ರಾಜ್ಯ

ಮಾರ್ಚ್ 29 ಮತ್ತು 30ರಂದು ಗೋರ ಚಿಂಚೋಳಿ ಶ್ರೀ ಮಹಾದೇವ ಜಾತ್ರಾ ಮಹೋತ್ಸವ

ಭಾಲ್ಕಿ : ತಾಲೂಕಿನ ಗೋರ ಚಿಂಚೋಳಿ ಗ್ರಾಮದ ಶ್ರೀ ಮಹಾದೇವ ಅವರ ಜಾತ್ರಾ ಮಹೋತ್ಸವ ಮಾರ್ಚ್ 29 ಮತ್ತು 30ರಂದು ಆಯೋಜಿಸಲಾಗಿದೆ ಎಂದು ದೇವಸ್ಥಾನದ ಅಧ್ಯಕ್ಷ ವಿಶ್ವನಾಥ ಧನಸೂರೆ ತಿಳಿಸಿದ್ದಾರೆ.
ಜಾತ್ರಾ ಮಹೋತ್ಸವದ ಅಂಗವಾಗಿ ಮಾರ್ಚ್ 29 ರಂದು ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಮಹಾದೇವ ಅಭಿಷೇಕ, ಹೋಮ, ಹವನ ಕಾರ್ಯಕ್ರಮ ಜರುಗುತ್ತವೆ. ಅಂದು ಸಂಜೆ 4 ಗಂಟೆಯಿಂದ ಗ್ರಾಮದ ಶ್ರೀ ಸಿದ್ಧರಾಮೇಶ್ವರ ಮಠದಿಂದ ಶ್ರೀ ಮಹಾದೇವ ದೇವಸ್ಥಾನದವರೆಗೆ ಪಲ್ಲಕ್ಕಿ ಉತ್ಸವ ಮತ್ತು ಬೃಹತ್ ಮೆರವಣಿಗೆ ನಡೆಯಲಿದೆ. ನಂತರ ದೇವಸ್ಥಾನದ ಆವರಣದಲ್ಲಿ ಅಗ್ನಿ ಪೂಜೆ ಮತ್ತು ಇಡೀ ರಾತ್ರಿ ಭಜನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಮಾರ್ಚ್ 30 ರಂದು ಸೋಮವಾರ ಮಧ್ಯಾಹ್ನ 12 ಗಂಟೆಯಿಂದ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅನ್ನ ದಾಸೋಹ ವ್ಯವಸ್ಥೆ ಮಾಡಲಾಗಿದೆ. ಅಂದು ಸಂಜೆ 5 ಗಂಟೆಗೆ ಶ್ರೀ ಮಹಾದೇವರ ರಥೋತ್ಸವ ಜರುಗಲಿದೆ. ಈ ಸಂದರ್ಭದಲ್ಲಿ ಪುರವಂತರ ಕುಣಿತ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮ ಸಹ ಆಯೋಜಿಸಲಾಗಿದೆ ಎಂದು ವಿಶ್ವನಾಥ ಧನಸೂರೆ ತಿಳಿಸಿದ್ದಾರೆ.