ಬಂದ್ ಹಿನ್ನೆಲೆಯಲ್ಲಿ ಬೇಲೂರು ಪಟ್ಟಣದಲ್ಲಿ ಅಂಗಡಿ ಮುಂಗಟ್ಟು ಮುಚ್ಚಿರುವುದು.
- ಸರ್ಕಾರದ ವಿರುದ್ಧ ಪ್ರಗತಿಪರ ಸಂಘಟನೆಗಳು ಕರೆ ನೀಡಿದ್ದ ಬೇಲೂರು ತಾಲೂಕು ಬಂದ್
- ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು
ಬೇಲೂರು; ಬೇಲೂರು ತಾಲೂಕನ್ನು ಬರ ಪೀಡಿತವೆಂದು ಘೋಷಿಸುವುದರ ಜತೆಗೆ ಕಾಡಾನೆಗಳ ಹಾವಳಿ ಮತ್ತು ಬಗರ್ ಹುಕುಂ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿ ಸರ್ಕಾರದ ವಿರುದ್ಧ ಪ್ರಗತಿಪರ ಸಂಘಟನೆಗಳು ಕರೆ ನೀಡಿದ್ದ ಬೇಲೂರು ತಾಲೂಕು ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಬಂದ್ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಆಸ್ಪತ್ರೆ, ಕ್ಲಿನಿಕ್ ಹೊರತು ಪಡಿಸಿದರೆ ಪಟ್ಟಣ ಸೇರಿದಂತೆ ತಾಲೂಕಿನ ಹಗರೆ, ಹಳೇಬೀಡು, ಅರೇಹಳ್ಳಿ, ಬಿಕ್ಕೋಡು, ಗೆಂಡೇಹಳ್ಳಿಯಲ್ಲೂ ವರ್ತಕರು, ಸ್ವಯಂ ಪ್ರೇರಣೆಯಿಂದ ಅಂಗಡಿ ಮುಂಗಟ್ಟು, ಹೋಟೆಲ್‌ಗಳನ್ನು ಮುಚ್ಚಿದ್ದರು. ಆಟೋ, ಟ್ಯಾಕ್ಸಿ ಚಾಲಕರು, ಪೆಟ್ರೋಲ್ ಬಂಕ್‌ಗಳು ಸಂಪೂರ್ಣವಾಗಿ ಬಂದ್ ಆಗಿದ್ದರಿಂದ ಬೆಳಗ್ಗಿನಿಂದಲೇ ಬಹುತೇಕ ವಾಣಿಜ್ಯ ಚಟುವಟಿಕೆ ಸ್ಥಗಿತಗೊಂಡಿದ್ದವು.
ಬಸ್ ಡಿಪೋದಿಂದ ಬೆರಳೆಣಿಕೆ ಬಸ್‌ಗಳು ರಸ್ತೆಗಿಳಿದರೂ ಪಟ್ಟಣದೊಳಗೆ ಬರಲು ಪ್ರತಿಭಟನಾಕಾರರು ಬಿಡದ ಕಾರಣ ವಿವಿಧ ಊರುಗಳಿಗೆ ತೆರಳಬೇಕಿದ್ದ ಪ್ರಯಾಣಿಕರು, ವಿದ್ಯಾರ್ಥಿಗಳು ಪರದಾಡಬೇಕಾಯಿತು. ಕೆಲವರು ನೆಹರು ನಗರಕ್ಕೆ ನಡೆದುಕೊಂಡು ಹೋಗಿ ಬಸ್ ಹತ್ತಿದರೆ, ಮತ್ತೆ ಕೆಲವರು ವಾಪಸ್ ಮನೆಗೆ ತೆರಳಿದರು.
ರೈತ ಸಂಘ ಹಾಗೂ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪಟ್ಟಣದ ಶ್ರಿ ಚನ್ನಕೇಶವಸ್ವಾಮಿ ದೇವಾಲಯದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಕೆಂಪೇಗೌಡ ವೃತ್ತ, ಬಸವೇಶ್ವರ ವೃತ್ತದ ಮೂಲಕ ನೆಹರು ನಗರದ ವೃತ್ತದಲ್ಲಿ ರಸ್ತೆ ಮಾನವ ಸರಪಳಿ ನಿರ್ಮಿಸಿದರು. 12 ಗಂಟೆಯಿಂದ ಸಂಜೆವರೆಗೂ ಓಡಾಡಲು ವಾಹನಗಳಿಗೆ ಅವಕಾಶವಾಗದ ಕಾರಣ ಕೆಲವರು ವಾಹನಗಳನ್ನು ವಾಪಸ್ ತೆಗೆದುಕೊಂಡು ಹೋದರೆ ಮತ್ತೆ ಕೆಲವರು ಅಡ್ಡ ದಾರಿಗಳ ಮೂಲಕ ತೆರಳಿದರು.
ದೂರದೂರುಗಳಿಂದ ಬೇಲೂರಿಗೆ ಆಗಮಿಸಿದ್ದ ಪ್ರಯಾಣಿಕರು, ಪ್ರವಾಸಿಗರಿಗೆ ಹೋಟೆಲ್ ಮತ್ತು ಬೇಕರಿಗಳು ಬಂದ್ ಆಗಿದ್ದ ಹಿನ್ನೆಲೆಯಲ್ಲಿ ಊಟ, ತಿಂಡಿ, ಅಗತ್ಯ ವಸ್ತುಗಳನ್ನು ಪಡೆಯಲು ಪರದಾಡುವಂತಾಯಿತು. ಬಸ್ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು ಬಸ್‌ಗಳಿಗಾಗಿ ಕಾಯುತ್ತ ಪರ್ಯಾಯ ವ್ಯವಸ್ಥೆಗೆ ತಡಕಾಡುವಂತ್ತಾಗಿತ್ತು. ಇಷ್ಟೆಲ್ಲ ಘಟನೆಗಳು ನಡೆದರೂ ಸಾರ್ವಜನಿಕರು ಪಕ್ಷಾತೀತವಾಗಿ ಬಂದ್‌ಗೆ ಬೆಂಬಲಿಸಿದರು.
ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಸ್ವಾಮೀಜಿ, ಪಟ್ಟಣ ಸಮೀಪ ಜಲಾಶಯವಿದ್ದರೂ ತಾಲೂಕಿನ ಜನ ಕುಡಿಯುವ ನೀರಿಗೆ ಮತ್ತು ಬೆಳೆ ಉಳಿಸಿಕೊಳ್ಳಲು ಹೋರಾಡುವ ಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ನೀರಿಲ್ಲದೆ ರೈತರ ಕೃಷಿ ಹಾಗೂ ಜಾನುವಾರುಗಳಿಗೆ ನೀರಿನ ಸಮಸ್ಯೆ ಎದುರಾಗಿದೆ. ಆದ್ದರಿಂದ ತಕ್ಷಣವೇ ಬೇಲೂರನ್ನು ಬರಪೀಡಿತ ತಾಲೂಕೆಂದು ಘೋಷಿಸಿ, ನೀರಾವರಿ ಸಮಸ್ಯೆ, ಕಾಡಾನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ಬಗರ್‌ಹುಕುಂ ಸಮಸ್ಯೆ ಸೇರಿದಂತೆ ರೈತರ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಮತ್ತು ಜನಪ್ರತಿನಿಧಿಗಳ ಮೇಲೆ ಒತ್ತಡ ತರಬೇಕಿದೆ. ರೈತರ ಸಮಸ್ಯೆಗಳನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು. ಈಗಾಗಲೇ ಸಚಿವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದಾಗ ಅವರು ಪರಿಶೀಲಿಸಲಾಗುವುದೆಂದು ತಿಳಿಸಿದ್ದಾರೆ. ಆದ್ದರಿಂದ ರೈತರು, ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ಹೋರಾಟಕ್ಕೆ ಮುಂದಾಗಬೇಕು ಎಂದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಳ್ಳೂರು ಸ್ವಾಮಿಗೌಡ ಮಾತನಾಡಿ, ತಾಲೂಕಿನಲ್ಲಿ ಎಲ್ಲಿ ನೋಡಿದರೂ ಬರದ ಛಾಯೆ ಕಾಣುತ್ತಿದೆ. ಕೆರೆ-ಕಟ್ಟೆಗಳು, ಬಾವಿ ಸೇರಿದಂತೆ ಜಲಮೂಲಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ತಾಲೂಕನ್ನು ಬರಪೀಡಿತ ತಾಲೂಕೆಂದು ಘೋಷಿಸಬೇಕು. ಸಂಕಷ್ಟಕ್ಕೊಳಗಾದ ರೈತರಿಗೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ತಾಲೂಕಿನ ಬಾಕಿ ಇರುವ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನ ಗೊಳಿಸಬೇಕು. ಕೆರೆ-ಕಟ್ಟೆಗಳ ಪುನಶ್ಚೇತನ, ಜಲಮೂಲಗಳ ಸಂರಕ್ಷಣೆ, ಕೃಷಿಗೆ ಶಾಶ್ವತ ನೀರಿನ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು. ಕಾಡಾನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಬಗರ್‌ಹುಕುಂ ಸಾಗುವಳಿ ಭೂಮಿ ಸಮಸ್ಯೆಯನ್ನು ಸರ್ಕಾರ ತ್ವರಿತವಾಗಿ ಪರಿಹರಿಸಬೇಕು. ಅರ್ಹ ರೈತರನ್ನು ಗುರುತಿಸಿ ನಿಯಮಾನುಸಾರ ಹಕ್ಕುಪತ್ರ ನೀಡುವ ಮೂಲಕ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದರು.
ರೈತ ಸಂಘದ ತಾಲೂಕು ಅಧ್ಯಕ್ಷ ಭೋಗ ಮಲ್ಲೇಶ್, ಕಾರ್ಯದರ್ಶಿ ಬಸವರಾಜ್, ಕರವೇ ಅಧ್ಯಕ್ಷ ಚಂದ್ರಶೇಖರ್, ಬೋಜೇಗೌಡ, ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಸೋಮೇಶ್.ಎಂ.ಕೆ.ಆರ್, ತಾಲೂಕು ಅಧ್ಯಕ್ಷ ಎಸ್.ಎಂ.ರಾಜು, ಕಾರ್ಯದರ್ಶಿ ಖಾದರ್, ಕಾಫಿ ಬೆಳೆಗಾರರ ಸಂಘದ ಸಿದ್ದೇಗೌಡ, ಅದ್ದೂರಿ ಕುಮಾರ್, ರಮೇಶ್ ಸುವರ್ಣ, ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ದ ವಸಂತಕುಮಾರ್, ಭದ್ರಯ್ಯ, ಉಮೇಶ್, ಡಾ.ರಾಜಕುಮಾರ್ ಸಂಘದ ಅಧ್ಯಕ್ಷ ತೀರ್ಥಂಕರ್, ಆಟೋ ಸಂಘದ ಅಧ್ಯಕ್ಷ ದೀಪು, ವೀರಶೈವ ಮುಖಂಡ ಅಡುಗೂರು ಬಸವರಾಜ್, ಲಕ್ಷ್ಮಿ ಮಂಗಳವಾದ್ಯ ಸೇವಾ ಟ್ರಸ್ಟ್ ಅಧ್ಯಕ್ಷ ನರಸಿಂಹಸ್ವಾಮಿ, ಛಾಯಾಗ್ರಾಹಕರ ಸಂಘ, ಮಾನವ ಹಕ್ಕು ಹೋರಾಟ ಸಮಿತಿ. ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು. ಪೊಲೀಸ್ ಇನ್ಸ್‌ಪೆಕ್ಟರ್ ರೇವಣ್ಣ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.