ಮಂಗಳೂರಿನ ವೆನ್‌ಲಾಕ್ ಜಿಲ್ಲಾ ಆಸ್ಪತ್ರೆ
- * 5 ವರ್ಷಗಳ ಅವಧಿಗೆ ನೋಂದಣಿಗೆ ಆದೇಶ
ಬೆಂಗಳೂರು: ಮಂಗಳೂರಿನ ವೆನ್‌ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿ ಕೇಂದ್ರ, ಕಣ್ಣಿನ ಬ್ಯಾಂಕ್ ಮತ್ತು ಕಾರ್ನಿಯಾ ಮರುಪಡೆಯುವಿಕೆ ಕೇಂದ್ರ ಆರಂಭಿಸಲು ಅನುಮೋದನೆ ನೀಡಿ ಸರ್ಕಾರ ಅದೇಶ ಹೊರಡಿಸಿದೆ.
ಮಾನವ ಅಂಗಾಂಗಗಳು ಮತ್ತು ಅಂಗಾಂಶಗಳ ಕಸಿ ನಿಯಮಗಳಡಿ ವಿಧಿಸಲಾಗುವ ಎಲ್ಲ ಷರತ್ತು ಹಾಗೂ ನಿಬಂಧನೆಗಳ ಪಾಲನೆಗೆ ಒಳಪಟ್ಟಂತೆ 5 ವರ್ಷಗಳ ಅವಧಿಗೆ ಮೂತ್ರಪಿಂಡ ಕಸಿ ಕೇಂದ್ರ, ಕಣ್ಣಿನ ಬ್ಯಾಂಕ್ ಮತ್ತು ಕಾರ್ನಿಯಾ ಮರುಪಡೆಯುವಿಕೆ ಕೇಂದ್ರ ನೋಂದಣಿ ಅನುಮತಿ ನೀಡಲಾಗಿದೆ.
ನೋಂದಣಿಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದ ವೆನ್‌ಲಾಕ್ ಆಸ್ಪತ್ರೆಯ ಕೋರಿಕೆ ಮೇರೆಗೆ ಆರೋಗ್ಯ ಇಲಾಖೆ ಉಪ ನಿರ್ದೇಶಕರು ಆಸ್ಪತ್ರೆಯ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಸಮ್ಮತಿ ಸೂಚಿಸಿದ್ದಾರೆ. ಇದಲ್ಲದೆ ಸರ್ಕಾರದ ಆದೇಶದನ್ವಯ ತಜ್ಞರ ತಂಡವು ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿನ ಮೂಲಸೌಕರ್ಯ, ಶಸಚಿಕಿತ್ಸಾ ಕೊಠಡಿ, ಮಾನವ ಸಂಪನ್ಮೂಲದೊಂದಿಗೆ ಅಗತ್ಯ ವೈದ್ಯಕೀಯ ಉಪಕರಣಗಳು, ಸಂಪೂರ್ಣ ಸುಸಜ್ಜಿತ ಪ್ರಯೋಗಾಲಯ ಸೌಲಭ್ಯಗಳನ್ನು ಒಳಗೊಂಡ ತುರ್ತು ನಿಗಾ ಘಟಕ, ಕರ್ನಾಟಕ ಖಾಸಗಿ ವೈದ್ಯಕೀಯ ಸ್ಥಾಪನೆ ಕಾಯ್ದೆ (ಕೆಪಿಎಂಇ), ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿಶಾಮಕ ಸುರಕ್ಷತಾ ಕ್ಲಿಯರೆನ್ಸ್ ಪ್ರಮಾಣಪತ್ರ, ಪರವಾನಗಿ ಇತ್ಯಾದಿಯನ್ನು ಪರಿಶೀಲಿಸಿ ನೋಂದಣಿಗೆ ಯೋಗ್ಯವಾಗಿದೆ ಎಂದು ತಿಳಿಸಿದ್ದರು. ಅದರಂತೆ ಕಸಿ ಕೇಂದ್ರ, ಕಣ್ಣಿನ ಬ್ಯಾಂಕ್ ಆರಂಭಿಸಲು ಆಸ್ಪತ್ರೆಗೆ ಅನುಮತಿ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ತಿಳಿಸಿದ್ದಾರೆ.