ವೇಳೆ ವಿಚಾರಣೆ ನಡೆಸಿದ ಹೈಕೋರ್ಟ್​, ರಾಜ್ಯಪಾಲರು ಭಾಷಣ ಮಾಡಲು ನಿರಾಕರಿಸುವಂತಿಲ್ಲ, ಅದು ಅವರ ಸಂವಿಧಾನಾತ್ಮಕ ಕರ್ತವ್ಯ ಎಂದು ತೀರ್ಪಿನಲ್ಲಿ ಹೇಳಿತು. ಒಂದು ವೇಳೆ ರಾಜ್ಯಪಾಲರು ಭಾಷಣದ ಕೆಲವು ಭಾಗಗಳನ್ನು ಬಿಟ್ಟು ಓದಿದರೆ ಅಥವಾ ಓದದೆ ಹೊರನಡೆದರೆ, ಅದನ್ನು "ಕಾರ್ಯವಿಧಾನದ ಅನಿಯಮಿತತೆ" ಎಂದು ಪರಿಗಣಿಸಬಹುದೇ ಹೊರತು "ಅಕ್ರಮ" ಎಂದು ಕರೆಯಲಾಗದು ಎಂದು ನ್ಯಾಯಾಲಯ ಹೇಳಿದೆ. ಇದೇ ರೀತಿ, 1967ರಲ್ಲಿ ರಾಜಸ್ಥಾನ ಹೈಕೊರ್ಟ್​ ಕೂಡ ತೀರ್ಪು ನೀಡಿದೆ. ರಾಜ್ಯಪಾಲರು ಭಾಷಣದ ಕೆಲವು ಭಾಗಗಳನ್ನು ಓದಿದರೂ ಸಹ, ಇಡೀ ಭಾಷಣವನ್ನು ಓದಲಾಗಿದೆ ಎಂದು ಪರಿಗಣಿಸಬಹುದು ಎಂದು ತಿಳಿಸಿದೆ.