ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಕಾರು ಜಖಂಗೊಂಡಿರುವುದು.
ಸಿದ್ದಾಪುರ: ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗ-ಬಾಣಂಗಾಲ ಗ್ರಾಮದ ಹುಂಡಿಯಲ್ಲಿ ಇತ್ತೀಚೆಗೆ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಎರಡು ಕಾರುಗಳಿಗೆ ಕಸ ಹಾಗೂ ತ್ಯಾಜ್ಯ ಸಾಗಣೆ ಗೂಡ್ಸ್ ವಾಹನ ಡಿಕ್ಕಿ ಹೊಡೆದು ಜಖಂಗೊಳಿಸಿದೆ.
ಹೊರ ಜಿಲ್ಲೆಗಳಿಂದ ಕಸ ಮತ್ತು ತ್ಯಾಜ್ಯಗಳನ್ನು ಗೋಣಿಕೊಪ್ಪಲಿನಿಂದ ಹುಂಡಿ ಮಾರ್ಗವಾಗಿ ಮಂಗಳೂರಿನತ್ತ ತೆರಳುತ್ತಿದ್ದ ಗೂಡ್ಸ್ ವಾಹನ ನಿಯಂತ್ರಣ ತಪ್ಪಿ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ಡಿಕ್ಕಿ ಹೊಡೆದಿದೆ.
ಹುಂಡಿ ಗ್ರಾಮದ ನಿವಾಸಿ ಸೇಕೀರ್ ಅವರಿಗೆ ಸೇರಿದ ಕಾರು ಹಾಗೂ ನೆರೆಮನೆಯ ನಿವಾಸಿ ಮೊಹಮ್ಮದ್ ಅಪ್ಪಲ್ ಅವರಿಗೆ ಸೇರಿದ ಕಾರುಗಳು ಜಖಂಗೊಂಡಿವೆ.
ಘಟನೆಯ ಬಳಿಕ ಚಾಲಕ ವಾಹನ ನಿಲ್ಲಿಸದೇ ಪರಾರಿಯಾಗಿದ್ದಾನೆ. ಈ ಸಂಬಂಧ ಕಾರಿನ ಮಾಲೀಕ ಸೇಕೀರ್ ಅವರು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪೊಲೀಸರು ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ವೇಳೆ ಕಸ ಮತ್ತು ತ್ಯಾಜ್ಯ ವಾಹನ ಎನ್ನುವುದು ದೃಢಪಟ್ಟಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಾಹನ ಹಾಗೂ ಚಾಲಕನ ಪತ್ತೆಗೆ ಮುಂದಾಗಿದ್ದಾರೆ.