Government committed to providing quality education
ಎಂ.ಎನ್.ಕೋಟೆ: ಸರ್ಕಾರಿ ಶಾಲೆಗೆ ನೂರು ವರ್ಷ ತುಂಬಿದ ಸಂಭ್ರಮ ನೋಡಿದರೆ ಅತ್ಯಂತ ಖುಷಿ ನೀಡುತ್ತಿದೆ. ಹಾಗಾಗಿ ಮುಂದಿನ ವರ್ಷವೇ ಕೆಪಿಎಸ್ ಶಾಲೆಯನ್ನಾಗಿ ಮಾಡುತ್ತೇವೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಭರವಸೆ ನೀಡಿದರು.
ಗುಬ್ಬಿ ತಾಲೂಕಿನ ತ್ಯಾಗಟೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಶತಮಾನೋತ್ಸವ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ, 8.5 ಕೋಟಿ ರೂ. ಅನುದಾನವನ್ನು ಸರ್ಕಾರ ನೀಡುತ್ತಿದ್ದು, ಆ ಹಣದಲ್ಲಿ 19 ಕೊಠಡಿಗಳು ಸೇರಿದಂತೆ ಎಲ್ಲ ರೀತಿಯ ಮೂಲ ಸೌಲಭ್ಯ, ಶಿಕ್ಷಕರು, ಗುಣಮಟ್ಟದ ಶಿಕ್ಷಣವನ್ನು ನೀಡುವುದಕ್ಕೆ ಸರ್ಕಾರ ಬದ್ಧವಾಗಿದೆ. ಎಲ್ಕೆಜಿ, ಯುಕೆಜಿಯಿಂದ ಆರಂಭವಾಗಿ ದ್ವೀತಿಯ ಪಿಯುಸಿಯ ವರೆಗೂ ಒಂದೇ ಭಾಗದಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುವುದಕ್ಕಾಗಿ ಕೆಪಿಎಸ್ ಶಾಲೆಯನ್ನು ತ್ಯಾಗಟೂರು ಗ್ರಾಮಕ್ಕೆ ನೀಡುತ್ತಿದೆ ಎಂದರು.
ಹಿಂದುಳಿದ ಆಯೋಗದ ಮಾಜಿ ಸದಸ್ಯ ಯೋಗಾನಂದ್ ಕುಮಾರ್ ಮಾತನಾಡಿ, ನಮ್ಮೂರಿನ ಶಾಲೆಗೆ ನೂರು ವರ್ಷ ತುಂಬಿದ್ದು, ಹಳೆಯ ವಿದ್ಯಾರ್ಥಿಗಳು, ಈಗಿನ ವಿದ್ಯಾರ್ಥಿಗಳು, ಶಿಕ್ಷಕರು ಎಲ್ಲರೂ ಸೇರಿ ದೊಡ್ಡ ಮಟ್ಟದಲ್ಲಿ ಶತಮಾನೋತ್ಸವ ಆಚರಣೆ ಮಾಡುತ್ತಿದ್ದಾರೆ, ಇದು ಬೇರೆ ಶಾಲೆಗಳಿಗೆ ಮಾದರಿ ಹಾಗೂ ಆದರ್ಶವಾಗುತ್ತದೆ ಎಂದು ತಿಳಿಸಿದರು.
ಡಾ.ನಾಗಭೂಷಣ್ ಮಾತನಾಡಿ, ನಾವು ಸಹ ಆಸ್ಪತ್ರೆಯಿಂದ ಸುಗ್ಗನ ಪಾಳ್ಯ ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಕೆಲಸವನ್ನು ಮಾಡುತ್ತಿದ್ದು, ಕಳೆದ ಮೂರು ವರ್ಷದಿಂದ ದಾಖಲಾತಿಯಲ್ಲಿ ಹೆಚ್ಚಳವಾಗಿದೆ ಎಂದರು.
ಸದಸ್ಯರಾದ ಭವ್ಯ ಪರಮೇಶ್ ,ವಿಜಯಲಕ್ಷ್ಮೀ, ವಿಎಸ್ಎಸ್ಎನ್ ಅಧ್ಯಕ್ಷ ಚಿದ್ದಾನಂದ್, ಎಸ್ಡಿಎಂಸಿ ಅಧ್ಯಕ್ಷ ದಯಾನಂದ್, ಮುಖ್ಯಶಿಕ್ಷಕ ಇಂದ್ರಾಣಿ, ಶಿಕ್ಷಕರಾದ ಉಮೇಶ್, ವಂಧನಾ, ಉಮಾಮಹೇಶ್ ಮತ್ತಿತರರು ಇದ್ದರು.