ವಿಜಯಪುರ ನಗರದಲ್ಲಿ ನಡೆದ ಗುತ್ತಿಗೆದಾರರ ಸಂಘದ ಭವನ ನಿರ್ಮಾಣದ ಭೂಮಿ ಪೂಜೆಯನ್ನು ಸಚಿವ ಸತೀಶ ಜಾರಕಿಹೊಳಿ ನೆರವೇರಿಸಿದರು. ಸಚಿವ ಎಂ.ಬಿ. ಪಾಟೀಲ, ಶಾಸಕ ವಿಠಲ ಕಟಕದೊಂಡ ಮತ್ತಿತರರಿದ್ದಾರೆ.
- ದೆಹಲಿಯಲ್ಲಿ ಐಎಎಸ್ ತರಬೇತಿಗಾಗಿ ಭವನ ನಿರ್ಮಾಣ
- ಕೃಷ್ಣಾ ಎಂದು ಹೆಸರು ಇರಿಸಲು ಸರ್ಕಾರದ ತೀರ್ಮಾನ
- ನವೆಂಬರ್‌ನಲ್ಲಿ ಭೂಮಿ ಪೂಜೆ ನೆರವೇರಿಸಲು ಸಿದ್ಧತೆ
- ಸೇತುವೆಗಳ ನಿರ್ಮಾಣಕ್ಕೆ 4 ಸಾವಿರ ಕೋಟಿ ಅನುದಾನ
- 200 ಕೋಟಿ ರೂ.ವೆಚ್ಚದಲ್ಲಿ 700 ಕಾಲು ಸಂಕ ನಿರ್ಮಾಣ
- ಎಸ್‌ಸಿ-ಎಸ್‌ಟಿ ಸೈಟ್‌ಗಳ ಮೂಲ ಸೌಕರ್ಯಕ್ಕೆ ಕ್ರಮ
ವಿಜಯಪುರ: ‘ಬಜೆಟ್ ಬೆಂಬಲ ಇಲ್ದೇ ಬಿಜೆಪಿ ಸರ್ಕಾರ ಅಂದಾಜು 12 ಸಾವಿರ ಕೋಟಿ ರೂಪಾಯಿ ಅನುದಾನ ನೀಡಿತು. ಆ ಮೂಲಕ ಸರ್ಕಾರ ಮತ್ತು ಗುತ್ತಿಗೆದಾರರನ್ನು ಸಂಕಷ್ಟಕ್ಕೆ ಸಿಲುಕಿಸಿತು. ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗಿನಿಂದ ಹಿಡಿದು ಈವರೆಗೆ ನಿರಂತರವಾಗಿ ಆ ಸಮಸ್ಯೆ ಪರಿಹಾರಕ್ಕೆ ಶ್ರಮಿಸಲಾಗುತ್ತಿದೆ. ಇದಕ್ಕೆ ಗುತ್ತಿಗೆದಾರರ ಸಹಕಾರವೂ ಅಗತ್ಯ. ಆದಷ್ಟು ಬೇಗ ಗುತ್ತಿಗೆದಾರರ ಬಿಲ್ ಚುಕ್ತಾ ಮಾಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಭರವಸೆ ನೀಡಿದರು.
ಇಲ್ಲಿನ ದರಬಾರ್ ಲೇಔಟ್‌ನಲ್ಲಿ ಭಾನುವಾರ ಗುತ್ತಿಗೆದಾರರ ಸಂಘದಿಂದ ಹಮ್ಮಿಕೊಂಡಿದ್ದ ಗುತ್ತಿಗೆದಾರರ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸದ್ಯ 8000 ಕೋಟಿ ಬಿಲ್ ಬಾಕಿ ಇದೆ. ಈ ಹಿಂದೆ ಬಿಜೆಪಿ ಸರ್ಕಾರ ಮಾಡಿದ ಅವೈಜ್ಞಾನಿಕ ನಿರ್ವಹಣೆಯಿಂದ ಸಮಸ್ಯೆಯಾಯಿತು. ಬಿಲ್ ಕೊಡಲು ತೊಂದರೆ ಆಯಿತು. ಹಿಂದೆ ಸರಿಯಾಗಿ ನಿಯಂತ್ರಣ ಮಾಡಿದ್ದರೆ ನಮಗೆ ತೊಂದರೆಯಾಗುತ್ತಿರಲಿಲ್ಲ. ಏನೋ ಮಾಡಲು ಹೋಗಿ ಸರ್ಕಾರ ಮತ್ತು ಗುತ್ತಿಗೆದಾರರನ್ನು ಇಕ್ಕಟ್ಟಿಗೆ ಸಿಲುಕಿಸುವ ಕೆಲಸ ಮಾಡಲಾಗಿದೆ. ಅದನ್ನು ಪರಿಹರಿಸಲು ನಿರಂತರ ಪ್ರಯತ್ನ ನಡೆದಿದೆ. ಗುತ್ತಿಗೆದಾರರ ಪರ ನಿಲ್ಲಬೇಕು, ರಕ್ಷಣೆ ಮಾಡಬೇಕೆಂದು ಸಿದ್ದರಾಮಯ್ಯ ಅವರ ಅವಧಿಯಲ್ಲಿ ಸಾಕಷ್ಟು ಅನುದಾನ ತರುವ ಪ್ರಯತ್ನ ನಡೆದಿದೆ. ಹೆಚ್ಚುವರಿ 2 ಸಾವಿರ ಕೋಟಿ ಇದ್ದು ಅದನ್ನು ಕೊಡಲು ಮೊನ್ನೆ ನಡೆಸ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.
ಸೇತುವೆ ನಿರ್ಮಾಣದ ದಾಖಲೆ
ರಾಜ್ಯದಲ್ಲಿ ಕಳೆದ 20 ವರ್ಷಗಳಿಂದ ಸೇತುಗೆ ಅನುದಾನ ನೀಡಿರಲಿಲ್ಲ. ನಮ್ಮ ಸರ್ಕಾರ ಕಳೆದ ವರ್ಷ 2 ಸಾವಿರ ಕೋಟಿ ಮತ್ತು ಈ ವರ್ಷ 2 ಸಾವಿರ ಕೋಟಿ ಸೇರಿ ಒಟ್ಟು 4000 ಕೋಟಿ ಅನುದಾನವನ್ನು ಸೇತುವೆ ನಿರ್ಮಾಣಕ್ಕೆ ನೀಡಿದೆ. ಹಳೆಯ ಮೈಸೂರು ಭಾಗದಲ್ಲಿ 750 ಸೇತುವೆ ನಿರ್ಮಾಣಕ್ಕೆ ಅನುದಾನ ಕೊಡಲಾಗಿದೆ. ಹಳೆಯ ಸೇತುವೆ ಶಿಥಿಲಾವಸ್ಥೆಯಲ್ಲಿವೆ. ಹೀಗಾಗಿ ಸೇತುವೆ ನಿರ್ಮಾಣ ಮತ್ತು ರಿಪೇರಿ ಅನಿವಾರ್ಯವಾಯಿತು. 100 ಕೋಟಿ ರೂ. ಅನುದಾನದಡಿ ಸುಮಾರು 200 ಸೇತುವೆ ರಿಪೇರಿ ಮಾಡಲಾಗಿದೆ. ಇದು ಲೋಕೋಪಯೋಗಿ ಇಲಾಖೆಯಲ್ಲಿಯೇ ದಾಖಲೆ ಎಂದರು.
200 ಕೋಟಿ ವೆಚ್ಚದಲ್ಲಿ 700 ಕಾಲು ಸಂಕ
ಕರಾವಳಿ ಭಾಗದಲ್ಲಿ ಕಾಲುಸಂಕಗಳಿಗೆ ಸಾಕಷ್ಟು ಬೇಡಿಕೆ ಇತ್ತು. ಮಳೆಗಾಲದಲ್ಲಿ ನಾಲ್ಕು ತಿಂಗಳು ಗ್ರಾಮಗಳ ಸಂಪರ್ಕವೇ ಕಡಿತಗೊಳ್ಳುತ್ತಿತ್ತು. ಅನೇಕ ಮಕ್ಕಳು ಕಟ್ಟಿಗೆ ಮತ್ತು ಹಗ್ಗ ಬಳಸಿ ನದಿ ದಾಟುವ ಸ್ಥಿತಿ ಇತ್ತು. ಹೀಗಾಗಿ ಕರಾವಳಿ ಭಾಗದಲ್ಲಿ, ಮಡಿಕೇರಿ, ಕಾರವಾರ, ಶಿವಮೊಗ್ಗ, ಉಡುಪಿ ಮತ್ತಿತರ ಕಡೆ 700 ಕಾಲು ಸಂಕ ನಿರ್ಮಿಸಲಾಗಿದೆ. ಅದಕ್ಕಾಗಿ ರೂ. 200 ಕೋಟಿ ಖರ್ಚು ಮಾಡಲಾಗಿದೆ. ಪ್ರತೀ ವರ್ಷ ಈ ಕಾಲು ಸಂಕ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ. ಕಳೆದ ವರ್ಷ 1500 ಮಾಡಲಾಗಿತ್ತು. ಮುಂದೆಯೂ ಮಾಡಲಾಗುವುದು ಎಂದರು.
ಕಳೆದ 20-30 ವರ್ಷಗಳಿಂದ ಎಸ್‌ಸಿ-ಎಸ್‌ಟಿಗಳಿಗೆ ಹಂಚಿಕೆ ಮಾಡಿದ ಸೈಟ್‌ಗಳಲ್ಲಿ ಮೂಲ ಸೌಲಭ್ಯಗಳೇ ಇರಲಿಲ್ಲ. ಹೀಗಾಗಿ ಎಸ್‌ಸಿಪಿ-ಟಿಎಸ್‌ಪಿಯಿಂದ 10 ಕಡೆ ಮೂಲ ಸೌಕರ್ಯ ಕಲ್ಪಿಸಲು ರೂ.20 ಕೋಟಿ ಖರ್ಚು ಮಾಡುತ್ತಿದ್ದೇವೆ ಎಂದು ಜಾರಕಿಹೊಳಿ ತಿಳಿಸಿದರು.
ದೇಹಲಿಯಲ್ಲಿ ಭವನ ನಿರ್ಮಾಣ
ಕರ್ನಾಟಕದವರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಐಎಎಸ್ ಆಗಬೇಕೆಂಬ ಕಾರಣಕ್ಕಾಗಿ ದೆಹಲಿಯಲ್ಲಿ ಸುಮಾರು 30 ಕೋಟಿ ವೆಚ್ಚದಲ್ಲಿ ಭವನ ನಿರ್ಮಿಸಲಾಗುತ್ತಿದೆ. ದೆಹಲಿ ಸರ್ಕಾರದಿಂದ ಜಾಗ ಪಡೆದು 80 ಕೋಟಿ ವೆಚ್ಚದಲ್ಲಿ 500 ವಿದ್ಯಾರ್ಥಿಗಳಿಗಾಗಿ ಭವನ ನಿರ್ಮಿಸಲಾಗುತ್ತಿದೆ. ಅದಕ್ಕೆ ‘ಕೃಷ್ಣ’ ಎಂದು ಹೆಸರು ಇಡಲು ತೀರ್ಮಾನಿಸಲಾಗಿದೆ. ಪ್ರತಿ ವಿಧಾನ ಸಭೆ ಕ್ಷೇತ್ರದಿಂದ ಇಬ್ಬರು ಹೋಗಲೇಬೇಕು. ಅದನ್ನು ಕಡ್ಡಾಯ ಮಾಡಲಾಗುತ್ತಿದೆ. ನವೆಂಬರ್‌ನಲ್ಲಿ ಭೂಮಿ ಪೂಜೆ ನೆರವೇರಿಸಲಾಗುತ್ತಿದ್ದು, ಲೋಕೋಪಯೋಗಿ ಇಲಾಖೆಯೇ ನಿರ್ವಹಣೆ ಮಾಡುತ್ತದೆ ಎಂದ ಜಾರಕಿಹೊಳಿ ಅವರು ರಾಜ್ಯದಲ್ಲಿ ಸಾಕಷ್ಟು ಐಬಿ, ವಕೀಲರ ಸಂಘದ ಬೋರ್ಡ್‌ಗಳನ್ನೂ ನಿರ್ಮಿಸಲಾಗುತ್ತಿದೆ ಎಂದರು.
ಇನ್ನು ರಸ್ತೆಗಳ ಸುರಕ್ಷತೆಗಾಗಿ 1500 ಮೈಲಿಗೂಲಿ ನೇಮಕ ಮಾಡಲಾಗುತ್ತಿದೆ. ಪ್ರತಿ 30 ಕಿಮೀಗೆ ಒಬ್ಬ ಮೈಲಿಗೂಲಿ ನೇಮಿಸುವ ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ಸ್ವಲ್ಪ ರಸ್ತೆ ಹಾಳಾದಾಗಲೇ ರಿಪೇರಿ ಮಾಡಿದರೆ ದೊಡ್ಡ ಪ್ರಮಾಣದ ಹಾನಿ ತಪ್ಪಿಸಲು ಸಹಾಯವಾಗಲಿದೆ ಎಂದರು.
ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಡಾ.ಎಂ.ಬಿ. ಪಾಟೀಲ, ಶಾಸಕರಾದ ವಿಠಲ ಕಟಕದೊಂಡ, ರಾಜುಗೌಡ ಪಾಟೀಲ, ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರ್. ಮಂಜುನಾಥ ಮತ್ತಿತರರಿದ್ದರು.
ಮಾಧ್ಯಮ ಸಲಹೆಗಾರನಿಲ್ಲದ ಏಕೈಕ ಮಂತ್ರಿ
ಲೋಕೋಪಯೋಗಿ ಇಲಾಖೆಯಿಂದ ದಾಖಲೆ ಪ್ರಮಾಣದಲ್ಲಿ ಕೈಗೊಂಡ ಕಾಮಗಾರಿಗಳನ್ನು ಇಟ್ಟುಕೊಡು ಸಾಕಷ್ಟು ಪ್ರಚಾರ ಪಡೆಯಬೇಕಿತ್ತು. ಆದರೆ, ಕೆಲಸಗಳೇ ಹೇಳಲಿ ಎಂದು ನಾವು ಪ್ರಚಾರ ತೆಗೆದುಕೊಳ್ಳಲು ಹೋಗಲ್ಲ. ಮಾಧ್ಯಮ ಸಲಹೆಗಾರ ಇಲ್ಲದೇ ಇರುವ ಮಂತ್ರಿ ದೇಶದಲ್ಲಿ ಯಾರಾದರೂ ಇದ್ದರೆ ಅದು ನಾನೊಬ್ಬನೇ ಎಂದು ಸತೀಶ ಜಾರಕಿಹೊಳಿ ಮಾರ್ಮಿಕವಾಗಿ ನುಡಿದರು.
ಆದರೂ ಇಷ್ಟೆಲ್ಲ ಪ್ರಚಾರ ಆಗುತ್ತಿದೆ. ಕೆಲಸ ಮಾತ್ರ ಆಗುತ್ತದೆ. ಯಾರೋ ಫೋಟೊ ತೆಗೆಯುತ್ತಾರೆ, ಯಾರೋ ಬರೆಯುತ್ತಾರೆ. ಅವರೇ ಲೇಖನ ಪ್ರಕಟಿಸುತ್ತಾರೆ ಎಂದರು.